ಚಿತ್ರದುರ್ಗ ಆಗಸ್ಟ್ 17 : ಕೇಂದ್ರ ಸರ್ಕಾರದಿಂದ ನೇಮಕವಾಗಿರುವ ತಂಡವು ಇದೇ ಆಗಸ್ಟ್ 21 ರಿಂದ 23 ರವರೆಗೆ ಚಿತ್ರದುರ್ಗ ಜಿಲ್ಲೆಗೆ ಭೇಟಿ ನೀಡಲಿದೆ. ಈ ಸಂದರ್ಭದಲ್ಲಿ ಜಲ ಸಂರಕ್ಷಣೆಗಾಗಿ ಜಿಲ್ಲೆಯಲ್ಲಿ ಕೈಗೊಂಡ ಕಾಮಗಾರಿಗಳ ವೀಕ್ಷಣೆ ನಡೆಸಲಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಓ ಎಸ್.ಜೆ.ಸೋಮಶೇಖರ್ ಹೇಳಿದರು.
ಈ ಕುರಿತು ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸಂಬAಧಪಟ್ಟ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
‘ನಾರಿ ಶಕ್ತಿಯಿಂದ ಜಲ ಶಕ್ತಿ’ ಎನ್ನುವ ಘೋಷವಾಕ್ಯದೊಂದಿಗೆ ಮಳೆ ನೀರು ಹಿಡಿದಿಟ್ಟುಕೊಳ್ಳುವ ಸಲುವಾಗಿ ಜಲಶಕ್ತಿ ಅಭಿಯಾನಕ್ಕೆ ರಾಜ್ಯದಲ್ಲಿ ಚಾಲನೆ ನೀಡಲಾಗಿದೆ. ಸರ್ಕಾರದಿಂದ ಕೈಗೊಳ್ಳುವ ಕಾಮಗಾರಿಗಳಲ್ಲಿ ಮಳೆ ನೀರು ಹಿಡಿದಿಟ್ಟುಕೊಳ್ಳುವ ಸಲುವಾಗಿ ಮಳೆ ನೀರು ಕೊಯ್ಲಿನ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಹೀಗೆ ಜಲ ಸಂರಕ್ಷಣೆಗಾಗಿ ಕೈಗೊಂಡ ಕಾಮಗಾರಿಗಳ ವಿವರ ಹಾಗೂ ಮಾಹಿತಿಯನ್ನು ತಾಲ್ಲೂಕು ಪಂಚಾಯಿತಿ ಹಾಗೂ ಅನುಷ್ಠಾನ ಇಲಾಖೆಗಳು ಜಲ ಶಕ್ತಿ ಅಭಿಯಾನ ಪೋರ್ಟಲ್‌ನಲ್ಲಿ ತಪ್ಪದೇ ಅಪ್‌ಲೋಡ್ ಮಾಡಬೇಕು ಎಂದು ಜಿ.ಪಂ ಸಿಇಓ ಎಸ್.ಜೆ.ಸೋಮಶೇಖರ್ ಅಧಿಕಾರಿಗಳಿಗೆ ಸೂಚಿಸಿದರು.
ಜಲ ಸಂರಕ್ಷಣೆಗೆ ಅಂತರ್ ಇಲಾಖೆ ಸಮನ್ವಯ ಅಗತ್ಯ: ಜಲ ಸಂರಕ್ಷಣೆಗೆ ಅಂತರ್ ಇಲಾಖೆ ಸಮನ್ವಯ ಅಗತ್ಯವಾಗಿದೆ ಎಂದು ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್ ಸಭೆಯಲ್ಲಿ ತಿಳಿಸಿದರು.
