ಬೆಂಗಳೂರು, (ಜುಲೈ 23) : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮದ ತನಿಖೆ ವೇಳೆ ಅಧಿಕಾರಿಗೆ ಒತ್ತಡ ಹೇರಿದ ಆರೋಪದ ಮೇಲೆ ಇಡಿ ವಿರುದ್ಧ ದಾಖಲಾಗಿದ್ದ ಎಫ್ಐಆರ್ಗೆ ಕೋರ್ಟ್ ತಡೆ ನೀಡಿದೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮದ ತನಿಖೆಯ ವೇಳೆ ಮಾಜಿ ಸಚಿವ ನಾಗೇಂದ್ರ ಅವರ ಹೆಸರು ಹೇಳುವಂತೆ ಒತ್ತಡ ಹೇರಿರುವ ಆರೋಪದ ಮೇಲೆ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ತಮ್ಮ ವಿರುದ್ಧ ಎಫ್ಐಆರ್ ದಾಖಲಿಸಿರುವುದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯದ (ಇಡಿ) ಇಬ್ಬರು ಅಧಿಕಾರಿಗಳು ಹೈಕೋರ್ಟ್ ಮೊರೆ ಹೋಗಿದ್ದು. ಇದೀಗ ಹೈಕೋರ್ಟ್, ಇಡಿ ಅಧಿಕಾರಿಗಳ ವಿರುದ್ಧದ ಎಫ್ಐಆರ್ಗೆ ತಡೆ ನೀಡಿ ಆದೇಶ ಹೊರಡಿಸಿದೆ.
ಮಾಜಿ ಸಚಿವ ಬಿ.ನಾಗೇಂದ್ರ ಒತ್ತಡದಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವುದಾಗಿ ಒಪ್ಪಿಕೊಳ್ಳುವಂತೆ ತಮ್ಮ ಮೇಲೆ ಇಡಿ ಅಧಿಕಾರಿಗಳು ಒತ್ತಡ ಹಾಕಿದ್ದಾರೆ ಹಾಗೂ, ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಕಲ್ಲೇಶ್.ಬಿ ದೂರು ನೀಡಿದ್ದರು. ಸೋಮವಾರವಷ್ಟೇ (ಜುಲೈ 22ರಂದು) ನಗರದ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯ ಪೊಲೀಸರು, ಇಡಿ ಅಧಿಕಾರಿಗಳಾದ ಕಣ್ಣನ್ ಹಾಗೂ ಮಿತ್ತಲ್ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಈ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಈ ಅಧಿಕಾರಿಗಳು ಮಂಗಳವಾರ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಇಂದು (ಜುಲೈ 23) ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಇಡಿ ಅಧಿಕಾರಿಗಳ ವಿರುದ್ಧದ ಎಫ್ಐಆರ್ಗೆ ತಡೆ ನೀಡಿ ಆದೇಶಿಸಿದೆ.
ಇಡಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ : ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಾಜಿ ಸಚಿವ ನಾಗೇಂದ್ರ ಹೆಸರೇಳುವಂತೆ ಇಡಿ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಇಂದು (ಜುಲೈ 23) ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು. ಈ ವೇಳೆ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳಾದ ಇಡಿ, ಸಿಬಿಐ, ಐಟಿ ದುರ್ಬಳಕೆ ಮಾಡಿಕೊಂಡಿದೆ ಎಂದು ಕೇಂದ್ರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ವೇಳೆ ನಾಗೇಂದ್ರ, ಸಿಎಂ ಹೆಸರು ಹೇಳುವಂತೆ ಇಡಿ ಅಧಿಕಾರಿಗಳು ಒತ್ತಡ ಹೇಳಿದ್ದಾರೆ. ಅಲ್ಲದೇ ನನಗೆ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಿಂದಿನ ಜಂಟಿ ನಿರ್ದೇಶಕ ಕಲ್ಲೇಶ್ ಅವರು ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಶೇಷಾದ್ರಿಪುರಂ ಠಾಣೆಯಲ್ಲಿ ದಾಖಲಾಗಿದ್ದ ಎನ್ಸಿಆರ್ (NCR) ವಿಲ್ಸನ್ ಗಾರ್ಡನ್ ಠಾಣೆಗೊಂಡು ಎಫ್ಐಆರ್ ದಾಖಲಾಗಿತ್ತು.
ಎಂ.ಜಿ.ರೋಡ್ ಬ್ಯಾಂಕ್ ಖಾತೆಗೆ ಅನುದಾನ ಜಮಾಮಾಡಲು ನಾಗೇಂದ್ರ, ಎಫ್ಡಿ ಇಲಾಖೆಯಿಂದ ಸೂಚನೆ ಇತ್ತೆಂದು ಒಪ್ಪಿಕೊಂಡ್ರೆ ಮಾತ್ರ ನಿನ್ನ ಬಿಡುತ್ತೇವೆ. ನಂತರ ಮಿತ್ತಲ್ ಎಂಬ ಅಧಿಕಾರಿ ಬಂದು ನನಗೆ ಬೈದಿದ್ದರು. ನೀನೊಬ್ಬ ಅಪರಾಧಿ, ನಿನ್ನನ್ನು ಈಗಲೇ ಅರೆಸ್ಟ್ ಮಾಡುತ್ತೇನೆ. ಇಡಿ ಬಗ್ಗೆ ನಿನಗೆ ಗೊತ್ತಿಲ, 2-3 ವರ್ಷ ನಿನಗೆ ಬೆಲ್ ಸಿಗಲ್ಲ. ನಿನ್ನ ಹೇಳಿಕೆಯನ್ನು ನಾನು ಓದಿದ್ದೇನೆ, ಪ್ರಯೋಜನಕ್ಕೆ ಬರಲ್ಲ. ನಿನಗೆ ಇಡಿ ಸಹಾಯ ಮಾಡಬೇಕೆಂದ್ರೆ ಬರೆದು ಕೊಡಬೇಕು. ಸಿಎಂ, ನಾಗೇಂದ್ರ ನಿರ್ದೇಶನದಂತೆ ಎಂ.ಜಿ.ರೋಡ್ ಖಾತೆಗೆ ಹಣವನ್ನು ವರ್ಗಾಯಿಸಿದ್ದೇನೆ ಎಂದು ಬರೆದುಕೊಡಲು ಒತ್ತಡ ಹೇರಿದ್ದಾರೆಂದು ಕಲ್ಲೇಶ್ ದೂರಿನಲ್ಲಿ ಉಲ್ಲೇಖಿಸಿದ್ದರು.