Breaking
Mon. Dec 23rd, 2024

“ಸಬರಮತಿಯಿಂದ ದಂಡಿಯವರೆಗೆ ಗಾಂಧೀಜಿ ನಡೆಸಿದ ದಂಡಿ ಯಾತ್ರೆಯ ಮಾರ್ಗ ಸುಮಾರು 388 ಕಿಮೀ ರಸ್ತೆ ಅಭಿವೃದ್ಧಿ ಮಾಡಿದ ಕೀರ್ತಿ ನಂದು: ಸಚಿವ ಮುನಿಯಪ್ಪ”…!

ಬೆಂಗಳೂರು ಗ್ರಾಮಾಂತರ ಜಿಲ್ಲೆ : ಮಹಾತ್ಮ ಗಾಂಧೀಜಿಯವರ 155 ನೇ ಜಯಂತಿಯ ಹಾರ್ಧಿಕ ಶುಭಾಶಯಗಳು ಹಾಗೂ ಲಾಲಾ ಬಹಾದೂರ್ ಶಾಸ್ತ್ರಿ ರವರ ಜನ್ಮದಿನದ ಶುಭಾಶಯಗಳನ್ನು ಕೋರುತ್ತಾ…  ಭಾರತವನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಮುಕ್ತಗೊಳಿಸಿದವರು, ಜಗತ್ತು ಮೆಚ್ಚಿಕೊಂಡ ಮಹಾನ್ ಚೇತನರು. ಗಾಂಧೀಜಿಯವರು ರಾಷ್ಟ್ರಪಿತರೆಂದೇ ಪ್ರಸಿದ್ಧರಾದವರು. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಅಹಿಂಸಾ ನೀತಿಯನ್ನು ಪ್ರತಿಪಾದಿಸುವ ಮೂಲಕ ಸ್ವಾತಂತ್ರ್ಯ ಸಂಗ್ರಾಮ ರೂವಾರಿಯಾಗಿ ಸ್ವಾತಂತ್ರ್ಯ ತಂದುಕೊಟ್ಟರು. 

          ಹಲವಾರು ರಾಷ್ಟ್ರೀಯ ನಾಯಕರೊಂದಿಗೆ, ಮಹಾತ್ಮ ಗಾಂಧಿಯವರು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದರು. ಪ್ರಪಂಚದಾದ್ಯಂತ, ವಿವಿಧ ನಾಗರಿಕ ಹಕ್ಕುಗಳ ಗುಂಪುಗಳು ಅವರ ಅಹಿಂಸಾತ್ಮಕ ವಿಧಾನದಿಂದ ಸ್ಫೂರ್ತಿ ಪಡೆದರು. 

           ಗಾಂಧೀಜಿ ತನ್ನ ಸತ್ಯ, ಅಹಿಂಸೆಯ ಸಿದ್ಧಾಂತದಿಂದಲೇ ಜಗವನ್ನು ಗೆದ್ದ ಚೇತನ. ಹೀಗಾಗಿ ವಿಶ್ವದಾದ್ಯಂತ ಗಾಂಧಿ ಜಯಂತಿ ದಿನವನ್ನು ಆಚರಿಸಲಾಗುತ್ತದೆ. ಗಾಂಧೀಜಿ ಅವರ ಶಾಂತಿ ಮತ್ತು ಅಹಿಂಸಾ ತತ್ವವನ್ನು ಗೌರವಿಸುವ ಸಲುವಾಗಿ ಈ ದಿನವನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿಯೂ ಆಚರಣೆ ಮಾಡಲಾಗುತ್ತದೆ.

