Breaking
Mon. Dec 23rd, 2024

ಪೂರ್ವಭಾವಿ ಸಭೆಯಲ್ಲಿ ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ: ಅರ್ಥಪೂರ್ಣ ಆಚರಣೆ….

ಚಿತ್ರದುರ್ಗ : ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಜಿಲ್ಲಾ ಕೇಂದ್ರದಲ್ಲಿ ಇದೇ ಅಕ್ಟೋಬರ್ 17 ರಂದು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಅಗತ್ಯ ಪೂರ್ವಸಿದ್ಧತೆ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಸಂಬಂಧ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಯಂತಿ ಅಂಗವಾಗಿ ಅಕ್ಟೋಬರ್ 17ರಂದು ಬೆಳಿಗ್ಗೆ 10ಕ್ಕೆ ನಗರದ ಐತಿಹಾಸಿಕ ಕೋಟೆ ಮುಂಭಾಗದಿಂದ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ಪ್ರಾರಂಭವಾಗಿ ಆನೆಬಾಗಿಲು ಮೂಲಕ, ಗಾಂಧಿವೃತ್ತ, ಮದಕರಿ ನಾಯಕ ವೃತ್ತದ ಮೂಲಕ ತರಾಸು ರಂಗಮಂದಿರ ತಲುಪಲಿದೆ. ಮಧ್ಯಾಹ್ನ 12ಕ್ಕೆ ನಗರದ ತರಾಸು ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಸರ್ಕಾರದ ಶಿಷ್ಟಾಚಾರದ ಅನುಸಾರ ಆಹ್ವಾನ ಪತ್ರಿಕೆ ಮುದ್ರಿಸಿ, ಜನಪ್ರತಿನಿಧಿಗಳನ್ನು ಜಯಂತಿಗೆ ಕರೆಯಲಾಗುವುದು. ಉತ್ತಮ ವಾಗ್ಮಿಗಳಿಂದ ಉಪನ್ಯಾಸ ಹಾಗೂ ಗೀತ ಗಾಯನ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.

ನಗರಸಭೆ ವತಿಯಿಂದ ತ.ರಾ.ಸು ರಂಗಮಂದಿರ ಸ್ವಚ್ಛತಾ ಕಾರ್ಯ ಹಾಗೂ ಶುದ್ಧ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಕಲ್ಪಿಸಬೇಕು. ತೋಟಗಾರಿಕೆ ಇಲಾಖೆ ವತಿಯಿಂದ ವೇದಿಕೆ ಕಾರ್ಯಕ್ರಮದ ಸ್ಥಳದಲ್ಲಿ ಹೂವಿನ ಕುಂಡಗಳನ್ನು ನೀಡಬೇಕು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇಲಾಖೆ ಅಧಿಕಾರಿಗಳು ತ.ರಾ.ಸು ರಂಗಮಂದಿರ ಕಾಯ್ದಿರಿಸುವುದರೊಂದಿಗೆ ಅಗತ್ಯ ಕಲಾತಂಡದ ವ್ಯವಸ್ಥೆ ಮಾಡುವಂತೆ ತಿಳಿಸಿದರು.

ಜಿಲ್ಲಾ ಮಟ್ಟದಲ್ಲಿ ಶ್ರೀ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಹಾಗೂ ಜಯಂತಿ ಯಶಸ್ವಿಗೆ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದ ಅವರು, ವಸತಿ ನಿಲಯ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿಚಾರ ಸಂಕಿರಣ, ಉಪನ್ಯಾಸ ಮಾಲಿಕೆ ಕಾರ್ಯಕ್ರಮ ಏರ್ಪಡಿಸಿ, ನಂತರ ಭಾಷಣ, ಪ್ರಬಂಧ ಸ್ಪರ್ಧೆ ಕಾರ್ಯಕ್ರಮ ಹಮ್ಮಿಕೊಂಡು ವಾಲ್ಮೀಕಿ ಕುರಿತು ಅರಿವು ಮೂಡಿಸಬೇಕು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಗೆ ಕ್ರಮ ವಹಿಸಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.  

