Breaking
Tue. Dec 24th, 2024

ಐಟಿ ಕಂಪನಿ ಉದ್ಯೋಗಿಗಳಿಂದ 14 ಗಂಟೆ ಕೆಲಸ ನಿರ್ವಹಿಸುವ ನೂತನ ಪ್ರಸ್ತಾವದ ವಿರುದ್ಧ ಕರ್ನಾಟಕದ ಐಟಿ ವೃತ್ತಿಪರರು ತೀವ್ರ ಆಕ್ರೋಶ….!

ಬೆಂಗಳೂರು, ಜುಲೈ 24 : ಐಟಿ ಕಂಪನಿ ಉದ್ಯೋಗಿಗಳಿಂದ 14 ಗಂಟೆ ಕೆಲಸ ನಿರ್ವಹಿಸುವ ನೂತನ ಪ್ರಸ್ತಾವದ ವಿರುದ್ಧ ಕರ್ನಾಟಕದ ಐಟಿ ವೃತ್ತಿಪರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಕಾರ್ಮಿಕ ಸಚಿವರಿಗೆ ಸಾಮೂಹಿಕವಾಗಿ ಮೇಲ್ ಮಾಡುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ. ಮೇಲ್ ಮೂಲಕವೇ ಸರ್ಕಾರದ ವಿರುದ್ಧ ಸಮರ ಸಾರಲು ಐಟಿ ವೃತ್ತಿಪರರು ತೀರ್ಮಾನ ಮಾಡಿದ್ದಾರೆ.

ಮೇಲ್ ಮೂಲಕ ಸಿಎಂ ಹಾಗೂ ಕಾರ್ಮಿಕ ಸಚಿವರಿಗೆ ತಮಗಾಗುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಸಲು ಐಟಿ ವೃತ್ತಿಪರರು ನಿರ್ಧಾರ ಕೈಗೊಂಡಿದ್ದಾರೆ. ಪ್ರಸ್ತಾವನೆ ಜಾರಿಯಾದರೆ ತಮ್ಮ ಕುಟುಂಬಗಳಿಗಾಗುವ ಸಮಸ್ಯೆ, ಅಷ್ಟೇ ಅಲ್ಲದೆ ತಮಗೆ ಆಗಬಹುದಾದ ಸಮಸ್ಯೆಗಳ ಬಗ್ಗೆ ಮೇಲ್ ಸಂದೇಶದಲ್ಲಿ ಉಲ್ಲೇಖಿಸಲು ಕರ್ನಾಟಕ ರಾಜ್ಯ ಐಟಿ ಮತ್ತು ಐಟಿಇಎಸ್ ಎಂಪ್ಲಾಯೀಸ್ ಯೂನಿಯನ್ ಉದ್ಯೋಗಿಗಳಲ್ಲಿ ಮನವಿ ಮಾಡಿದೆ. I oppose the Increase in Working Hours (ಕೆಲಸದ ಅವಧಿ ವಿಸ್ತರಣೆಯನ್ನು ನಾನು ವಿರೋಧಿಸುತ್ತೇನೆ)’ ಎಂಬ ಬರಹದ ಜತೆ ಮೇಲ್ ಮಾಡಲು ಸಲಹೆ ನೀಡಲಾಗಿದೆ. 

ಈಗಾಗಲೇ ಕಾರ್ಮಿಕ ಸಚಿವ ಸಂತೋಷ್ ಲಾಡ್, ಸಿಎಂ ಸಿದ್ದರಾಮಯ್ಯಗೆ ಸಹಸ್ರಾರು ಸಂಖ್ಯೆಯಲ್ಲಿ ಮೇಲ್ ಸಂದೇಶಗಳು ಬಂದಿವೆ. ಸಾಮಾಜಿಕ ಜಾಲತಾಣ ಎಕ್ಸ್ ಹಾಗೂ ಫೇಸ್ಬುಕ್ನಲ್ಲಿ ಕೂಡ ಐಟಿ ನೌಕರರ ಕ್ಯಾಂಪೇನ್ ಟ್ರೆಂಡ್ ಆಗುತ್ತಿದೆ.

ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, 1961ಕ್ಕೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿರುವ ಬಗ್ಗೆ ಕೆಲವು ದಿನಗಳ ಹಿಂದೆ ವರದಿಯಾಗಿತ್ತು. ಜತೆಗೆ, ಬಿಪಿಓಗಳಲ್ಲಿ 12 ಗಂಟೆಗೂ ಅಧಿಕ ಕೆಲಸ ಮಾಡಲು ಅವಕಾಶ ನೀಡಬೇಕು. ಅಲ್ಲದೇ ನಿಯಮಿತವಾಗಿ ಮೂರು ತಿಂಗಳು 125 ಗಂಟೆ ಮೀರದಂತೆ ಕೆಲಸ ಇರಬೇಕು. ಐಟಿ ಉದ್ಯೋಗಿಗಳಿಗೆ 14 ಗಂಟೆ ಕೆಲಸದ ಅವಧಿ ನಿಗದಿಪಡಿಸಬೇಕು ಎಂದು ಮನವಿ ಸಲ್ಲಿಸಲಾಗಿತ್ತು.  ಇದರ ಬೆನ್ನಲ್ಲೇ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಐಟಿ-ಬಿಟಿ ಕಂಪನಿಗಳು ಉದ್ಯೋಗ ಕಡಿತಗೊಳಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿತ್ತು.

Related Post

Leave a Reply

Your email address will not be published. Required fields are marked *