◆ ಗಾಂಧೀಜಿಯವರ ಜೀವನ ಚರಿತ್ರೆ : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪೂರ್ಣ ಹೆಸರು ಮೋಹನದಾಸ್ ಕರಮಚಂದ್ ಗಾಂಧಿ. ಇವರು ಅಕ್ಟೋಬರ್ 2, 1869 ರಲ್ಲಿ ಭಾರತದ ಗುಜರಾತ್ ರಾಜ್ಯದ ಪೋರಬಂದರ್ ನಲ್ಲಿ ಜನಿಸಿದರು. ಇವರ ತಂದೆ ಕರಮಚಂದ್ರ ಗಾಂಧಿ, ತಾಯಿ ಪುತಲೀಬಾಯಿ. 13 ನೆಯ ವಯಸ್ಸಿನಲ್ಲಿ ಗಾಂಧೀಜಿ ಕಸ್ತೂರಿ ಬಾ ಅವರನ್ನು ವಿವಾಹವಾದರು. ಗಾಂಧಿಯವರು ತಮ್ಮ ಆರಂಭಿಕ ಶಿಕ್ಷಣವನ್ನು ಪೋರಬಂದರ್ನಲ್ಲಿ ಪಡೆದರು. ಉನ್ನತ ಶಿಕ್ಷಣವನ್ನು ಲಂಡನ್ನಲ್ಲಿ ಪಡೆದರು.

 1893 ರಲ್ಲಿ ವಕೀಲರಾಗಿ ಕೆಲಸ ಮಾಡಲು ದಕ್ಷಿಣ ಆಫ್ರಿಕಾಕ್ಕೆ ತೆರಳಲು ನಿರ್ಧರಿಸಿದರು. ದಕ್ಷಿಣ ಆಫ್ರಿಕಾದಲ್ಲಿ ಗಾಂಧಿಯವರು ಭಾರತೀಯರ ವಿರುದ್ಧ ಜನಾಂಗೀಯ ತಾರತಮ್ಯ ಮತ್ತು ಪೂರ್ವಾಗ್ರಹದ ಕಟುವಾದ ವಾಸ್ತವತೆಯನ್ನು ಎದುರಿಸಿದರು. 

◆ ಮಹಾತ್ಮ ಗಾಂಧಿಯವರ ಕೊಡುಗೆಗಳು:-    ಗಾಂಧೀಜಿ ಸತ್ಯ, ಅಹಿಂಸೆ, ಸತ್ಯಾಗ್ರಹ ಮತ್ತು ಅಸಹಕಾರ ಚಳುವಳಿಗಳ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಅವರ ಜೀವನ ಸರಳತೆಯ ದಾರಿದೀಪವಾಗಿದ್ದು, ಶಾಂತಿಯುತ ಮಾರ್ಗಗಳ ಮೂಲಕ ಮಹತ್ತರವಾದ ಬದಲಾವಣೆಯನ್ನು ಸಾಧಿಸಬಹುದು ಎಂದು ಸಾಬೀತು ಮಾಡಿದರು.

 ಗಾಂಧೀಜಿ ಅಹಿಂಸೆಯ ದೃಢವಾದ ಪ್ರತಿಪಾದಕರಾಗಿದ್ದರು, ಇದು ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗೆ ಅತ್ಯಂತ ಪ್ರಬಲವಾದ ಅಸ್ತ್ರ ಎಂದು ಅವರು ನಂಬಿದ್ದರು. ಉಪ್ಪಿನ ಸತ್ಯಾಗ್ರಹ ಮತ್ತು ಭಾರತ ಬಿಟ್ಟು ತೊಲಗಿ ಮುಂತಾದ ಚಳುವಳಿಗಳ ಮೂಲಕ ಅಹಿಂಸೆಯ ಶಕ್ತಿಯನ್ನು ಪ್ರದರ್ಶಿಸಿದರು. 

