ಚಿತ್ರದುರ್ಗ ಆ.06: ಮಕ್ಕಳಿಗೆ ಎದೆ ಹಾಲುಣಿಸಲು ಇರುವ ಕೊರತೆಗಳನ್ನು ನೀಗಿಸಿ, ಎದೆಹಾಲುಣಿಸಲು ತಾಯಿಗೆ ಪ್ರೋತ್ಸಾಹ ನೀಡಿ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಬೊಮ್ಮೆನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಆರೋಗ್ಯ ಇಲಾಖೆ ಮತ್ತು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಪ್ರತಿ ವರ್ಷ ಆಗಸ್ಟ್ ತಿಂಗಳ ಮೊದಲನೇ ವಾರ ಆಚರಿಸಲಾಗುತ್ತದೆ. ತಾಯಿಯ ಎದೆ ಹಾಲು ಮಗುವಿಗೆ ಅಮೃತ ಧಾರೆ. ತಾಯಿ ಎದೆ ಹಾಲಿನಲ್ಲಿ ಅಪರಿಮಿತವಾದ ಪೋಷಕಾಂಶಗಳು ಅಡಗಿವೆ. ಮಗುವಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹುಟ್ಟಿದ ತಕ್ಷಣ ಮಗುವಿಗೆ ಎಷ್ಟು ಬೇಗಸಾಧ್ಯವೋ ಅಷ್ಟು ಬೇಗ ಎದೆ ಹಾಲನ್ನು ಕುಡಿಸಬೇಕು ಎಂದರು.
ಎದೆ ಹಾಲು ಕೊಡುವುದರಿಂದ ತಾಯಿ ಮತ್ತು ಮಗುವಿನ ಮಧ್ಯೆ ಉತ್ತಮವಾದ ಗಟ್ಟಿಯಾದ ಬಾಂಧವ್ಯ ಬೆಸೆಯುತ್ತದೆ. ಮಗು ಹುಟ್ಟಿದಾಗಿನಿಂದ 6 ತಿಂಗಳ ವಯಸ್ಸಾಗುವವರೆಗೂ ಎದೆಹಾಲನ್ನು ಬಿಟ್ಟು ಬೇರೆ ಏನನ್ನೂ ಕುಡಿಸಬಾರದು ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಎದೆಹಾಲುಣಿಸುವುದು ಒಂದು ಸಹಜ ಕ್ರಿಯೆಯಾಗಿದ್ದರೂ, ಸಾಂಸ್ಥಿಕ ಹೆರಿಗೆಗಳು ಗಣನೀಯವಾಗಿ ಹೆಚ್ಚಾಗಿದ್ದರೂ, ಎದೆಹಾಲು ಕುಡಿಸುವ ಪ್ರಮಾಣ, ಎದೆಹಾಲು ಮುಂದುವರೆಸುವ ಪ್ರಮಾಣ ಕಡಿಮೆಯಾಗಿರುವುದು ಸಮೀಕ್ಷೆಗಳಿಂದ ಕಂಡುಬAದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಆರು ತಿಂಗಳವರೆಗೆ ಕೇವಲ ಎದೆಹಾಲು ಉಣಿಸುವ ಪ್ರಮಾಣ ಅಲ್ಪ ಪ್ರಮಾಣದಲ್ಲಿ ಬದಲಾವಣೆಯಾಗಿದೆ. ಬಹಳಷ್ಟು ತಾಯಂದಿರು ಎದೆಹಾಲು ಉಣಿಸಲು ಪ್ರಾರಂಭಿಸಿದರೂ, ಕೆಲವೇ ತಿಂಗಳುಗಳಲ್ಲಿ ಇತರ ಹಾಲು ಮತ್ತು ಪಾನೀಯಗಳನ್ನು ನೀಡಲು ಪ್ರಾರಂಭಿಸುತ್ತಾರೆ ಇದರಿಂದ ಶಿಶು ವಿವಿಧ ಸೋಂಕುಗಳಿಗೆ ಗುರಿಯಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಮರಣವೂ ಸಂಭವಿಸಬಹುದು ಎಂದು ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಆರು ತಿಂಗಳವರೆಗೆ ಕೇವಲ ತಾಯಿಯ ಎದೆಹಾಲನ್ನು ಮಾತ್ರ ನೀಡಲು, ಎದೆಹಾಲಿನ ಸಂಪೂರ್ಣ ಲಾಭಗಳನ್ನು ಪಡೆಯಲು, ಮಗುವು ಸಂಪೂರ್ಣ ವಿಕಾಸ ಹೊಂದಲು, ಮಗುವನ್ನು ನ್ಯೂಮೋನಿಯಾ, ಅತಿಸಾರಭೇದಿ, ಅಪೌಷ್ಠಿಕತೆ ಇವುಗಳಿಂದ ತಡೆಗಟ್ಟಲು ಸ್ತನ್ಯಪಾನವು ಅತ್ಯಂತ ಮಹತ್ವಪೂರ್ಣ ಪಾತ್ರವನ್ನು ವಹಿಸುತ್ತದೆ ಎಂದರು.
“ವಿಶ್ವ ಸ್ತನ್ಯಪಾನ ಸಪ್ತಾಹವು ಸ್ತನ್ಯಪಾನ ಮಾಡುವ ತಾಯಂದಿರಿಗೆ ಅನುಕೂಲಕರ ವಾತಾವರಣವನ್ನು ಕಲ್ಪಿಸಲು ಆರಂಭಿಕ ಬಾಲ್ಯದ ಬೆಳವಣಿಗೆ ಹೆಚ್ಚಿಸಲು ಮತ್ತು ಪೌಷ್ಠಿಕಾಂಶ ಸುಧಾರಿಸಲು ಹಾಗೂ ಶಿಶು ಮರಣ ಪ್ರಮಾಣ ಕಡಿಮೆ ಮಾಡಲು ಸ್ತನ್ಯಪಾನದ ಅತ್ಯಮೂಲ್ಯ ಪಾತ್ರವು ಒತ್ತಿಹೇಳಲು ಪ್ರಮುಖ ವೇದಿಕೆಯಾಗಿದೆ. ಸ್ತನ್ಯಪಾನ ಅಭ್ಯಾಸಗಳ ಸುಧಾರಣೆಗಾಗಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಲೋಚನಮ್ಮ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳಾದ ಗಾಯತ್ರಿ, ಎಂ.ಅನುಸೂಯ, ಸಮುದಾಯ ಆರೋಗ್ಯಾಧಿಕಾರಿ ಶ್ರೀನಿವಾಸ್, ಆರೋಗ್ಯ ನಿರೀಕ್ಷಣಾಧಿಕಾರಿ ಪ್ರವೀಣ್, ಅಂಗನವಾಡಿ ಕಾರ್ಯಕರ್ತೆ ಟಿ.ಶಶಿಕಲಾ, ಆಶಾ ಕಾರ್ಯಕರ್ತೆಯರಾದ ನಾಗಮ್ಮ, ಮಂಜುಳಾ ಹಾಗೂ ಎದೆ ಹಾಲುಣಿಸುವ ತಾಯಂದಿರು ಇದ್ದರು.