ದಾವಣಗೆರೆ : 78 ನೇ ಸ್ವಾತಂತ್ರೋತ್ಸವದ ಅಂಗವಾಗಿ ಜಿಲ್ಲೆಯಾದ್ಯಂತ ‘ಹರ್ ಘರ್ ತಿರಂಗಾ’ ಅಭಿಯಾನವನ್ನು ಅರ್ಥಪೂರ್ಣವಾಗಿ ಆಚರಿಸಲು ಆಗಸ್ಟ್ 14 ಹಾಗೂ 15ರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ ತಾವು ಭಾಗಿಯಾಗಬೇಕೆಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು. ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಆಯೋಜಿಸಲು ಉದ್ದೇಶಿಸಿರುವ ಕಾರ್ಯಕ್ರಮಗಳ ಬಗ್ಗೆ ಏರ್ಪಡಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮಕ್ಕಳಲ್ಲಿ ದೇಶಾಭಿಮಾನ ಮೂಡಿಸಲು ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಪ್ರಬಂಧ ಸ್ಪರ್ಧೆ, ಆಶುಭಾಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ. ಯಶಸ್ವಿಯಾಗಿ ಕಾರ್ಯಕ್ರಮಗಳನ್ನು ಆಯೋಜಿಸಲು ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಮತ್ತು ಎಲ್ಲ ತಾಲ್ಲೂಕುಗಳಲ್ಲಿ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಲಿದ್ದಾರೆ. ಜೊತೆಗೆ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿಯು ತಿರಂಗಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಆಗಸ್ಟ್ 14 ರಂದು ಬೆಳಿಗ್ಗೆ 6.30 ಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಜಿಲ್ಲಾಡಳಿತ ಭವನದಿಂದ ಪಿ.ಬಿ.ರಸ್ತೆ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣದವರೆಗೆ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ. ಸಂಜೆ 4.30 ಕ್ಕೆ ಹೈಸ್ಕೂಲ್ ಮೈದಾನದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ತಿರಂಗಾ ಮ್ಯಾರಥಾನ್ ಆಯೋಜಿಸಲಾಗಿದೆ’ ಎಂದು ತಿಳಿಸಿದರು.