ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭವು ದೋಣಿ ಮೆರವಣಿಗೆಯೊಂದಿಗೆ ಪ್ರಾರಂಭವಾಗುತ್ತದೆ. ಸುಮಾರು ಮೂರು ಗಂಟೆಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಮೂರು ಸಾವಿರ ಕಲಾವಿದರು ಪ್ರದರ್ಶನವನ್ನು ಪ್ರಸ್ತುತಪಡಿಸಲಿದ್ದಾರೆ. ಮೇಲೆ ಹೇಳಿದಂತೆ ಉದ್ಘಾಟನಾ ಸಮಾರಂಭವು ಇಂದು ರಾತ್ರಿ 11 ರಿಂದ ಪ್ರಾರಂಭವಾಗಿ, ಮರುದಿನ ಜುಲೈ 27 ರ ರಾತ್ರಿ 2 ಗಂಟೆಗೆವರೆಗೆ ಮುಂದುವರಿಯಲ್ಲಿದೆ. ಈ ಮೂಲಕ ಈ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ ಸಿಗಲಿದೆ. ಇನ್ನು ಈ ಕ್ರೀಡಾಕೂಟದಲ್ಲಿ ಭಾರತದಿಂದ ಒಟ್ಟು 117 ಸ್ಪರ್ಧಿಗಳು ಭಾಗವಹಿಸಲಿದ್ದಾರೆ.
ಉದ್ಘಾಟನಾ ಸಮಾರಂಭಕ್ಕೆ ಮಳೆಯ ಆತಂಕ ಶುಕ್ರವಾರದಂದು ಹವಾಮಾನ ಇಲಾಖೆಯು ಮಳೆಯ ಮುನ್ಸೂಚನೆ ನೀಡಿರುವುದರಿಂದ ಸೀನ್ ನದಿಯಲ್ಲಿ ನಡೆಯಲ್ಲಿರುವ ಪ್ಯಾರಿಸ್ ಒಲಿಂಪಿಕ್ಸ್‌ನ ವಿಶಿಷ್ಟ ಉದ್ಘಾಟನಾ ಸಮಾರಂಭಕ್ಕೆ ಮಳೆ ಅಡ್ಡಿಪಡಿಸಬಹದು. ಫ್ರೆಂಚ್ ಹವಾಮಾನ ಇಲಾಖೆ Meteo ಫ್ರಾನ್ಸ್ ಶುಕ್ರವಾರ ಬೆಳಗ್ಗೆ ಮಳೆ ಮುನ್ಸೂಚನೆ ನೀಡಿದೆ. ಮಧ್ಯಾಹ್ನದ ವೇಳೆಗೆ ವಾತಾವರಣ ಶುಭ್ರವಾಗಿದ್ದರೂ ಉದ್ಘಾಟನಾ ಸಮಾರಂಭ ನಡೆಯುವ ಸಂಜೆ ವೇಳೆಗೆ ಮಳೆ ಬೀಳಬಹುದು. ಆದರೆ ಮಳೆ ಬಂದರೂ ನಿಗದಿಯಂತೆ ಉದ್ಘಾಟನಾ ಸಮಾರಂಭ ನಡೆಯಲಿದೆ.
ಮೆರವಣಿಗೆಯಲ್ಲೂ ವಿಭಿನ್ನತೆ ಸಾಮಾನ್ಯವಾಗಿ ಕ್ರೀಡಾಪಟುಗಳು ಸಾಂಪ್ರದಾಯಿಕವಾಗಿ ಕ್ರೀಡಾಂಗಣದಲ್ಲಿ ಮೆರವಣಿಗೆ ತೆರಳುತ್ತಾರೆ. ಆದರೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಥ್ಲೀಟ್ಗಳು 90 ಕ್ಕೂ ಹೆಚ್ಚು ದೋಣಿಗಳಲ್ಲಿ ಸೀನ್ ನದಿಯ ಮೇಲೆ ಆರು ಕಿಲೋಮೀಟರ್‌ಗಳಷ್ಟು ಪರೇಡ್ ಮಾಡುತ್ತಾರೆ. ಈ ಸಮಯದಲ್ಲಿ, ನೂರಾರು ಪ್ರೇಕ್ಷಕರು ನದಿಯ ದಡದಲ್ಲಿ ಉಪಸ್ಥಿತರಿದ್ದು ಅವರನ್ನು ಹುರಿದುಂಬಿಸುತ್ತಾರೆ. ಪ್ರತಿ ರಾಷ್ಟ್ರೀಯ ನಿಯೋಗದ ದೋಣಿಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ವೀಕ್ಷಕರು ತಮ್ಮ ನೆಚ್ಚಿನ ಆಟಗಾರರನ್ನು ತೀರ ಹತ್ತಿರದಿಂದ ವೀಕ್ಷಿಸಬಹುದು.
ಈ ಬಾರಿ ಲಿಂಗ ಸಮಾನತೆ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಲಿಂಗ ಸಮಾನತೆಗೆ ಹೆಚ್ಚು ಆಧ್ಯತೆ ನೀಡಲಾಗಿದೆ. ಅಂದರೆ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುತ್ತಿರುವ ಒಟ್ಟು 10,500 ಸ್ಪರ್ಧಿಗಳಲ್ಲಿ ಅರ್ಧದಷ್ಟು ಮಹಿಳೆಯರಿದ್ದಾರೆ. ಆಗಸ್ಟ್ 11 ರವರೆಗೆ ನಡೆಯುವ ಪ್ಯಾರಿಸ್ ಕ್ರೀಡಾಕೂಟದ ಸಾಂಪ್ರದಾಯಿಕ ಸಮಾರೋಪ ಸಮಾರಂಭವು ಪುರುಷರ ಮ್ಯಾರಥಾನ್ ಬದಲಿಗೆ ಮಹಿಳೆಯರ ಮ್ಯಾರಥಾನ್‌ನೊಂದಿಗೆ ನಡೆಯಲಿದೆ. ಈ ಬಾರಿ ನಡೆಯುತ್ತಿರುವ 32ಕ್ರೀಡೆಗಳ ಪೈಕಿ 28 ಕ್ರೀಡೆಗಳಲ್ಲಿ ಮಹಿಳೆಯರೂ ಭಾಗವಹಿಸಲಿದ್ದಾರೆ.