◆ ದಂಡಿ ಉಪ್ಪಿನ ಸತ್ಯಾಗ್ರಹ:-     ಉಪ್ಪಿನ ಕಾನೂನನ್ನು ಮುರಿಯಲು 1930 ರ ಮಾರ್ಚ್ 12 ರಂದು ದಂಡಿಯಾತ್ರೆಯನ್ನು ಸಬರಮತಿ ಆಶ್ರಮದಿಂದ ಆರಂಭಿಸಿ, 1930 ಏಪ್ರಿಲ್‌ 06 ರಂದು ದಂಡಿ ತಲುಪಿತು. ಸುಮಾರು 388 ಕಿಮೀ ದೂರದ ಪಾದಯಾತ್ರೆಯಲ್ಲಿ 78 ನಿಷ್ಠಾವಂತ ಅನುಯಾಯಿಗಳು ಸೇರಿ 60 ಸಾವಿರ ಹೋರಾಟಗಾರರೊಂದಿಗೆ ನಡೆಸಿದ ಉಪ್ಪಿನ ಸತ್ಯಾಗ್ರಹ ದೇಶದ ಐತಿಹಾಸಿಕ ಸ್ವಾತಂತ್ರ್ಯ ಹೋರಾಟವಾಗಿದೆ.

               ಮಹಾತ್ಮ ಗಾಂಧಿಜೀಯವರು ಸಬರಮತಿ ಆಶ್ರಮದಿಂದ ದಂಡಿಯವರೆಗೂ ಉಪ್ಪಿನ ಸತ್ಯಾಗ್ರಹ ಕೈಗೊಂಡ ಹೆದ್ದಾರಿಯನ್ನು ಅಂದು ನಾನು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ರಾಜ್ಯ ಸಚಿವನಾಗಿದ್ದಾಗ ಸುಮಾರು 388 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸುವ ಅವಕಾಶ ಸಿಕ್ಕಿದ್ದು ನನ್ನ ರಾಜಕೀಯ ಜೀವನದ ಅತ್ಯಂತ ಅವಿಸ್ಮರಣೀಯವಾದುದಾಗಿದೆ.

 ಈ ಹೆದ್ದಾರಿ ನಿರ್ಮಾಣದ ಪರಿವೀಕ್ಷಣೆಯನ್ನು ನಡೆಸಿದ ಸಂದರ್ಭದಲ್ಲಿ ಅಲ್ಲಿನ ಹಿರಿಯರೊರ್ವರು ಗಾಂಧಿಯವರ ದಂಡಿಯಾತ್ರೆ ಹಾದು ಹೋಗುತ್ತಿರುವಾಗ ಬ್ರಿಟಿಷರ ಅಕ್ರಮಣ ಎದುರಿಸಬೇಕಾಯಿತು ಆಗ ಈ ಗ್ರಾಮದ ಇಬ್ಬರು ಯುವಕರು ತಮ್ಮ ಪ್ರಾಣತೆತ್ತು ದಂಡಿಯಾತ್ರೆ ಮುಂದುವರೆಯಲು ಕಾರಣೀಭೂತರಾದ ಪ್ರಯುಕ್ತ ಅವರ ಸ್ಮಾರಕಗಳನ್ನು ಇಲ್ಲಿ ನಿರ್ಮಿಸಲಾಗಿದೆ ಎಂದು ತಿಳಿಸಿದರು. ನನ್ನ ಮನಸ್ಸು ಮರುಗಿತು. ಗಾಂಧಿಜೀಯವರ ನೇತೃತ್ವದ ಸ್ವಾತಂತ್ರ್ಯ ಹೋರಾಟದಲ್ಲಿ ಜೀವತೆತ್ತ ಸಾವಿರಾರು ತ್ಯಾಗ ಜೀವಿಗಳ ತ್ಯಾಗದ ಫಲವಾಗಿ ನಾವು ಸ್ವಾತಂತ್ರ್ಯ ಜೀವನವನ್ನು ನಡೆಸುತಿದ್ದೇವೆ. ಅವರನ್ನು ಸ್ಮರಿಸಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯವಾಗಿದೆ.  

