ಶಿವಮೊಗ್ಗ : ಮದುವೆಯಾಗುವಂತೆ ಪೀಡಿಸುತ್ತಿದ್ದಳೆಂದು ಪ್ರಿಯತಮೆ ಮೇಲೆ ಹಲ್ಲೆ ನಡೆಸಿ ಪ್ರಯಕರ ಕೊಂದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ಯುವತಿ ಸೌಮ್ಯ ಕೊಲೆಯಾದವಳು. ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಯುವಕ ಸೃಜನ್ ಕೊಲೆ ಮಾಡಿದ ಆರೋಪಿ. ಇವರಿಬ್ಬರು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮದುವೆಯಾಗುವಂತೆ ಯುವತಿಯಿಂದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಪ್ರಿಯಕರ ಕೊಲೆ ಮಾಡಿದ್ದಾನೆಂದು ತಿಳಿದುಬಂದಿದೆ.
ತೀರ್ಥಹಳ್ಳಿಯಲ್ಲಿ ಫೈನಾನ್ಸ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ ಕೊಪ್ಪಗೆ ಹಣ ವಸೂಲಿಗೆ ಹೋಗುತ್ತಿದ್ದ. ಯುವತಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಳು. ಇಬ್ಬರ ನಡುವೆ ಪರಿಚಯವಾಗಿ ಪ್ರೀತಿಗೆ ತಿರುಗಿತ್ತು. ಮದುವೆಯಾಗುವುದಾಗಿ ನಂಬಿಸಿ ಯುವಕ ಮೋಸ ಮಾಡಿದ್ದಾನೆ ಎನ್ನಲಾಗಿದೆ. ಇಬ್ಬರದ್ದು ಬೇರೆ ಬೇರೆ ಸಮುದಾಯ ಆಗಿದ್ದರಿಂದ ಯುವಕನ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು.
ತೀರ್ಥಹಳ್ಳಿಗೆ ಹೋಗುತ್ತೇನೆ ಅಂತಾ ಜು.2 ರಂದು ಕೊಪ್ಪದಿಂದ ಯುವತಿ ಬಂದಿದ್ದಳು. ಯುವಕನ ಮನೆಗೆ ಕರೆದುಕೊಂಡು ಹೋಗುವಂತೆ ಒತ್ತಡ ಹಾಕಿದ್ದಳು. ನಮ್ಮ ಮನೆಗೆ ಈಗ ಬರಬೇಡ, ನಿಮ್ಮ ಮನೆಗೆ ವಾಪಸ್ ಹೋಗು ಎಂದು ಪ್ರಿಯಕರ ಹೇಳಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಯುವತಿ ಮೇಲೆ ಯುವಕ ಬಲವಾಗಿ ಹಲ್ಲೆ ಮಾಡಿದ್ದಾನೆ. ಹಲ್ಲೆಯ ಪರಿಣಾಮ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಇದರಿಂದ ಭಯಭೀತನಾದ ಯುವಕ, ಯುವತಿಯ ಶವವನ್ನು ಮುಂಬಾಳು ಬಳಿ ಹೂತಿಟ್ಟು ತೆರಳಿದ್ದ. ಇತ್ತ ತಮ್ಮ ಮಗಳು ನಾಪತ್ತೆಯಾಗಿದ್ದಾಳೆ ಎಂದು ಕೊಪ್ಪ ಪೊಲೀಸರಿಗೆ ಯುವತಿ ಪೋಷಕರು ದೂರು ನೀಡಿದ್ದರು. ಯುವಕನನ್ನು ಹುಡುಕಿಕೊಂಡು ಕೊಪ್ಪ ಪೊಲೀಸರು ಸಾಗರಕ್ಕೆ ಬಂದಿದ್ದರು. ಪೊಲೀಸರ ಎದುರು ಯುವತಿಯನ್ನು ಕೊಂದು ಹೂತಿಟ್ಟ ರಹಸ್ಯವನ್ನು ಯುವಕ ಬಿಚ್ಚಿಟ್ಟಿದ್ದಾನೆ. ಇಂದು ತಹಶೀಲ್ದಾರ್ ಸಮ್ಮುಖದಲ್ಲಿ ಶವ ಹೊರಗೆ ತೆಗೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸ್ಥಳದಲ್ಲಿ ಪೊಲೀಸರು ಮೊಕ್ಕಂ ಹೂಡಿದ್ದಾರೆ.