ಚಿತ್ರದುರ್ಗ ಆ.13: ಜಿಲ್ಲೆಯ ಬರಪೀಡಿತ ತಾಲ್ಲೂಕುಗಳಲ್ಲಿ 2023-24ನೇ ಸಾಲಿನಲ್ಲಿ ಕೈಗೊಂಡ ರೂ.3.3 ಕೋಟಿ ವೆಚ್ಚದ ತುರ್ತು ಕುಡಿಯುವ ನೀರಿನ ಕಾಮಗಾರಿಗಳ ಕ್ರಿಯಾ ಯೋಜನೆಗೆ ಘಟನೋತ್ತರ ಅನುಮತಿಯನ್ನು ನೀಡಲಾಯಿತು.
ಈ ಕುರಿತು ಮಂಗಳವಾರ ನಗರದ ಜಿ.ಪಂ.ಕಚೇರಿಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಎಸ್.ಜೆ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಜಿಲ್ಲೆಯ ಬರ ಪೀಡಿತ ತಾಲ್ಲೂಕುಗಳಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಮೊದಲ ಹಂತದಲ್ಲಿ ಜಿಲ್ಲೆಗೆ ರೂ.1.5 ಕೋಟಿ ಹಾಗೂ ಎರಡನೇ ಹಂತದಲ್ಲಿ ರೂ.3.64 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳ ಕೋರಿಕೆ ಮೇರೆಗೆ ಚಳ್ಳಕೆರೆ, ಚಿತ್ರದುರ್ಗ, ಹೊಳಲ್ಕೆರೆ, ಹಿರಿಯೂರು ಹಾಗೂ ಹೊಸದುರ್ಗ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ ರೂ.60.70 ಲಕ್ಷ ವೆಚ್ಚದ ತುರ್ತು ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಪೂರ್ಣಗೊಂಡ ಈ ಕಾಮಗಾರಿಗಳ ಕ್ರಿಯಾ ಯೋಜನೆಗೆ ಘಟನೋತ್ತರವಾಗಿ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಕಳೆದ ಮೇ.29 ರಂದು ಜರುಗಿದ ಸಭೆಯಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ರಾಂಪುರ ಹಾಗೂ ಇತರೆ ಗ್ರಾಮಗಳಿಗೆ ನೀರು ಸರಬರಾಜು ಮಾಡುವ ರೂ.60.70 ಲಕ್ಷ ವೆಚ್ಚದ ಹೊಸ ಪೈಪ್ ಲೈನ್ ಅಳವಡಿಕೆಗೆ ಕಾಮಗಾರಿಗೆ ಅನುಮತಿ ನೀಡಲಾಗಿತ್ತು.
ಜಲ ಜೀವನ್ ಮಿಷನ್ ಅಡಿ ಜಿಲ್ಲೆಯ 6 ತಾಲ್ಲೂಕುಗಳಲ್ಲಿ ನಾಲ್ಕು ಬ್ಯಾಚುಗಳಲ್ಲಿ 1568 ಕಾರ್ಯತ್ಮಕ ನಳ ನೀರು ಸಂಪರ್ಕ ಕಲ್ಪಿಸುವ ಕಾಮಾಗಾರಿ ಕೈಗೊಳ್ಳಲಾಗಿದೆ. ಈ ಪೈಕಿ ಅನುಷ್ಠಾನಗೊಂಡ ಹಾಗೂ ಅನುಷ್ಠಾನಗೊಳ್ಳುತ್ತಿರುವ ಒಟ್ಟು 1189 ಕಾಮಗಾರಿಗಳಿಗೆ ನಾಮಫಲಕ ಅಳವಡಿಸಿಲು ರೂ.4.61 ಕೋಟಿ ವೆಚ್ಚದ ಕ್ರಿಯಾ ಯೋಜನೆ ತಯಾರಿಸಿ, ಅನುಮೋದನೆಗಾಗಿ ಇಲಾಖಾ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಬಸವನ ಗೌಡ ಸಭೆಯಲ್ಲಿ ತಿಳಿಸಿದರು.
ಪ್ರಸ್ತುತ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿಗಳಲ್ಲಿ ನಾಮಫಲಕ ಅಳವಡಿಸುವ ವೆಚ್ಚವನ್ನು ಜೋಡಿಸಿ ಕಾಮಾಗಾರಿ ಪೂರ್ಣಗೊಳಿಸಿ, ಈಗಾಗಲೇ ಪೂರ್ಣಗೊಂಡ ಕಾಮಗಾರಿಗಳ ನಾಮಫಲಕ ಅಳವಡಿಸಲು ಮಾತ್ರ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಎಸ್.ಜೆ.ಸೋಮಶೇಖರ್ ಸೂಚಿಸಿದರು.
ಸಭೆಯಲ್ಲಿ ಜಿ.ಪಂ. ಉಪಕಾರ್ಯದರ್ಶಿ ತಿಮ್ಮಪ್ಪ, ಮುಖ್ಯಲೆಕ್ಕಾಧಿಕಾರಿ ಡಿ.ಆರ್.ಮಧು, ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಹನುಮಂತಪ್ಪ ಸೇರಿದಂತೆ ಮತ್ತಿತರರು ಇದ್ದರು.