ತುಮಕೂರು, ಆಗಸ್ಟ್ 26: ವಾಂತಿಭೇದಿಯಿಂದ ಮೂವರು ಸಾವನ್ನಪ್ಪಿದ್ದು, 11ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ಮಧುಗಿರಿ ತಾಲೂಕಿನ ಬುಳಸಂದ್ರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ತಿಪ್ಪಮ್ಮ (40), ತಿಮ್ಮಕ್ಕ (85) ಮತ್ತು ಗಿರಿಯಮ್ಮ (75) ಮೃತ ದುರ್ದೈವಿಗಳು.
ಕಳೆದ ಶನಿವಾರ ಶ್ರಾವಣ ಮಾಸದ ನಿಮಿತ್ತ ಗ್ರಾಮದಲ್ಲಿ ದೇವರ ಉತ್ಸವ ಏರ್ಪಡಿಸಲಾಗಿತ್ತು. ಮುತ್ತರಾಯಸ್ವಾಮಿ, ಕರಿಮಮ್ಮ, ಭೂತಪ್ಪ ದೇವರ ಆರತಿ ಉತ್ಸವ ನಡೆಯಿತು. ಹಬ್ಬದ ಸಂದರ್ಭದಲ್ಲಿ ಗ್ರಾಮಸ್ಥರು ಪ್ರಸಾದ ಸೇವಿಸಿದರು. ಪ್ರಸಾದ ಸೇವಿಸಿದ್ದರಿಂದ 11 ಮಂದಿಗೆ ವಾಂತಿ, ಬೇಧಿ ಕಾಣಿಸಿಕೊಂಡಿದ್ದು, ಮೂವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾ ಮತ್ತು ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು ರೋಗಿಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡುತ್ತಿದ್ದಾರೆ. ಪ್ರಸಾದ ಸೇವಿಸಿದ್ದರಿಂದ ಅವಘಡ ಸಂಭವಿಸಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ತಹಸೀಲ್ದಾರ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವರ್ಷದ ಜೂನ್‌ನಲ್ಲಿ ಮಧುಗಿರಿ ತಾಲೂಕಿನ ಚೆನ್ನೇಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಮೂರು ವರ್ಷದ ಮಗು ಸೇರಿದಂತೆ ಮೂವರು ಮೃತಪಟ್ಟಿದ್ದರು. ಚೆನ್ನೇಹಳ್ಳಿ ಗ್ರಾಮದ ಓವರ್‌ಹೆಡ್ ಟ್ಯಾಂಕ್ ಹಾಗೂ ನೀರು ಶುದ್ಧೀಕರಣ ಘಟಕದ ನೀರು ಕುಡಿದು ಗ್ರಾಮಸ್ಥರು ಭೇದಿಯಿಂದ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ಆದರೆ, ದುರದೃಷ್ಟವಶಾತ್ ಮೂವರು ಸಾವನ್ನಪ್ಪಿದ್ದಾರೆ.