ಚಿತ್ರದುರ್ಗ ಆಗಸ್ಟ್.14: 78ನೇ ಸ್ವಾತಂತ್ರ‍್ಯ ಮಹೋತ್ಸವವನ್ನು ಇಡೀ ರಾಷ್ಟ್ರದಲ್ಲಿ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಸ್ವಾತಂತ್ರ‍್ಯಕ್ಕೆ ಹೋರಾಡಿದ ಮಹಾನ್ ಚೇತನಗಳನ್ನು ಸ್ಮರಿಸಿಕೊಳ್ಳುವುದರ ಮೂಲಕ, ಅವರ ತ್ಯಾಗ ಬಲಿದಾನದ ಬಗ್ಗೆ ನಾಟಕ ರೂಪದಲ್ಲಿ ಯುವ ಜನರಿಗೆ ತಿಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಸಂಸದ ಗೋವಿಂದ ಎಂ ಕಾರಜೋಳ ಹೇಳಿದರು.
78ನೇ ಸ್ವಾತಂತ್ರ‍್ಯ ಮಹೋತ್ಸವ ಹಾಗೂ ಹರ್ ಘರ್ ತಿರಂಗಾ ಕಾರ್ಯಕ್ರಮದ ಅಂಗವಾಗಿ ನವದೆಹಲಿಯ ಕೇಂದ್ರ ಸಂಸ್ಕೃತಿ ಮಂತ್ರಾಲಯ, ತಾಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ಸಂಜೆ ನಗರದ ತರಾಸು ರಂಗಮಂದಿರದಲ್ಲಿ ಆಯೋಜಿಸಲಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಾಟಕ ಹಾಗೂ ದೇಶಭಕ್ತಿ ಗೀತೆ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶಕ್ಕಾಗಿ ಹೋರಾಡಿದ ಸೇನಾನಿ ಹಾಗೂ ಯೋಧರು, ಕಲೆ, ಕ್ರೀಡೆ ಸೇರಿದಂತೆ ಇನ್ನೀತರ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಸ್ವಾತಂತ್ರ‍್ಯ ಮಹೋತ್ಸವ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತಿದೆ. ಈ ಮೂಲಕ ಇನ್ನಷ್ಟು ಸಾಧನೆ ಮಾಡಲು ಪ್ರೇರೇಪಿಸಲಾಗುತ್ತಿದೆ. ನಾಡಿನ ಪರಂಪರೆ ಕಲೆ ಸಂಸ್ಕೃತಿಗಳನ್ನು ಅನಾವರಣೆ ಮಾಡಲು ಅನೇಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಹರ್ ಘರ್ ತಿರಂಗಾ ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟು, ದೇಶದ ಜನತೆ ತಮ್ಮ ಮನೆಗಳ ಮೇಲೆ ರಾಷ್ಟçಧ್ವಜ ಹಾರಿಸಿ ದೇಶಪ್ರೇಮ ಮೆರೆದಿದ್ದಾರೆ ಎಂದು ಸಂಸದ ಗೋವಿಂದ ಎಂ ಕಾರಜೋಳ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವುದರೊಂದಿಗೆ ನಮ್ಮ ಮನಗಳಲ್ಲಿಯೂ ರಾಷ್ಟ್ರಭಕ್ತಿ ಅನಾವರಣ ಆಗಬೇಕು. ದೇಶದ ಸಂವಿಧಾನಕ್ಕೆ ಗೌರವ ಸಲ್ಲಿಸುವುದರ ಜೊತೆಗೆ, ದೇಶದ ಪ್ರತಿಯೊಬ್ಬರನ್ನು ಪ್ರೇಮದಿಂದ ಕಂಡು ಭಾವೈಕ್ಯತೆ ಮನೋಭಾವ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ದೇಶಪ್ರೇಮ ಹಾಗೂ ದೇಶಭಕ್ತಿ ಅನುರಣಿಸಿದ ಗೀತ ಗಾಯನ:
************* ಕಾರ್ಯಕ್ರಮದಲ್ಲಿ ವಿವಿಧ ಕಲಾತಂಡಗಳಿಂದ ಪ್ರಸ್ತುತ ಪಡಿಸಿದ ದೇಶಭಕ್ತಿ ಗೀತೆಗಳು ನೆರೆದವರಲ್ಲಿ ದೇಶಪ್ರೇಮ ಹಾಗೂ ದೇಶಭಕ್ತಿ ಅನುರಣಿಸುವಂತೆ ಮಾಡಿದವು. ಗಾಯಕರ ಜೊತೆ ಸಭಿಕರು ಸಹ ದೇಶ ಭಕ್ತಿಗೀತೆಗಳಿಗೆ ಧ್ವನಿಗೂಡಿಸಿದರು. ಇದೇ ಸಂದರ್ಭದಲ್ಲಿ ವೀರ ಸಂಗೊಳ್ಳಿ ರಾಯಣ್ಣ ನಾಟಕ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಸಾಂಸ್ಕೃತಿಕ ಸಂಘಟಕ ಮಂಜುನಾಥ್, ಕಲಾವಿದರಾದ ಡಿ.ಓ.ಮುರಾರ್ಜಿ, ಹರೀಶ್, ಶೋಭಾರಾಣಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಕಲಾವಿದರು, ಸಾರ್ವಜನಿಕರು, ವಿದ್ಯಾರ್ಥಿಗಳು ಇದ್ದರು.