ನಗರಾಭಿವೃದ್ಧಿ ಹಾಗೂ ಇತರೆ ಸ್ಥಳೀಯ ಆಡಳಿತ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿನ ಚರಂಡಿ, ಕಲುಷಿತ ಹಾಗೂ ಬೂದು ನೀರನ್ನು ಸ್ವಚ್ಚಗೊಳಿಸಿ ಜಲ ಮೂಲಗಳಿಗೆ ಸೇರುವಂತೆ ನೋಡಿಕೊಳ್ಳಬೇಕು. ಹಸಿರು ಪ್ರದೇಶಗಳ ಅಭಿವೃದ್ಧಿ, ಪುರಾತನ ಜಲ ಮೂಲಗಳ ಮರುಪೂರಣ, ಮಳೆ ನೀರು ಕೊಯ್ಲು, ಜಲ ಸಂರಕ್ಷಣೆಗೆ ವೈಜ್ಞಾನಿಕ ಪದ್ದತಿಗಳನ್ನು ಅಳವಡಿಸಿಕೊಳ್ಳಬೇಕು. ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಭೂದಾಖಲೆಗಳ ಇಲಾಖೆ ಜಲ ಮೂಲಗಳ ಒತ್ತುವರಿಯಾಗದಂತೆ ಕ್ರಮವಹಿಸಬೇಕು. ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಮೇಳಗಳ ಮೂಲಕ ಜಲ ಸಂರಕ್ಷಣೆಯ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡಬೇಕು. ಶಿಕ್ಷಣ ಇಲಾಖೆ ಪ್ರತಿ ಶಾಲೆಗಳಲ್ಲಿ ಜಲದೂತ ಅಭಿಯಾನ ಆರಂಭಿಸಿ ಮಕ್ಕಳಲ್ಲಿ ಜಲ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಬೇಕು. ಗ್ರಾಮ ಪಂಚಾಯಿತಿಗಳು ಮನರೇಗಾದಡಿ ಜಲ ಸಂರಕ್ಷಣೆಗೆ ಸಂಬAಧಿಸಿದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗ ಜಲ ಸಂರಕ್ಷಣೆಗೆ ತಾಂತ್ರಿಕವಾಗಿ ನೆರವು ನೀಡಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಹಿಳೆಯರನ್ನು ಮುಖ್ಯ ವಾಹಿನಿಗೆ ತರುವ ಮೂಲಕ ಜಲ ಸಂರಕ್ಷಣೆ ಹಾಗೂ ಜಲ ನಿಯಂತ್ರಣದಲ್ಲಿ ಲಿಂಗ ಸಮಾನತೆ ಮೂಡಿಸಲು ಶ್ರಮಿಸಬೇಕು. 2024ರ ಜಲ ಸಂರಕ್ಷಣೆಯ ಘೋಷವಾಕ್ಯವೇ ‘ನಾರಿ ಶಕ್ತಿಯಿಂದ ಜಲ ಶಕ್ತಿ’ ಎನ್ನುವುದಾಗಿದೆ. ಈ ಇಲಾಖೆಗಳೊಂದಿಗೆ ಯುವಜನ ಕ್ರೀಡಾ ಇಲಾಖೆ ಮೇರಾ ಯುವ ಭಾರತ್ ಎನ್ನುವ ಸ್ವಯಂ ಸೇವಕ ಗುಂಪುಗಳನ್ನು ಸೃಜಿಸಿ ಜಾಗೃತಿ ಮೂಡಿಸಬೇಕು ಎಂದರು.
ನೋಡಲ್ ಅಧಿಕಾರಿಗಳ ನೇಮಕ : ಕೇಂದ್ರ ತಂಡಕ್ಕೆ ಮಾಹಿತಿ ನೀಡುವ ಸಲುವಾಗಿ ಹಾಗೂ ತಂಡ ಭೇಟಿ ನೀಡುವ ಸ್ಥಳಗಳನ್ನು ಗುರುತಿಸುವ ಸಲುವಾಗಿ ಸಭೆಯಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಯಿತು.
ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರರು ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳಾಗಿದ್ದು, ಎಲ್ಲಾ ತಾಲ್ಲೂಕುಗಳಿಂದ ಮಾಹಿತಿ ಪಡೆದುಕೊಳ್ಳಬೇಕು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಚಿತ್ರದುರ್ಗ ಹಾಗೂ ಹೊಳಲ್ಕೆರೆ, ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಹೊಸದುರ್ಗ ಮತ್ತು ಹಿರಿಯೂರು, ಕೃಷಿ ಇಲಾಖೆ ಉಪನಿರ್ದೇಶಕರನ್ನು ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲ್ಲೂಕು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಇವರೊಂದಿಗೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ನಗರ ಸಭೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸಹ ಕೇಂದ್ರ ತಂಡಕ್ಕೆ ಮಾಹಿತಿ ಒದಗಿಸುವಂತೆ ಸಭೆಯಲ್ಲಿ ತಿಳಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ತಿಮ್ಮಪ್ಪ, ನಾಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಬಸವನಗೌಡ ಪಾಟೀಲ್ ಸೇರಿದಂತೆ ಮತ್ತಿತರರು ಇದ್ದರು.