ಚಿತ್ರದುರ್ಗ ನಗರದ ಮದಕರಿ ವೃತ್ತದಲ್ಲಿ ನಿರ್ಮಿಸಲಾಗಿರುವ ವಾಲ್ಮೀಕಿ ಭವನ ಅವೈಜ್ಞಾನಿಕವಾಗಿ ನಿರ್ಮಾಣವಾಗಿದ್ದು, ಇಲ್ಲಿ ಯಾವುದೇ ಕಾರ್ಯಕ್ರಮ ಆಯೋಜನೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ವಾಲ್ಮೀಕಿ ಭವನ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಹಸ್ತಾಂತರವಾಗಿಲ್ಲ. ಕೆಲವು ತಾಂತ್ರಿಕ ಸಮಸ್ಯೆಗಳು ಇದ್ದು, ಈ ಕುರಿತು ಸಂಬಂಧಪಟ್ಟವರು ಅಗತ್ಯ ಕ್ರಮ ವಹಿಸಬೇಕು ಎಂದು ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಬಿ.ಕಾಂತರಾಜ್ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ದನಿಗೂಡಿಸಿದ ನಗರಸಭೆ ಸದಸ್ಯ ವೆಂಕಟೇಶ್, ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ವಾಲ್ಮೀಕಿ ಭವನ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ನಗರದ ಮಧ್ಯಭಾಗದಲ್ಲಿರುವ ವಾಲ್ಮೀಕಿ ಭವನ ಯಾವ ಉದ್ದೇಶಕ್ಕೆ ನಿರ್ಮಾಣವಾಗಿದೆಯೋ ಅದು ಸದುಪಯೋಗವಾಗಬೇಕು. ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಆಸಕ್ತಿವಹಿಸಿ ಸಂಬಂಧಪಟ್ಟವರ ಜೊತೆ ಚರ್ಚಿಸಿ, ಸಭೆ ನಡೆಸಿ, ತಕ್ಷಣವೇ ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಕಚೇರಿ ಸ್ಥಳಾಂತರಿಸಿ:

*********ಚಿತ್ರದುರ್ಗ ನಗರದ ಜೆಸಿಆರ್ 4ನೇ ಕ್ರಾಸ್, ಗಣೇಶ ದೇವಸ್ಥಾನ ಹತ್ತಿರ ಇರುವ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯನ್ನು ಸಾರ್ವಜನಿಕರ ಹಿತದೃಷ್ಠಿಯಿಂದ ನಗರದ ಬಿ.ಡಿ.ರಸ್ತೆಯ ಪ್ರವಾಸಿ ಮಂದಿರದ ಸಮೀಪ ಲಿಡ್ಕರ್ ಭವನಕ್ಕೆ ಸ್ಥಳಾಂತರಿಸಬೇಕು ಎಂದು ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮವಹಿಸಿಲ್ಲ. ವಾಲ್ಮೀಕಿ ಜಯಂತಿಯಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಉದ್ಘಾಟನೆ ಕಾರ್ಯ ಆಗಬೇಕು ಎಂದು ನಾಯಕ ಸಮಾಜದ ಮುಂಡರು ಉಪವಿಭಾಗಾಧಿಕಾರಿ ಎಂ.ಕಾರ್ತಿಕ್‍ಗೆ ಮನವಿ ಮಾಡಿದರು.

 ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾ ಕಚೇರಿ ಸ್ಥಳಾಂತರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಭರವಸೆ ನೀಡಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಕಾಳೆಸಿಂಗೆ, ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಬಿ.ಕಾಂತರಾಜ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೆಚ್.ದಿವಾಕರ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ ಸೇರಿದಂತೆ ನಗರಸಭೆ ಸದಸ್ಯರಾದ ದೀಪು, ವೆಂಕಟೇಶ್, ಸಮಾಜದ ಮುಖಂಡರಾದ ಡಿ.ಗೋಪಾಲಸ್ವಾಮಿ ನಾಯಕ, ರತ್ನಮ್ಮ, ಪ್ರಶಾಂತ ನಾಯಕ, ರಾಜ ಮದಕರಿ ನಾಯಕ, ಗೋಪಿ, ಕಾಟಿಹಳ್ಳಿ ಕರಿಯಣ್ಣ, ಇಂಗಳದಾಳ್ ದರ್ಶನ್ ಸೇರಿದಂತೆ ಮತ್ತಿತರರು ಇದ್ದರು.

Related Post

Leave a Reply

Your email address will not be published. Required fields are marked *