ಚಿಕ್ಕಬಳ್ಳಾಪುರ: ಇಂಡಿಗೋ ಏರ್‌ಲೈನ್ಸ್ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷವು ಶನಿವಾರ ದೇಶಾದ್ಯಂತ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಿದೆ. ಸರ್ವರ್ ಸಮಸ್ಯೆಯಿಂದಾಗಿ ಪ್ರಯಾಣಿಕರು ಚೆಕ್ ಇನ್ ಮತ್ತು ಔಟ್ ಮಾಡಲು ತೊಂದರೆ ಅನುಭವಿಸಿದರು.
ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಸರ್ವರ್ ಸಮಸ್ಯೆಯಿಂದ ಪ್ರಯಾಣಿಕರು ಪರದಾಡಿದರು. ನೂರಾರು ಪ್ರಯಾಣಿಕರು ಸರದಿ ಸಾಲಿನಲ್ಲಿ ನಿಂತು ತೊಂದರೆ ಅನುಭವಿಸಿದರು.
ಬೆಳಗ್ಗೆ 11 ಗಂಟೆಯಿಂದ ಸರ್ವರ್ ಸಮಸ್ಯೆ ಮುಂದುವರಿದಿತ್ತು. ನೋಂದಣಿ ಸಮಸ್ಯೆಯಿಂದಾಗಿ ವಿಮಾನಗಳ ಹಾರಾಟವೂ ವಿಳಂಬವಾಗಿದೆ. ಮಧ್ಯಾಹ್ನದಿಂದಲೂ ನಿಗದಿತ ಸಮಯಕ್ಕೆ ಬಾರದೆ ಪ್ರಯಾಣಿಕರು ಪರದಾಡುವಂತಾಯಿತು.
1:05 ಗಂಟೆಗೆ ಕಾರ್ಯಾಚರಣೆಗಳು ಸಂಕ್ಷಿಪ್ತವಾಗಿ ಪುನರಾರಂಭಗೊಂಡವು. ಆದರೆ, ವ್ಯವಸ್ಥೆಯಲ್ಲಿ ಸಮಸ್ಯೆ ಇದೆ. “ನಮ್ಮ ತಂಡವು ಸಮಸ್ಯೆಗಳನ್ನು ಪರಿಹರಿಸಲು, ಎಲ್ಲರಿಗೂ ಸಹಾಯ ಮಾಡಲು ಮತ್ತು ಸುಗಮ ಪ್ರಯಾಣದ ಅನುಭವವನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡುತ್ತಿದೆ” ಎಂದು ಏರ್ಲೈನ್ಸ್ ಹೇಳಿದೆ.
ವಿಮಾನ ನಿಲ್ದಾಣಗಳಲ್ಲಿ ಚೆಕ್ ಇನ್ ಮಾಡಲು ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಂತಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಟಿಕೆಟ್ ಅಥವಾ ಇತರ ಸೇವೆಗಳನ್ನು ಕಾಯ್ದಿರಿಸಲು ಅಸಾಮರ್ಥ್ಯದ ಬಗ್ಗೆ ದೂರಿದರು.