◆ ಬೆಳಗಾವಿ ಕಾಂಗ್ರೆಸ್ ಅಧಿವೇಶನ:-    ಮಹಾತ್ಮ ಗಾಂಧೀಜಿಯವರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾಗ ಅವರ ಅಧ್ಯಕ್ಷತೆಯಲ್ಲಿ 1924, ಡಿಸೆಂಬರ್ 20 ರಂದು ಏಕೈಕ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ಬೆಳಗಾವಿಯಲ್ಲಿ ನಡೆಯಿತು. ಈ ಅಧಿವೇಶನದಲ್ಲಿ ಗಾಂಧೀಜಿಯವರು 10 ನಿಮಿಷಗಳ ಅಧ್ಯಕ್ಷೀಯ ಭಾಷಣದಲ್ಲಿ ದೇಶ ಬಾಂಧವರಲ್ಲಿ ಒಗ್ಗಟ್ಟು, ಸ್ಥಳೀಯ ಭಾಷೆಯ ಮಹತ್ವ, ಅಸ್ಪೃಶ್ಯತೆ, ಸ್ವರಾಜ್ಯ ಕುರಿತು ಮಾತನಾಡಿದರು.

                   ದೇಶದ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ 1924 ರಲ್ಲಿ ಬೆಳಗಾವಿಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಮಹಾತ್ಮ ಗಾಂಧಿಯವರು ವಹಿಸಿದ್ದು, ಈ ಐತಿಹಾಸಿಕ ಘಟನೆಯ ಶತಮಾನೋತ್ಸವ ಸಂಭ್ರಮವನ್ನು ಅರ್ಥಪೂರ್ಣವಾಗಿ, ಸಂಭ್ರಮಯುತವಾಗಿ ಮತ್ತು ವೈಶಿಷ್ಟ್ಯ ಪೂರ್ಣವಾಗಿ ಆಚರಿಸಲಾಗುತ್ತಿದೆ

 

◆ ನಂದಿಗಿರಿ ಧಾಮದಲ್ಲಿ ವಾಸ್ತವ್ಯ:-

                   ಸ್ವಾತಂತ್ರ್ಯಕ್ಕಾಗಿ ದಣಿವಯರಿದೆ ಹೋರಾಟ ನಡೆದು ಆರೋಗ್ಯ ವ್ಯತ್ಯಯವಾದಾಗ ಅವರ ಆರೋಗ್ಯ ಸುಧಾರಣೆಗೆ 1927ರಲ್ಲಿ ಮೊದಲನೇ ಬಾರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ಧ ನಂದಿಗಿರಿಧಾಮದಲ್ಲಿ ಗಾಂಧೀಜಿಯವರು ತಮ್ಮ ಆರೋಗ್ಯ ಸುಧಾರಿಸಿಕೊಳ್ಳಲು 45 ದಿನ 1936 ಎರಡನೇ ಬಾರಿ 20 ದಿನ ಕಾಲ ವಿಶ್ರಾಂತಿ ತೆಗೆದುಕೊಳ್ಳಲು ಈ ಸ್ಥಳವನ್ನು ಆಯ್ಕೆ ಮಾಡಿದ್ದು, ಈ ಭಾಗದ ಜನರಿಗೆ ಹೆಮ್ಮೆಯ ವಿಷಯವಾಗಿದೆ. 

 

◆ದೊಡ್ಡಬಳ್ಳಾಪುರಕ್ಕೆ ಗಾಂಧೀಜಿ:-

                     ಜಗತ್ತಿನ ಮೇರು ವ್ಯಕ್ತಿಗಳಲ್ಲಿ ಒಬ್ಬರಾದ ಮಹಾತ್ಮಗಾಂಧೀಜಿ ದೊಡ್ಡಬಳ್ಳಾಪುರಕ್ಕೆ ಬಂದಿದ್ದರು’ – ಎಂದು ಹೇಳಿಕೊಳ್ಳುವುದೇ ಹೆಮ್ಮೆಯ ವಿಷಯ. 1934ರ ಜನವರಿ 4 ರಂದು ದೊಡ್ಡಬಳ್ಳಾಪುರಕ್ಕೆ ಭೇಟಿ ನೀಡಿದ್ದ ಗಾಂಧಿಯನ್ನು ಕಂಡ ಹಿರಿಯರಿಗೆ ಏನೋ ಧನ್ಯತಾಭಾವ. ದೊಡ್ಡಬಳ್ಳಾಪುರಕ್ಕೆ ಗಾಂಧೀಜಿ ಭೇಟಿ ನೀಡಿದ್ದ ವೇಳೆ ಇಲ್ಲಿನ ಜನತೆಗೆ ದೇಶ ಪ್ರೇಮದ ಭಾಷಣ ಮಾಡಿದ್ದರು.

