ಚಿತ್ರದುರ್ಗ ಆ.12 : ವಿಪತ್ತು ಯಾವಾಗ ಸಂಭವಿಸುತ್ತವೆ ಎಂದು ಯಾರೂ ಕೂಡ ಅಂದಾಜಿಸುವುದು ಕಷ್ಟ ಸಾಧ್ಯ. ವಿಪತ್ತಿನ ಸಂದರ್ಭದಲ್ಲಿ ಅದನ್ನು ಸಮರ್ಥವಾಗಿ ಎದುರಿಸಿ ಉತ್ತಮವಾಗಿ ನಿರ್ವಹಣೆ ಮಾಡಲು ಪ್ರಾಯೋಗಿಕ ತರಬೇತಿ ಪಡೆಯುವುದು ಅವಶ್ಯಕವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ ವಿಪತ್ತು ನಿರ್ವಹಣೆ ಮತ್ತು ಪ್ರಥಮ ಚಿಕಿತ್ಸಾ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ನೈಸರ್ಗಿಕ ವಿಕೋಪಗಳು ಸಂಭವಿಸುವುದು ಅಪರೂಪ, ಆದರೂ ಮಾನವ ನಿರ್ಮಿತ ಸಣ್ಣ ವಿಪತ್ತುಗಳು ಎದುರಾಗುತ್ತವೆ. 2010 ರಲ್ಲಿ ಎಂ.ಕೆ.ಹಟ್ಟಿ ಕರೆ ತುಂಬಿ ನೀರು ಹೊರ ಹರಿದಾಗ ಸಮೀಪದ ಜನ ಪ್ರದೇಶಕ್ಕೆ ನೀರು ನುಗ್ಗಿ ಮೂರ್ನಾಲು ಕಾಲೋನಿಗಳ ಜನರಿಗೆ ತೊಂದರೆ ಉಂಟಾಗಿತ್ತು. ಈ ಸಮಯದಲ್ಲಿ ಅಗ್ನಿಶಾಮಕ ಇಲಾಖೆಯಿಂದ ಬೋಟುಗಳ ಮೂಲಕ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಗಂಜಿಕೇಂದ್ರಗಳನ್ನು ತೆರೆದು ತಾತ್ಕಾಲಿಕವಾಗಿ ಆಶ್ರಯ ನೀಡಲಾಯಿತು.
ಘಟನೆಯ ನಂತರ ತಡೆಗೋಡಿ ನಿರ್ಮಿಸಿ ಶಾಶ್ವತವಾಗಿ ನೀರು ನುಗ್ಗದ ಹಾಗೆ ಕ್ರಮ ಕೈಗೊಳ್ಳಲಾಗಿದೆ. ಇಂತಹ ಸಂದರ್ಭದಲ್ಲಿ ಸ್ಥಳೀಯ ಅಧಿಕಾರಿಗಳಿಗೆ ಅವುಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವ ಕ್ರಮ ತಿಳಿಯದಿದ್ದರೆ, ಸಣ್ಣಪುಟ್ಟ ವಿಪತ್ತುಗಳಲ್ಲಿ ಸಹ ಜೀವ ಹಾನಿ ಉಂಟಾಗುವ ಸಂಭವ ಇರುತ್ತದೆ. ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ದೊಡ್ಡ ಮಟ್ಟದ ಅಪಘಾತಗಳು ಸಂಭವಿಸಿವೆ. ಕೆಲ ಗ್ರಾಮಗಳಲ್ಲಿ ಕಲುಷಿತ ನೀರಿನಿಂದ ಗ್ರಾಮಸ್ಥರು ಅಸ್ವಸ್ಥಗೊಂಡ ಘಟನೆಗಳು ಜರುಗಿವೆ. ಇವುಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿ ಸಾರ್ವಜನಿಕರಿಗೆ ಮನೋಸ್ಥರ್ಯ ತುಂಬುವುದು ಅವಶ್ಯಕವಾಗಿರುತ್ತವೆ ಎಂದರು.
