ಚಿತ್ರದುರ್ಗ ಆ.06: ಕೀಟನಾಶಕ ಬಳಸುವಾಗ ಮುನ್ನೇಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕರು ಹಾಗೂ ಮುಖ್ಯಸ್ಥರಾದ ಆರ್.ರಜನೀಕಾಂತ ರೈತರಿಗೆ ಸಲಹೆ ನೀಡಿದರು.
ಮೊಳಕಾಲ್ಮೂರು ತಾಲ್ಲೂಕಿನ ರಾಂಪುರ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಈಚೆಗೆ ಬಬ್ಬೂರು ಫಾರಂ ಜಿಲ್ಲಾ ಕೃಷಿ ತರಬೇತಿ ಕೇಂದ್ರ ವತಿಯಿಂದ ರೈತಭಾಂದವರಿಗೆ ಬಿಜೋಪಚಾರ ಮತ್ತು ಸುರಕ್ಷಿತ ಪೀಡೆನಾಶಕ ಬಳಕೆ ಕುರಿತು ಪ್ರಾತ್ಯಕ್ಷಿಕೆ ಮಾಡುವ ಮೂಲಕ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತ ಬಾಂಧವರು ಕೀಟನಾಶಕ ಸಿಂಪರಣೆ ಮಾಡುವಾಗ ಯಾವಾಗಲೂ ಕನ್ನಡಕ, ಮುಖವಾಡ, ಕೈ ಹೊದಿಕೆ ಮತ್ತು ಸರಿಯಾದ ಬಟ್ಟೆಗಳನ್ನು ಧರಿಸಬೇಕು. ಸಿಂಪರಣೆಯ ನಂತರ ಸಾಬೂನಿನಿಂದ ಸ್ನಾನ ಮಾಡಿ ಬಟ್ಟೆಯನ್ನು ಬದಲಾಯಿಸಬೇಕು. ಸಿಂಪರಣಾ ಸಮಯದಲ್ಲಿ ಎಲೆ-ಅಡಿಕೆ ಜಗಿಯಬಾರದು ಮತ್ತು ಧೂಮಪಾನ ಮಾಡಬಾರದು ಮತ್ತು ತೊಂದರೆ ಉಂಟಾದಲ್ಲಿ ಸಿಂಪಡಿಸುವುದನ್ನು ನಿಲ್ಲಿಸಿ ವೈದ್ಯರ ಸಲಹೆ ಪಡೆಯಬೇಕು ಎಂದರು. ನಂತರ ಶೇಂಗಾ ಮತು ್ತತೊಗರಿ ಬೆಳೆಯಲ್ಲಿ ಅನುಸರಿಸಬೇಕಾದ ಬಿಜೋಪಚಾರದ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ರೈತರಿಗೆ ಮನದಟ್ಟು ಮಾಡಿದರು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಓಂಕಾರಪ್ಪ ಅವರು ಶೇಂಗಾ, ತೊಗರಿ, ಮೆಣಸಿನಕಾಯಿ, ತೆಂಗು ಮತ್ತು ಅಡಿಕೆ ಬೆಳೆಯ ಪ್ರಮುಖ ರೋಗ ಮತ್ತು ಕೀಟಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮೊಳಕಾಲ್ಮೂರು ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕ ಎನ್.ವಿ ಪ್ರಕಾಶ್, ಕೃಷಿ ಅಧಿಕಾರಿ ಸಿಕಂದರ್ ಭಾಷ, ಪ್ರಗತಿಪರ ರೈತ ವಿರೂಪಾಕ್ಷಪ್ಪ, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಹನುಮಂತರೆಡ್ಡಿ, ಆತ್ಮ ಸಿಬ್ಬಂದಿಯಾದ ನಿರಂಜನ್ ಮತ್ತು ಶಿವಣ್ಣ ಇದ್ದರು.