 

ಸಿದ್ದಲಿಂಗಯ್ಯ, ರುಮಾಲೆ ಭದ್ರಣ್ಣ, ಮುಗುವಾಳಪ್ಪ ಮೊದಲಾದವರು ಸ್ವಾತಂತ್ರ್ಯ ಹೋರಾಟಗಾರರಾಗಿ ರೂಪಗೊಳ್ಳಲು ಗಾಂಧೀಜಿ ಪ್ರೇರಣೆಯಾದರು. 

 

ಪುರಸಭೆ ವತಿಯಿಂದ ಗಾಂಧೀಜಿಗೆ ಭಿನ್ನವತ್ತಳೆ ನೀಡಿ ಸನ್ಮಾನಿಸಿ, ಹರಿಜನ ನಿಧಿಗಾಗಿ ಅಂದಿನ ಕಾಲದಲ್ಲಿಯೇ 500ರೂ. ಸಂಗ್ರಹಿಸಿ ನೀಡಲಾಗಿತ್ತು. 

 

ಗಾಂಧೀಜಿ ಉಪನ್ಯಾಸ ನೀಡಿದ ಸ್ಮರಣಾರ್ಥವಾಗಿ ದೊಡ್ಡಬಳ್ಳಾಪುರದ ಆ ಸ್ಥಳಕ್ಕೆ ಗಾಂಧಿನಗರ ಎಂದು ನಾಮಕರಣ ಮಾಡಲಾಗಿತ್ತು. ಅದೇ ಇಂದಿಗೂ ಹಳೇ ಬಸ್ ನಿಲ್ದಾಣ ಸಮೀಪದ ಪೇಟೆಗೆ ಗಾಂಧಿನಗರ ಅಂತಾ ಹೆಸರಿದೆ.                 

            ಜಾತ್ಯಾತೀತತೆ ಗಾಂಧಿಯವರ ಮತ್ತೊಂದು ಕೊಡುಗೆಯಾಗಿದೆ. ಯಾವುದೇ ಧರ್ಮವು ಸತ್ಯದ ಮೇಲೆ ಏಕಸ್ವಾಮ್ಯವನ್ನು ಹೊಂದಿರಬಾರದು ಎಂಬುದು ಅವರ ನಂಬಿಕೆಯಾಗಿತ್ತು. ಮಹಾತ್ಮ ಗಾಂಧಿಯವರು ನಿಸ್ಸಂಶಯವಾಗಿ ವಿವಿಧ ಧರ್ಮಗಳ ನಡುವೆ ಸೌಹಾರ್ದವನ್ನು ಪ್ರೋತ್ಸಾಹಿಸಿದರು

 

◆ ಸ್ವಚ್ಚತಾ ಆಭಿಯಾನ:-

                    ಅಕ್ಟೋಬರ್ 2, 2014 ರಂದು, ಭಾರತವು ಮಹಾತ್ಮಾ ಗಾಂಧಿಯವರ ಬೋಧನೆಗಳು ಮತ್ತು ನಂಬಿಕೆಗಳ ಆಧಾರದ ಮೇಲೆ “ಸ್ವಚ್ಛ ಭಾರತ ಅಭಿಯಾನ” ಅಥವಾ “ಸ್ವಚ್ಛ ಭಾರತ ಮಿಷನ್” ಅನ್ನು ಪ್ರಾರಂಭಿಸಿತು, ಬಯಲು ಮಲವಿಸರ್ಜನೆಯನ್ನು ನಿರ್ಮೂಲನೆ ಮಾಡುವ ಮತ್ತು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಘನ ತ್ಯಾಜ್ಯ ನಿರ್ವಹಣೆಯನ್ನು ಹೆಚ್ಚಿಸುವ ಗುರಿಯೊಂದಿಗೆ. ಭಾರತೀಯ ಜನರು ಗಾಂಧಿ ಜಯಂತಿಗೆ ಹೆಚ್ಚಿನ ಒತ್ತು ನೀಡುತ್ತಾರೆ