ರಾಷ್ಟ್ರ ಮಟ್ಟದ ವಿಪತ್ತು ನಿರ್ವಹಣೆ ಹಾಗೂ ಪ್ರಥಮ ಚಿಕಿತ್ಸೆ ತರಬೇತುದಾರ ಡಾ.ಕುಮಾರ್.ವಿ.ಎಲ್.ಎಸ್ ಮಾತನಾಡಿ ನೈಸರ್ಗಿಕ, ಮಾನವ ನಿರ್ಮಿತ ವಿಪತ್ತುಗಳನ್ನು ಎದುರಿಸುವ ಸಂದರ್ಭದಲ್ಲಿ ತರಬೇತಿ ಹೊಂದಿದ ಸ್ವಯಂ ಸೇವಕರ ಅವಶ್ಯಕತೆ ಹೆಚ್ಚಾಗಿ ಇರುತ್ತದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಭೂಕಂಪ, ನೆರೆ ಹಾಗೂ ಚಂಡಮಾರುತಗಳಂತ ವಿಪತ್ತುಗಳಿಗಿಂತಲೂ, ಅಪಘಾತ, ಸಾಂಕ್ರಾಮಿಕ ರೋಗ, ಕಲುಷಿತ ನೀರು ಹಾಗೂ ಆಹಾರ ಸೇವನೆಯಿಂದ ಉಂಟಾಗುವ ಸಣ್ಣ ಪುಟ್ಟ ವಿಪತ್ತುಗಳು ಹೆಚ್ಚಾಗಿ ಘಟಿಸುತ್ತವೆ. ಇವುಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವುದು ಅತಿ ಮುಖ್ಯವಾಗಿರುತ್ತವೆ. ಗಣಿ ಕಂಪನಿಗಳು ಜಿಲ್ಲೆಯ ಹಲವು ಸ್ಥಳಗಳಲ್ಲಿ ಗಣಿಗಾರಿಕೆ ನಡೆಸುತ್ತಿವೆ. ಇಲ್ಲಿಯೂ ವಿಪತ್ತು ಘಟಿಸುವ ಸಂಭವನೀಯತೆ ಇರುತ್ತದೆ.
ದೊಡ್ಡ ಪ್ರಮಾಣದಲ್ಲಿ ರಸ್ತೆ ಹಾಗೂ ರೈಲ್ವೇ ದುರಂತಗಳು ಸಂಭವಿಸುವ ಅವಕಾಶಗಳು ಕೂಡ ಇವೆ. ಬೃಹತ್ ಕೈಗಾರಿಕೆಗಳಲ್ಲಿ ಬಳಸುವ ವಿಷ ಅನಿಲಗಳು ಸಹ ಸೋರಿಕೆಯಾಗಿ ಜನರ ಪ್ರಾಣಕ್ಕೆ ಕುತ್ತು ಒದಗಬಹುದು. ಇಂತಹ ಸಂದರ್ಭದಲ್ಲಿ ವಿಪತ್ತು ನಿರ್ವಹಣೆಗೆ ತರಬೇತಿ ಪಡೆದ ಸ್ವಯಂ ಸೇವಕರನ್ನು ಬಳಸಿಕೊಳ್ಳಬಹದು. ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ತರಬೇತಿ ಹೊಂದಿದ ಸ್ವಯಂ ಸೇವಕರ ಮಾಹಿತಿಯನ್ನು ಸಂಗ್ರಹಿಸಿಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದರು.
ಕೋವಿಡ್ ಸಾಂಕ್ರಾಮಿಕದ ನಂತರ ದೇಶದಲ್ಲಿ ಆರೋಗ್ಯ ವ್ಯವಸ್ಥೆಯನ್ನು ಬಲಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಆಕ್ಸಿಜನ್ ತಯಾರಿಕೆ ಸೇರಿದಂತೆ ನುರಿತ ತಂತ್ರಜ್ಞರ ನೇಮಕಕ್ಕೆ ಒತ್ತು ನೀಡಲಾಗಿದೆ. ಅಪಘಾತ ಸಂದರ್ಭಲ್ಲಿ ಸರಿಯಾದ ಪ್ರಥಮ ಚಿಕಿತ್ಸೆ ವ್ಯಕ್ತಿಯ ಪ್ರಾಣ ಉಳಿಸುತ್ತದೆ. ದೇಶದಲ್ಲಿ ವಾರ್ಷಿಕವಾಗಿ ಸರಾಸರಿ ಸುಮಾರು 4 ಲಕ್ಷ ಜನರು ಅಪಘಾತ ಹಾಗೂ ಹೃದಯಾಘಾತದಂತ ಘಟನೆಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪ್ರಥಮ ಚಿಕಿತ್ಸೆ ಕ್ರಮಗಳನ್ನು ಪ್ರತಿಯೊಬ್ಬರು ತಿಳಿದುಕೊಂಡರೆ, ತುರ್ತು ಸಂದರ್ಭಗಳಲ್ಲಿ ಅಮೂಲ್ಯ ಜೀವಗಳನ್ನು ಕಾಪಾಡಬಹುದು ಎಂದು ಡಾ.ಕುಮಾರ್.ವಿ.ಎಲ್.ಎಸ್ ಹೇಳಿದರು.
ಕಾರ್ಯಕ್ರಮದಲ್ಲಿ ಚಿತ್ರದುರ್ಗ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪ ಸಭಾಪತಿ ಈ.ಅರುಣ್‍ಕುಮಾರ್, ರಾಜ್ಯ ಆಡಳಿತ ಮಂಡಳಿ ಸದಸ್ಯ ಮಧು ಪ್ರಸಾದ್, ಕಾರ್ಯದರ್ಶಿ ಮಜಹರ್ ಉಲ್ಲಾ, ಖಜಾಂಚಿ ಎಸ್.ವೀರೇಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಕಾರ್ಯಕ್ರಮ ನಿರೂಪಿಸಿದರು.