ಚಿತ್ರದುರ್ಗ ಆಗಸ್ಟ್.13: ಜೀವಕ್ಕೆ ಕಂಟಕವಾಗಿರುವ 12 ಮಾರಕ ರೋಗಳಿಂದ ಮಕ್ಕಳನ್ನು ರಕ್ಷಿಸಲು ಪೋಷಕರು ತಪ್ಪದೇ ಎಲ್ಲಾ ಲಸಿಕೆಗಳನ್ನು ಹಾಕಿಸಬೇಕು ಎಂದು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಹೇಳಿದರು.
ನಗರದ ವಾರ್ಡ್ ಸಂಖ್ಯೆ 32ರ ಕೆ.ಹೆಚ್.ಬಿ ಕಾಲೋನಿ ಅಂಗನವಾಡಿ ಕೇಂದ್ರದಲ್ಲಿ ಪ್ರತಿ ತಿಂಗಳು 2ನೇ ಮಂಗಳವಾರ ನಡೆದ ನಿರ್ದಿಷ್ಟ ಲಸಿಕಾ ಕಾರ್ಯಕ್ರಮದ ತಾಯಂದಿರ ಸಭೆಯಲ್ಲಿ ಅವರು ಮಾತನಾಡಿದರು.
ಲಸಿಕೆಗಳು ಜೀವಗಳನ್ನು ಉಳಿಸುತ್ತವೆ. ಲಸಿಕೆ ಎಂದರೆ ರಕ್ಷಣೆ. ತಡೆಗಟ್ಟಬಹುದಾದ ಎಲ್ಲಾ ರೋಗಗಳ ವಿರುದ್ಧ ಮಕ್ಕಳಿಗೆ ರಕ್ಷಣೆ ಸಿಗಲಿದೆ. 5 ವರ್ಷದಲ್ಲಿ 7 ಬಾರಿ ನಿಮ್ಮ ಮಕ್ಕಳನ್ನು ಲಸಿಕಾ ಕೇಂದ್ರಕ್ಕೆ ಕರೆ ತನ್ನಿ 12 ಮಾರಕ ರೋಗಗಳನ್ನು ತಡೆಗಟ್ಟಿ ಎಂದು ಹೇಳಿದರು.
ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ ಮಾತನಾಡಿ, ಬಿಸಿಜಿ ಲಸಿಕೆಯು ಮಕ್ಕಳಲ್ಲಿ ಮೆನಿಂಜೈಟಿಸ್ ಮತ್ತು ಹರಡುವ ಟಿಬಿ ವಿರುದ್ಧ ದಾಖಲಿತ ರಕ್ಷಣಾತ್ಮಕ ಪರಿಣಾಮ ಹೊಂದಿದೆ. ಎಲ್ಲಾ ಶಿಶುಗಳು ಜನನದ ನಂತರ ಸಾಧ್ಯವಾದಷ್ಟು ಬೇಗ ಹೆಪಟೈಟಿಸ್ ಬಿ ಲಸಿಕೆ ಪಡೆಯಬೇಕು ಎಂದು ಡಬ್ಲೂö್ಯಹೆಚ್‌ಒ ಶಿಫಾರಸ್ಸು ಮಾಡುತ್ತದೆ. ಮೇಲಾಗಿ 24 ಗಂಟೆಗಳ ಒಳಗೆ, ನಂತರ ಎರಡು ಅಥವಾ ಮೂರು ಡೋಸ್ ಹೆಪಟೈಟಿಸ್ ಬಿ ಲಸಿಕೆಯನ್ನು ಕನಿಷ್ಠ 4 ವಾರಗಳ ಅಂತರದಲ್ಲಿ ವ್ಯಾಕ್ಸಿನೇಷನ್ ಮಾಡಿಸಬೇಕು ಎಂದು ಹೇಳಿದರು.
ಪೋಲಿಯೊವನ್ನು ತಡೆಗಟ್ಟಲು ಬಾಯಿಯ ಪೋಲಿಯೊ ಲಸಿಕೆ ನೀಡಲಾಗುತ್ತದೆ. ಪೆಂಟಾವಲೆAಟ್ ಲಸಿಕೆಯು ಮಗುವಿಗೆ ಐದು ಮಾರಣಾಂತಿಕ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ. ಡಿಫ್ತಿರಿಯಾ, ಪೆರ್ಟುಸಿಸ್, ಟೆಟನಸ್, ಹೆಪಟೈಟಿಸ್ ಬಿ ಮತ್ತು ಹಿಬ್, ಪೆಂಟಾವಲೆAಟ್ ಲಸಿಕೆ ನೀಡುವುದರಿಂದ ಮಗುವಿಗೆ ಮುಳ್ಳುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ಎಲ್ಲಾ ಐದು ರೋಗಗಳಿಂದ ರಕ್ಷಣೆ ನೀಡುತ್ತದೆ ಎಂದರು.
ಹಿರಿಯ ಆರೋಗ್ಯ ಸುರಕ್ಷತಾಧಿಕಾರಿ ಕಾತ್ಯಾನಮ್ಮ ಮಾತನಾಡಿ, ಲಸಿಕಾ ನಂತರ ಸಂಭವಿಸಬಹುದಾದ ಅಡ್ಡ ಪರಿಣಾಮಗಳ ನಿರ್ವಹಣೆ, ಲಸಿಕಾ ವೇಳಾಪಟ್ಟಿ ಮಕ್ಕಳಿಗೆ ನೀಡುವ ಪೌಷ್ಟಿಕ ಪೂರಕ ಆಹಾರದ ಬಗ್ಗೆ ದಾವಣಗೆರೆ ಮಿಕ್ಸ್ ತಯಾರಿಸುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಗೀತಾ ಅವರು 12 ಮಕ್ಕಳಿಗೆ 3 ಜನ ಗರ್ಭಿಣಿಯರಿಗೆ ವಿವಿಧ ಹಂತಗಳ ಲಸಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆ ಅನುರಾಧ, ಅಂಗನವಾಡಿ ಕಾರ್ಯಕರ್ತೆ ಈರಮ್ಮ, ತಾಯಿ ಮಕ್ಕಳು, ಪೋಷಕರು ಗರ್ಭಿಣಿಯರು ಭಾಗವಹಿಸಿದ್ದರು.