ಕೊಪ್ಪಳ, ಆಗಸ್ಟ್ 10 : ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಸೇನೆ ಸೇರುವ ಆಸಕ್ತರಿಗೆ ಮಾರ್ಗದರ್ಶ ನೀಡಲು ವಿಶೇಷ ಕಾರ್ಯಾಗಾರವನ್ನು ಆಗಸ್ಟ್ 12ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಹಾಗೂ ಉಪವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರ ವಿಶೇಷ ಕಾಳಜಿಯಿಂದ ಈ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, ಅಭ್ಯರ್ಥಿಗಳಿಗೆ ವೈದ್ಯಕೀಯ, ದೇಹದಾರ್ಡ್ಯತೆ ಪರೀಕ್ಷೆಗಳನ್ನು ಎದುರಿಸಬೇಕೆಂಬ ಬಗ್ಗೆ ಮತ್ತು ಅಗತ್ಯ ದಾಖಲೆಗಳ ಬಗ್ಗೆ ಮಾರ್ಗದರ್ಶನ, ದೇಹದಾರ್ಡ್ಯತೆ ಪರೀಕ್ಷೆ ಯಾವ ರೀತಿ ಇರಲಿದೆ? ಅಭ್ಯರ್ಥಿಗಳು ಯಾವ ರೀತಿ ಸಿದ್ದತೆ ಮಾಡಿಕೊಳ್ಳಬೇಕು? ದಾಖಲೆಗಳ ಪರಿಶೀಲನೆ ಎಂದರೇನು? ಎಂಬುದರ ಕುರಿತು ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಗುವುದು.
ಸೇನಾ ವಿಭಾಗದ ಬೆಳಗಾವಿಯ ಎ.ಆರ್.ಓ ಕರ್ನಲ್ ನಿಶಾಂತ ಶೆಟ್ಟಿ ಅವರು ಮಾತನಾಡಲಿದ್ದಾರೆ. ವೈದ್ಯಕೀಯ ಪರೀಕ್ಷೆ ಕುರಿತು ಆರ್ಮಿ ವೈದ್ಯರಾದ ಮೇಜರ್ ಎ.ವಿಶ್ವನಾಥ ಮಾತನಾಡಲಿದ್ದಾರೆ. ದಾಖಲೆಗಳ ಬಗ್ಗೆ ಸುಬೇದಾರ ಮೇಜರ್ ದಿಶೇನ್ ಲೋಹಿಯಾ ಅವರು ಮಾತನಾಡಲಿದ್ದಾರೆ. ಈ ಕಾರ್ಯಾಗಾರದಲ್ಲಿ ಮಾಜಿ ಸೈನಿಕರು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಠ್ಠಲ್ ಜಾಬಗೌಡರ್ ಹಾಗೂ ಮಾಜಿ ಸೈನಿಕರು, ಆಸಕ್ತ ದೈಹಿಕ ಶಿಕ್ಷಕರು ಪಾಲ್ಗೊಳ್ಳಲಿದ್ದಾರೆ.
ಸೇನೆ ಸೇರ ಬಯಸಲಿಚ್ಛಿಸುವ ಕೊಪ್ಪಳ ಜಿಲ್ಲೆಯ ಆಸಕ್ತರು ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು. ಈ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ ಎರಡನೇ ಹಂತದಲ್ಲಿ ತಾಲೂಕು ಮಟ್ಟದಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡು ಮಾಹಿತಿ ನೀಡಲು ಉದ್ದೇಶಿಸಲಾಗಿದೆ.