ಮನುಷ್ಯರ ನಡುವೆ ಜಾತಿ, ವರ್ಣಗಳ ಭೇದಗಳಿರುವಂತೆ ಮೂಕ ಪ್ರಾಣಿಗಳಲ್ಲಿ ಇದ್ಯಾವುದೇ ಬೇಧ-ಬಾವಗಳಿಲ್ಲ. ಅಷ್ಟೇ ಅಲ್ಲದೆ ಈ ಪ್ರಾಣಿಗಳಿಗೆ ಇರುವಷ್ಟು ಕರುಣೆ, ದಯೆ, ಮಾನವೀಯ ಮೌಲ್ಯ ಮನುಷ್ಯರಲ್ಲಿಲ್ಲ. ಹೌದು ಅದೆಷ್ಟೋ ಬಾರಿ ಮನುಷ್ಯರಿಗಿಂತ ಹೆಚ್ಚಾಗಿಯೇ ಒಂದು ಜಾತಿಯ ಪ್ರಾಣಿ ಇತರ ಜಾತಿಯ ಪ್ರಾಣಿಗಳಿಗೆ ಕಷ್ಟದಲ್ಲಿ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದದ್ದುಂಟು.
ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು, ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿ ಹಸಿವಿನಿಂದ ಕಂಗೆಟ್ಟಿದ್ದ ನಾಯಿ ಮರಿಗಳಿಗೆ ಗೋಮಾತೆ ಪ್ರೀತಿಯಿಂದ ಹಾಲುಣಿಸಿದೆ. ಈ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಹಸುವಿನ ಈ ಮಾತೃ ವಾತ್ಸಲ್ಯಕ್ಕೆ ನೆಟ್ಟಿಗರ ಮನಗೆದ್ದಿದೆ.
ಈ ಹೃದಯಸ್ಪರ್ಶಿ ಘಟನೆ ಕೆಲ ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಅಪಘಾತವೊಂದರಲ್ಲಿ ತಾಯಿಯನ್ನು ಕಳೆದುಕೊಂಡು ಅನಾಥವಾಗಿದ್ದ, ನಾಯಿ ಮರಿಗಳಿಗೆ ಹಸುವೊಂದು ಹಾಲುಣಿಸಿ ಮಾತೃ ಪ್ರೇಮವನ್ನು ನೀಡಿತ್ತು. ಈ ಕುರಿತ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್ ಆಗುತ್ತಿದೆ. TheFigen_ ಹೆಸರಿನ ಎಕ್ಸ್ ಖಾತೆಯಲ್ಲಿ ಈ ಕುರಿತ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದ್ದು, “ಅಪಘಾತದಲ್ಲಿ ತಾಯಿಯನ್ನು ಕಳೆದುಕೊಂಡ ನಾಯಿ ಮರಿಗಳನ್ನು ದತ್ತು ತೆಗೆದುಕೊಂಡ ಹಸು” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.
ವೈರಲ್ ವಿಡಿಯೋದಲ್ಲಿ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿ, ಹಸಿವಿನಿಂದ ನರಳಾಡುತ್ತಿದ್ದ ಮೂರರಿಂದ ನಾಲ್ಕು ನಾಯಿ ಮರಿಗಳಿಗೆ ಗೋ ಮಾತೆ ಹಾಲುಣಿಸುವ ಮೂಲಕ ಮಾತೃ ಪ್ರೇಮವನ್ನು ಮೆರೆದಂತಹದ ಹೃದಯಸ್ಪರ್ಶಿ ದೃಶ್ಯವನ್ನು ಕಾಣಬಹುದು.
ಜುಲೈ 22 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಪ್ರಕೃತಿಯಲ್ಲಿ ನಡೆಯುವ ಇಂತಹ ಅನಿರೀಕ್ಷಿತ ಬಂಧಗಳನ್ನು ನೋಡುವುದೇ ಒಂದು ಖುಷಿʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ದೃಶ್ಯ ಹೃದಯಸ್ಪರ್ಶಿಯಾಗಿದೆ. ತಾಯಿ ಪ್ರೀತಿಗೆ ಸಾರಿಸಾಟಿಯಾದುದು ಯಾವುದು ಇಲ್ಲʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.