                  ಮಹಾತ್ಮಗಾಂಧೀಜಿಯವರ ಚಿಂತನೆಗಳ ಆಶಯದಲ್ಲಿ 2023ರಲ್ಲಿ ಅಧಿಕಾರಕ್ಕೆ ಬಂದ ನಮ್ಮ ಸರ್ಕಾರ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ಹಾಗೂ ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ರವರ ನೇತೃತ್ವದಲ್ಲಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಸಮರ್ಪಕವಾಗಿ ಅನುಷ್ಠಾನಗೊಳಿಸಿದೆ. 

               ಶಕ್ತಿ ಯೋಜನೆಯ ಮೂಲಕ ಮಹಿಳೆಯರಲ್ಲಿ ಮುಕ್ತವಾಗಿ ಓಡಾಡುವ ಮೂಲಕ ಮಹಿಳಾ ಸ್ವಾವಲಂಬನೆಯನ್ನು ತರಲಾಗಿದೆ. ಗೃಹಲಕ್ಷ್ಮೀ ಯೋಜನೆಯ ಮೂಲಕ ಮಹಿಳೆಯವರ ಆರ್ಥಿಕ ಸಬಲೀಕರಣ ಮಾಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯ ಮೂಲಕ ಹಸಿವುಮುಕ್ತ ಕರ್ನಾಟಕ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ 10 ಕೆ.ಜಿ. ಅಕ್ಕಿ ನೀಡಲು (5 ಕೆ.ಜಿ. ಅಕ್ಕಿ ಮತ್ತು 5 ಕೆ.ಜಿ. ಅಕ್ಕಿ ಬದಲಿಗೆ DBT ಮೂಲಕ ನಗದು ವರ್ಗಾವಣೆ) ಕ್ರಮ ವಹಿಸಲಾಗುತ್ತಿದೆ. ಯುವನಿಧಿ ಮೂಲಕ ನಿರುದ್ಯೋಗಿ ಯುವಕರ ಉದ್ಯೋಗ ಪಡೆಯಲು ಅನುಕೂಲವಾಗುವಂತೆ ಮಾಸಿಕ ಭತ್ಯೆಯನ್ನು ನೀಡಲಾಗುತ್ತಿದೆ. 

              ಮಹಾತ್ಮ ಗಾಂಧೀಜಿಯವರು ಹಸಿವಿನಿಂದ ಯಾರು ಕೂಡ ಸಾಯಬಾರದು, ಹಸಿವುಮುಕ್ತ ಭಾರತ ನಿರ್ಮಾಣವಾಗಬೇಕು ಎಂಬ ಚಿಂತನೆಯಂತೆ 2013ರಲ್ಲಿ ಅಂದಿನ ಪ್ರಧಾನಮಂತ್ರಿ ಮನಮೋಹನ್ಸಿಂಗ್ ನೇತೃತ್ವದ ಯುಪಿಎ-2 ಅವಧಿಯಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ-2013ನ್ನು ಜಾರಿಗೆ ತರಲಾಯಿತು. 

