ಬೆಂಗಳೂರು, ಜುಲೈ 22: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ರಾಜ್ಯ ಸಚಿವ ಸಂಪುಟ ಸಭೆ ಮಾಡಲಾಗಿದೆ. ಒಟ್ಟು 17ಕ್ಕೂ ಹೆಚ್ಚು ವಿಷಯಗಳ ಮೇಲೆ ಇಂದಿನ ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಮೂರು ಪ್ರಮುಖ ವಿಚಾರಗಳ ಬಗ್ಗೆ ವಿಧಾನಸಭೆಯಲ್ಲಿ ನಿರ್ಣಯ ಕೈಗೊಳ್ಳಲು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ ತೀರ್ಮಾನ ವಿರೋಧಿಸಿ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಮೂರು ನಿರ್ಣಯಗಳಿಗೆ ಅನುಮೋದನೆ ನೀಡಿದ ಸಚಿವ ಸಂಪುಟ ಸಭೆ
- ನೀಟ್ ಪರೀಕ್ಷೆಯನ್ನು ವಿರೋಧಿಸಿ ನಿರ್ಣಯ
- ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರಗಳ ಮರು ವಿಂಗಡಣೆ ವಿರೋಧಿಸಿ ನಿರ್ಣಯ
- ಒನ್ ನೇಷನ್ ಒನ್ ಎಲೆಕ್ಷನ್ ತೀರ್ಮಾನಕ್ಕೂ ವಿರೋಧಿಸಿ ನಿರ್ಣಯ
ಕೇಂದ್ರದ 3 ವಿಚಾರಕ್ಕೆ ವಿರೋಧಿಸಿ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ಅನುಮೋದನೆ ನೀಡಲಾಗಿದ್ದು, ನಾಳೆ ವಿಧಾನಸಭೆಯಲ್ಲಿ 3 ನಿರ್ಣಯ ಮಂಡಿಸಲು ಕ್ಯಾಬಿನೆಟ್ ನಿರ್ಧರಿಸಿದೆ.
ದಿ ಗ್ರೇಟರ್ ಬೆಂಗಳೂರು ಗೌವರ್ನೆನ್ಸ್ ಬಿಲ್-2024 ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಗ್ರೇಟರ್ ಬೆಂಗಳೂರು ಅಥಾರಿಟಿ ಅಡಿ ವಿವಿಧ ಹಂತದಲ್ಲಿ ಅಧಿಕಾರ ವಿಕೇಂದ್ರೀಕರಣ ಮತ್ತು ಸಿಟಿ ಕಾರ್ಪೊರೇಷನ್ಗಳು ಬರಲಿವೆ. ಗ್ರೇಟರ್ ಬೆಂಗಳೂರು ಅಥಾರಿಟಿಗೆ ಮುಖ್ಯಮಂತ್ರಿ ಅಧ್ಯಕ್ಷರಾಗಿ ಇರಲಿದ್ದಾರೆ.
ಬೆಂಗಳೂರು ಮಹಾನಗರವನ್ನು 5 ವಿಭಾಗಗಳಾಗಿ ವಿಭಜಿಸುವ ವಿಧೇಯಕಕ್ಕೆ ಸಂಪುಟದಲ್ಲಿ ಅನುಮೋದನೆ ಸಿಕ್ಕಿದೆ. ಹಾಗಾಗಿ ವಿಧಾನಸಭೆಯಲ್ಲಿ ಬೆಂಗಳೂರು ವಿಭಜಿಸುವ ವಿಧೇಯಕ ಮಂಡನೆ ಆಗಲಿದೆ.
ರಾಜ್ಯದಲ್ಲಿ ಖಾಸಗಿ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ವಿಚಾರವಾಗಿ ಕೂಡ ಸಚಿವ ಸಂಪುಟ ಸಭೆಯಲ್ಲಿ ಅನೌಪಚಾರಿಕ ಚರ್ಚೆ ಆಗಿದ್ದು, ಸಿಎಂಗೆ ಕಾರ್ಮಿಕ ಇಲಾಖೆ ಸಚಿವ ಲಾಡ್ ಸಂಪೂರ್ಣ ವಿವರಣೆ ನೀಡಿದ್ದಾರೆ. ಅಗತ್ಯ ಮತ್ತು ಅನಿವಾರ್ಯತೆ ಹಿನ್ನೆಲೆಯಲ್ಲಿ ವಿವರಣೆ ನೀಡಿದ್ದು, ಕನ್ನಡಿಗರಿಗೆ ಹೇಗೆ ಅನುಕೂಲವಾಗುತ್ತದೆ ಅಂತಾ ಮನವರಿಕೆ ಮಾಡಿದ್ದಾರೆ.
ಸಚಿವ ಲಾಡ್ ಪ್ರಸ್ತಾಪಿಸಿದ ಬಹುತೇಕ ವಿಚಾರಗಳಿಗೆ ಸಿಎಂ ಸಮ್ಮತಿಸಿದ್ದು, ಮುಂದಿನ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲು ತೀರ್ಮಾನಿಸಲಾಗಿದೆ. ಸಚಿವರ ನಡುವೆ ಈ ಸಂಬಂಧ ಜಟಾಪಟಿ ವಿಚಾರವನ್ನು ಲಾಡ್ ಪ್ರಸ್ತಾಪಕ್ಕೆ ಎಂ.ಬಿ.ಪಾಟೀಲ್ ಮತ್ತು ಪ್ರಿಯಾಂಕ್ ಖರ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಸಚಿವರ ವಿರೋಧದ ನಡುವೆಯೂ ಸಿಎಂಗೆ ನೇರವಾಗಿ ಸಂತೋಷ್ ಲಾಡ್ ಮನವರಿಕೆ ಮಾಡಿದ್ದಾರೆ.
ಕಾರ್ಮಿಕರ ಕೆಲಸದ ಅವಧಿ 12 ರಿಂದ 14 ಗಂಟೆಗೆ ಹೆಚ್ಚಳ ವಿಚಾರ ಸಭೆಯಲ್ಲಿ ಅನೌಪಚಾರಿಕ ಚರ್ಚೆ ಆಗಿದ್ದು, ಇದಕ್ಕೂ ಕೂಡ ಸಂಪುಟ ಸಭೆಯಲ್ಲಿ ಸಚಿವರ ನಡುವೆ ಜಟಾಪಟಿ ಉಂಟಾಗಿದೆ. ಐಟಿ ಬಿಟಿ ಕಂಪನಿಗಳಿಂದಲೇ ಉದ್ಯೋಗದ ಅವಧಿಗೆ ಸಂಬಂಧಪಟ್ಟಂತೆ ಇನ್ನಷ್ಟು ಮಾಹಿತಿ ತರಿಸಿಕೊಳ್ಳಲು ನಿರ್ಧರಿಸಲಾಗಿದೆ.