ಬೆಂಗಳೂರು ಗ್ರಾಮಾಂತರ ಜಿಲ್ಲೆ :- ಮಹಿಳಾ ಸಬಲೀಕರಣಕ್ಕಾಗಿ ಸ್ವ-ಸಹಾಯ ಗುಂಪುಗಳ ಮೂಲಕ ಸರ್ಕಾರವು ಸಾಲ-ಸೌಲಭ್ಯ ಕಲ್ಪಿಸುತ್ತಿದ್ದು, ಮಹಿಳೆಯರು ಇದರ ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಅವರು ಹೇಳಿದರು.
ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಸಂಜೀವಿನಿ ಡೇ.ಎನ್.ಎಲ್.ಆರ್.ಎಮ್ ರವರ ಸ್ವಸಹಾಯ ಗುಂಪುಗಳ ಸದಸ್ಯರು ಉತ್ಪಾದಿಸುವ ಉತ್ಪನ್ನಗಳ ಜಿಲ್ಲಾ ಮಟ್ಟದ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ತಯಾರಿಸುವ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರುಕಟ್ಟೆ ಅವಶ್ಯಕತೆ ಇರುತ್ತದೆ. ಇದರ ಭಾಗವಾಗಿ ಸರ್ಕಾರವು ಕೂಡ ಬೆಂಬಲ ನೀಡಿ ಮೇಳಗಳು ಆಯೋಜಿಸಿ ಮಹಿಳೆಯರು ತಯಾರಿಸಿದ ವಿವಿಧ ಬಗೆಯ ತಿಂಡಿ ತಿನಿಸುಗಳು, ಕರಕುಶಲ ವಸ್ತುಗಳು, ಸೀರೆ-ಬಟ್ಟೆ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮೇಳಗಳು ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಕೆ.ಎನ್ ಅನುರಾಧ ಅವರು ಮಾತನಾಡಿ, ಡೇ.ಎನ್.ಎಲ್.ಆರ್.ಎಮ್ ಯೋಜನೆಯಡಿ ಸೌಲಭ್ಯ ಪಡೆದುಕೊಂಡು ಮಹಿಳೆಯರು ಉದ್ಯಮರಂಗದಲ್ಲಿ ಅಭಿವೃದ್ಧಿ ಸಾಧಿಸಲು ಉತ್ತಮ ವೇದಿಕೆಯಾಗಿದೆ. ಈ ಮಾರಾಟ ಮೇಳವು ಆಗಸ್ಟ್ 14ರ ಸಂಜೆ 06:00 ಗಂಟೆಯವರೆಗೆ ಇರಲಿದ್ದು, ಸಾರ್ವಜನಿಕರು ಭಾಗವಹಿಸಿ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ನ ಯೋಜನಾ ನಿರ್ದೇಶಕ ವಿಠ್ಠಲ ಕಾವ್ಳೆ, ಯೋಜನಾಧಿಕಾರಿ ರಾಮಕೃಷ್ಣಯ್ಯ, ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ವ-ಸಹಾಯ ಗುಂಪುಗಳ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.