ದಾವಣಗೆರೆ; ಆ.17 : ಜಿಲ್ಲೆಯಲ್ಲಿ ರಸ್ತೆ ಅಪಘಾತ ಪ್ರಕರಣಗಳಿಂದ ಅನೇಕ ಸಾವು-ನೋವು ಉಂಟಾಗುತ್ತಿದೆ. ಅವುಗಳ ನಿಯಂತ್ರಣಕ್ಕೆ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಅಗತ್ಯವಿರುವ ರಸ್ತೆ ಅಭಿವೃದ್ಧಿಪಡಿಸಿ ಅಪಘಾತ ಪ್ರಕರಣ ತಗ್ಗಿಸಲು ಕ್ರಮ ವಹಿಸಲು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸೂಚನೆ ನೀಡಿದರು.
ಶನಿವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದರು. ರಸ್ತೆ ಅಪಘಾತ ಪ್ರಕರಣಗಳು ಪ್ರತಿ ವರ್ಷವೂ ಹೆಚ್ಚುತ್ತಿದೆ, ಇದರಲ್ಲಿ ಹೆಚ್ಚಾಗಿ ಶೇ.90 ರಷ್ಟು ಪ್ರಕರಣಗಳಲ್ಲಿ ಅತಿವೇಗದ ವಾಹನ ಚಾಲನೆ, ಅಜಾಗರೂಕತೆಯಿಚಿದ ಅಪಘಾತ ಉಂಟಾಗಿದೆ. ಕೆಲವು ಕಡೆ ಅವೈಜ್ಞಾನಿಕ ರಸ್ತೆ ಕಾಮಗಾರಿಗಳಿಂದಲೂ ಅಪಘಾತಗಳಾಗಿವೆ ಎಂದರು.
ಪೆÇಲೀಸ್ ಇಲಾಖೆಯು ಅಪಘಾತ ಸಂಭವಿಸುವ ಬ್ಲ್ಯಾಕ್ ಸ್ಪಾಟ್‍ಗಳನ್ನು ಗುರುತಿಸಿದೆ. ಕಳೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಆ ಸ್ಥಳಗಳ ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳಲು ರಾಷ್ಟ್ರೀಯ ಹೆದ್ದಾರಿ ಹಾಗೂ ಇತರ ಇಲಾಖೆಗಳಿಗೆ ಸೂಚಿಸಲಾಗಿತ್ತು. ಅವುಗಳಲ್ಲಿ ಬಹುತೇಕ ಕಾಮಗಾರಿಗಳನ್ಮ್ನ ಕೈಗೊಳ್ಳಲಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದು ಪೆÇಲೀಸ್ ಇಲಾಖೆ ಹಾಗೂ ಹೆದ್ದಾರಿ ವಿಭಾಗದ ಅಧಿಕಾರಿಗಳು ಜಂಟಿ ಸರ್ವೇ ನಡೆಸಿ ಶೀಘ್ರವಾಗಿ ವರದಿ ನೀಡಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ರಸ್ತೆ ಅಪಘಾತಗಳನ್ನು ಮತ್ತು ಅದರಿಂದ ಉಂಟಾಗುವ ಪ್ರಾಣಹಾನಿ ಹಾಗೂ ಗಾಯಾಳುಗಳ ಪ್ರಮಾಣ ತಗ್ಗಿಸುವ ಅಗತ್ಯವಿದೆ. ಇದಕ್ಕಾಗಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ವ್ಯವಸ್ಥಿತವಾದ ಸಮಗ್ರ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಸೂಚಿಸಿದರು. ಜಿಲ್ಲೆಯಲ್ಲಿ ಭಾರಿ ಮಳೆ ಬರುತ್ತಿದ್ದು ರಸ್ತೆಗಳಲ್ಲಿ ಗುಂಡಿ ಬಿದ್ದಿವೆ ಮತ್ತು ಕೆಲವೆಡೆ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಇಂತಹ ಸ್ಥಳಗಳಲ್ಲಿ ನಿಧಾನವಾಗಿ ಹಾಗೂ ಜಾಗರೂಕತೆಯಿಂದ ವಾಹನ ಚಾಲನೆ ಮಾಡಲು ಈ ಬಗ್ಗೆ ಸೈನ್ ಬೋರ್ಡ್ ಅಳವಡಿಸಬೇಕು, ಇಲ್ಲದಿದ್ದಲ್ಲಿ ಅಪಘಾತ ಸಂಭವಿಸಿ ಜೀವಹಾನಿಯಾಗಬಹುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯಾದ್ಯಂತ ಮುಖ್ಯ ರಸ್ತೆಗಳಲ್ಲಿ ಅಳವಡಿಸಲಾದ ಅವೈಜ್ಞಾನಿಕ ವೇಗತಡೆ (ಹಂಪ್ಸ್)ಗಳನ್ನು