               ಕರ್ನಾಟಕದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು 2013ರಲ್ಲಿ ಮೊದಲಿಗೆ ಅನುಷ್ಠಾನಗೊಳಿಸಿದ ಕೀರ್ತಿಗೆ ಪಾತ್ರವಾಯಿತು. ಅನ್ನಭಾಗ್ಯ ಯೋಜನೆ ಪ್ರಾರಂಭವಾಗಿ ಒಂದು ದಶಕ ಕಳೆದಿದೆ. ನಾನು ಆಹಾರ ಮಂತ್ರಿಯಾಗಿ ಅನ್ನಭಾಗ್ಯ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಹಸಿವುಮುಕ್ತ ಕರ್ನಾಟಕ ಮಾಡಲು ಪಣತೊಟ್ಟು ಕೆಲಸ ಮಾಡುತ್ತಿದ್ದೇವೆ. 1.28 ಕೋಟಿ ಕಾರ್ಡ್ದಾರರು 4.37 ಕೋಟಿ ಫಲಾನುಭವಿಗಳಿಗೆ 5 ಕೆ.ಜಿ. ಅಕ್ಕಿ ಹಾಗೂ 5 ಕೆ.ಜಿ. ಮೊತ್ತ DBT ನಗದು ವರ್ಗಾವಣೆಯನ್ನು ಮಾಡಲಾಗುತ್ತಿದೆ. ಜುಲೈ-2023 ರಿಂದ ಜುಲೈ-2024 ರವರೆಗೆ ರೂ. 8,437.66 ಕೋಟಿ ನಗದು ವರ್ಗಾವಣೆ ಮಾಡಲಾಗಿದೆ.

              ರಾಷ್ಟ್ರದಲ್ಲಿ ನುಡಿದಂತೆ ನಡೆದ ಸರ್ಕಾರದ ಯಾವುದಾದರು ಇದ್ದರೆ ಅದು ಕಾಂಗ್ರೆಸ್ ಸರ್ಕಾರ. ನಮಗೆ ಬದ್ದತೆ ಇದೆ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿದ್ದೇವೆ ಸರ್ವ ಜನರ ಪ್ರಗತಿಯ ಪೂರಕವಾಗಿ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸುವ ಮೂಲಕ ಮಹಾತ್ಮಗಾಂಧೀಜಿಯವರ ಕನಸನ್ನು ನನಸು ಮಾಡುವ ಸಂಕಲ್ಪವನ್ನು ಮಾಡಿದ್ದೇವೆ. 

              ನಾವು ಗಾಂಧಿ ಜಯಂತಿಯನ್ನು ಆಚರಿಸುವಾಗ ನಮ್ಮ ಜೀವನದಲ್ಲಿ ಅವರ ಬೋಧನೆಗಳ ಪ್ರಸ್ತುತತೆಯನ್ನು ನಾವು ಪ್ರತಿಬಿಂಬಿಸಬೇಕು. ಜಾತಿ, ಕೋಮು, ಮತೀಯ ಘರ್ಷಣೆಗಳನ್ನು ಹತ್ತಿಕ್ಕಿ ಸಾಮಾಜಿಕ ಸಾಮರಸ್ಯದ 

ಸಮಾಜವನ್ನು ನಿರ್ಮಾಣ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಮಹಾತ್ಮಗಾಂಧೀಜಿಯವರ ಅಹಿಂಸೆ, ಸಹಿಷ್ಣುತೆ ಮತ್ತು ಸುಸ್ಥಿರತೆಯ ತತ್ವಗಳು ಎಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿವೆ. 

            ಮತ್ತೊಮ್ಮೆ ತಮ್ಮೆಲ್ಲರಿಗೂ ಮಹಾತ್ಮ ಗಾಂಧೀಜಿಯವರ ಜಯಂತಿಯ ಶುಭಾಷಯಗಳನ್ನು ಕೋರುತ್ತೇನೆ ಎಂದರು. 

             ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ರಾಜಣ್ಣ, ತಾಲ್ಲೂಕಿನ ಗ್ಯಾರಂಟಿ ಅಧ್ಯಕ್ಷರಾದ ಜಗನ್ನಾಥ್, ಬಯ್ಯಪ್ಪಾ ಅಧ್ಯಕ್ಷರಾದ ಶಾಂತಕುಮಾರ್, ಕೃಷಿ ಸಮಾಜದ ಅಧ್ಯಕ್ಷರಾದ ರವಿ, ರಾಮಚಂದ್ರಪ್ಪ,ಲೋಕೇಶ್, ಮಂಜುನಾಥ್,ಮಹಿಳಾ ಮುಖಂಡರು, ಸೇವಾದಳದ ಪ್ರತಿನಿಧಿಗಳು ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Related Post

Leave a Reply

Your email address will not be published. Required fields are marked *