ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಖಾನಕೋಣ ಗ್ರಾಮದಲ್ಲಿ ಇಂದು ಮುಂಜಾನೆ ಮಹಾರಾಷ್ಟ್ರದ ಪುಣೆ ಮೂಲದ ಉದ್ಯಮಿ ವಿನಾಯಕ ನಾಯ್ಕ ಎಂಬುವವರನ್ನು ಅವರ ಮನೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ದುಷ್ಕರ್ಮಿಗಳು ದಂಪತಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದು, ಪತಿ ವಿನಾಯಕ ನಾಯ್ಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪತ್ನಿಗೆ ಗಂಭೀರ ಗಾಯಗಳಾಗಿವೆ.
ಮಹಿಳೆಯನ್ನು ಚಿಕಿತ್ಸೆಗಾಗಿ ಕಾರವಾರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಕೊಲೆ ಮಾಡಿದವರು ಯಾರು ಮತ್ತು ಏಕೆ ಎಂದು ತಿಳಿದುಬಂದಿಲ್ಲ. ಚಿತಾಕುಲ್ ಪೊಲೀಸ್ ಠಾಣೆ ಬಳಿ ಈ ಘಟನೆ ನಡೆದಿದೆ. ಪತ್ನಿಯೊಂದಿಗೆ ಪುಣೆಯಲ್ಲಿ ನೆಲೆಸಿದ್ದ ವಿನಾಯಕ್ ಕಳೆದ ವಾರ ಗ್ರಾಮ ದೇವತೆ ಜಾತ್ರೆಗೆಂದು ಕಾರವಾರಕ್ಕೆ ಬಂದಿದ್ದರು.
ಇಂದು ಬೆಳಗ್ಗೆ ಪುಣೆಗೆ ಹೋಗುವುದಾಗಿ ಗೆಳೆಯರಿಗೆ ತಿಳಿಸಿದರು. ಮುಂಜಾನೆ ಮಚ್ಚಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವುದು ಭಾರೀ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.