ಸರಿಪಡಿಸುವ್ಯದು, ದಾವಣಗೆರೆ ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ. ರಾಜ್ಯ ಹೆದ್ದಾರಿಗಳಲ್ಲಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಸಂಬಂಧಪಟ್ಟ ಇಲಾಖೆಯ ಹಾಗೂ ಪೆÇಲೀಸ್ ಇಲಾಖೆಯ ಗಮನಕ್ಕೆ ಬಾರದೇ ಅಳವಡಿಸಲಾದ ಅವೈಜ್ಞಾನಿಕ ವೇಗ ತಡೆಗಳಿಂದ ಅಪಘಾತಗಳು ಸಂಭವಿಸುತ್ತಿರುವ ಹಿನ್ನಲೆಯಲ್ಲಿ ಅಂತಹ ಸ್ಥಳಗಳನ್ನು ಗುರುತಿಸಿ ಕೂಡಲೆ ತೆರವುಗೊಳಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಆಯಾ ಪೆÇಲೀಸ್ ಠಾಣೆಯ ಅಧಿಕಾರಿಗಳು ಜಂಟಿ ಪರಿವೀಕ್ಷಣೆಯನ್ನು ಮಾಡಿ ಅವಶ್ಯಕತೆ ಇದ್ದರೆ ವೈಜ್ಞಾನಿಕ ವೇಗತಡೆಗಳನ್ನು ಅಳವಡಿಸಿ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ರಸ್ತೆಗಳಲ್ಲಿ ಸಂಬಂಧಪಟ್ಟ ಆಯಾ ಇಲಾಖೆಯ ಅಧಿಕಾರಿಗಳು ವೈಜ್ಞಾನಿಕ ವೇಗತಡೆಗಳಿಗೆ ಥರ್ಮೋಪ್ಲಾಸ್ಟಿಕ್ ಬಣ್ಣವನ್ನು ಅಳವಡಿಸುವುದರ ಜೊತೆಗೆ ವೇಗ ತಡೆ ಗೋಚರಿಸುವಂತೆ ರೋಡ್ ಸ್ಟಡ್‍ಗಳನ್ನು ಅಳವಡಿಸಿ ಮುಂಜಾಗ್ರತೆಗಾಗಿ ಸೂಚನಾ ಫಲಕಗಳನ್ನು ಅಳವಡಿಸಲು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತಾನಾಡಿ ನಗರದಲ್ಲಿ ಜಲಸಿರಿ ಯೋಜನೆಯ ಕಾಮಗಾರಿಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಂಡ ಸ್ಥಳಗಳಲ್ಲಿ ಮೊದಲಿನಂತೆ ರಸ್ತೆಯನ್ನು ಮಾಡಬೇಕು.
ರಾಷ್ಟ್ರೀಯ ಹೆದ್ದಾರಿಯ ಬೈಪಾಸ್‍ನಲ್ಲಿ ಎರಡೂ ಬದಿ ಸರ್ವೀಸ್ ರಸ್ತೆಯ ಕಾಮಗಾರಿಯನ್ನು ವೇಗವಾಗಿ ಪೂರ್ಣಗೊಳಿಸಬೇಕು. ವಿದ್ಯಾನಗರ ಲಾಸ್ಟ್ ಬಸ್ ಸ್ಟಾಪ್ ನಿಂದ ಕರ್ನಾಟಕ ಹೌಸಿಂಗ್ ಬೋರ್ಡ್ ಕಾಲೋನಿಯವರೆಗೆ ಪಾಲಿಕೆ ವ್ಯಾಪ್ತಿಯಲ್ಲಿನ ಪ್ರಮುಖ ರಸ್ತೆಗಳಲ್ಲಿ ಬೀದಿ ದೀಪಗಳು ಕಾರ್ಯಾರಂಭ ಮಾಡದೇ ಇರುವ ಕಾರಣ ಪಾದಚಾರಿಗಳು ರಸ್ತೆ ದಾಟುವಾಗ ಲಘು ಹಾಗೂ ಮಾರಣಾಂತಿಕ ಅಪಘಾತಗಳು ಸಂಭವಿಸುತ್ತಿದೆ ಎಂದರು.
ಈಗಾಗಲೇ ರಸ್ತೆ ಸುರಕ್ಷತಾ ಮೇಲುಸ್ತುವಾರಿ ಹಾಗೂ ನೇತೃತ್ವದ ಅಂಗವಾಗಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ರಚಿಸಲಾಗಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಲಾಗುವುದು ಎಂದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಂ.ಸಂತೋಷ್, ಪಾಲಿಕೆ ಆಯುಕ್ತರಾದ ರೇಣುಕಾ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ನರೇಂದ್ರಬಾಬು, ಡಿಯುಡಿಸಿ ಯೋಜನಾ ನಿರ್ದೇಶಕ ಡಾ.ಎನ್.ಮಹಾಂತೇಶ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.