ಬೆಂಗಳೂರು : ಬೈಕ್ಗೆ ಕಾರೊಂದು ಡಿಕ್ಕಿ ಹೊಡೆದು ಮೇಲ್ಸೇತುವೆಯಿಂದ ಉರುಳಿ ಬಿದ್ದ ಪರಿಣಾಮ ಭೀಕರ ಅಪಘಾತ ಸಂಭವಿಸಿರುವ ಘಟನೆ ಯಶವಂತಪುರ ನಗರದಲ್ಲಿ ನಡೆದಿದೆ. ಬೈಕ್ ನಲ್ಲಿದ್ದ ಇಬ್ಬರು ಹಾಗೂ ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ.
ಮುಂಜಾನೆ 3:45 ರ ಸುಮಾರಿಗೆ ಈ ಘಟನೆ ನಡೆದಿದೆ. ಸ್ಯಾಂಕಿ ರಸ್ತೆಯಿಂದ ತುಮಕೂರು ರಸ್ತೆ ಕಡೆಗೆ ಹೋಗುತ್ತಿದ್ದ ಕಾರು ಮೀಡಿಯನ್ ಮೇಲ್ಸೇತುವೆಯನ್ನು ವೇಗದಲ್ಲಿ ಹಾರಿ ಎದುರಿನಿಂದ ಬರುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಕಾರು ಮೇಲ್ಸೇತುವೆಯಿಂದ ಕೆಳಗೆ ಬಿದ್ದಿದೆ. ಚಾಲಕ ಪಾನಮತ್ತನಾಗಿದ್ದ ಮತ್ತು ಆತನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂದು ಶಂಕಿಸಲಾಗಿದೆ.
ಕಾರಿನಲ್ಲಿ ಖಾಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಮೂವರು ಯುವಕರು ತಮಿಳುನಾಡು ನೋಂದಣಿ ಸಂಖ್ಯೆಯ ಫೋಕ್ಸ್ವ್ಯಾಗನ್ ವೆಂಟೊ ಟಿಎನ್ 37 ಡಿಹೆಚ್ 9484 ರಲ್ಲಿ ಪ್ರಯಾಣಿಸುತ್ತಿದ್ದರು. ಯಶವಂತಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗಾಯಾಳುಗಳನ್ನು ಪೊಲೀಸರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.