ಬೆಂಗಳೂರು, ಆಗಸ್ಟ್ 25 : ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೋಮವಾರ, ಆಗಸ್ಟ್ 26 ರಂದು ಬೆಂಗಳೂರಿನಲ್ಲಿ ಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಕಸಾಯಿಖಾನೆಗಳಲ್ಲಿ ಪ್ರಾಣಿಗಳ ವಧೆ ಹಾಗೂ ಅಂಗಡಿಗಳಲ್ಲಿ ಮಾಂಸ ಮಾರಾಟವನ್ನು ನಾಳೆಯಿಂದ ನಿಲ್ಲಿಸುವಂತೆ ಬಿಬಿಎಂಪಿಯ ಪಶುಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಕೃಷ್ಣ ಜನ್ಮಾಷ್ಟಮಿಯ ದಿನದಂದು ಮಾಂಸ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದ್ದು, ಈ ದಿನ ಯಾರಿಗೂ ಮಾಂಸ ಅಥವಾ ಹಸಿ ಮೀನು ಮಾರಾಟ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ. ನಗರದಲ್ಲಿ ಮಾಂಸ, ಕೋಳಿ ಮತ್ತು ಮೀನು ಮಳಿಗೆಗಳನ್ನು ವ್ಯಾಪಾರ ಮಾಡುವುದನ್ನು ನಿಷೇಧಿಸಲು ಬಲವಾಗಿ ಶಿಫಾರಸು ಮಾಡಲಾಗಿದೆ. ಆದೇಶ ಮೀರಿ ಮಾರಾಟ ಮಾಡಿದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜನ್ಮಾಷ್ಟಮಿಯನ್ನು ಭಗವಾನ್ ವಿಷ್ಣುವಿನ ಎಂಟನೇ ಅವತಾರವಾದ ಶ್ರೀಕೃಷ್ಣನ ಜನ್ಮದಿನವೆಂದು ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್ 26 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುವುದು. ಈ ಶುಭ ದಿನದಂದು ಜನರು ಮಂತ್ರಗಳನ್ನು ಪಠಿಸುವ ಮೂಲಕ, ಭಜನೆ ಮತ್ತು ಉಪವಾಸದ ಮೂಲಕ ಶ್ರೀಕೃಷ್ಣನನ್ನು ಪೂಜಿಸುತ್ತಾರೆ. ಕೃಷ್ಣನು ಮಧ್ಯರಾತ್ರಿಯಲ್ಲಿ ಜನಿಸಿದನೆಂದು ನಂಬುವ ಭಕ್ತರು ಜನ್ಮಾಷ್ಟಮಿಯಂದು ಸಂಜೆ ಕೃಷ್ಣನನ್ನು ಪೂಜಿಸುತ್ತಾರೆ.
ದೇವಾಲಯಗಳು ಮತ್ತು ಮನೆಗಳನ್ನು ವಿಶಿಷ್ಟವಾಗಿ ಅಲಂಕರಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ನಡೆಯುತ್ತಿದೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಮಥುರಾದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಉದ್ಘಾಟಿಸಲಿದ್ದಾರೆ. ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಹಿನ್ನೆಲೆಯಲ್ಲಿ ಮಥುರಾ ನಗರವನ್ನು ಅಲಂಕರಿಸಲಾಗಿದೆ. ಜನರು ಕೊಳಲು ಬಾರಿಸುವ ಮೂಲಕ ಮತ್ತು ಕೃಷ್ಣನ ವೇಷ ಧರಿಸಿ ಸಂಭ್ರಮಿಸುತ್ತಾರೆ.