ಬಳ್ಳಾರಿ ನಗರದಲ್ಲಿ ಕುಡಿಯುವ ನೀರು ಪೂರೈಕೆಯ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿದ್ದು, ಕೂಡಲೆ ಪರಿಶೀಲಿಸಿ, ಸಮಸ್ಯೆ ಪರಿಹರಿಸಲು ಕ್ರಮ ವಹಿಸಬೇಕು ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್‌ಖಾನ್ ಮಹಾನಗರಪಾಲಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ಜಿಲ್ಲಾ ಪಂಚಾಯತ್ ನಜೀರ್ ಸಾಬ್ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಬಳ್ಳಾರಿ ಜಿಲ್ಲೆಯ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶ ಸೇರಿದಂತೆ) ಎರಡನೇಯ ತ್ರೆöÊಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಪ್ರಸ್ತುತ ಬಹುತೇಕ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಇಲ್ಲ, ಆದರೆ ಬಳ್ಳಾರಿ ನಗರದಲ್ಲಿ ಈಗಲೂ ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ನಗರದ ಕೌಲ್‌ಬಜಾರ್ ಸೇರಿದಂತೆ ನಾನಾ ಭಾಗಗಳಿಂದ ಜನರು ನೀರು ಸರಿಯಾಗಿ ಬರುತ್ತಿಲ್ಲ, ಶುದ್ಧವಾಗಿಲ್ಲ, ಹಾಗೂ ಅಸಮರ್ಪಕ ನೀರು ಪೂರೈಕೆ ಬಗ್ಗೆ ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಕೊಡದೆ ಏನು ಮಾಡುತ್ತಿದ್ದೀರಿ ಎಂದು ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು, ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು, ನಗರಕ್ಕೆ ಸಮರ್ಪಕವಾಗಿ ನೀರು ಪೂರೈಸಲು ಸಾಕಷ್ಟು ನೀರಿನ ಲಭ್ಯತೆ ಇದೆ, ಆದರೆ ನೀರು ಸರಬರಾಜು ಜಾಲದ ವ್ಯವಸ್ಥೆಯಲ್ಲಿ ಸಾಕಷ್ಟು ಕೊರತೆ ಇದೆ, ಇದನ್ನು ಇನ್ನಷ್ಟು ಸುಧಾರಿಸುವ ಅಗತ್ಯವಿದೆ ಎಂದರು. ಸಚಿವರು ಮಾತನಾಡಿ, ಕೂಡಲೆ ನಗರದಲ್ಲಿನ ನೀರು ಪೂರೈಕೆ ಸಮರ್ಪಕವಾಗಬೇಕು, ಜನರಿಂದ ನೀರು ಪೂರೈಕೆ ಬಗ್ಗೆ ದೂರು ಬಂದಲ್ಲಿ, ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿಮ್ಸ್ ಆಸ್ಪತ್ರೆ ವ್ಯವಸ್ಥೆ ಸುಧಾರಣೆಯಾಗಬೇಕು : ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ ಅವರು ಮಾತನಾಡಿ, ನಗರದ ವಿಮ್ಸ್ ಆಸ್ಪತ್ರೆಗೆ ಹಲವು ಜಿಲ್ಲೆಗಳಿಂದ ರೋಗಿಗಳು ಆಗಮಿಸುತ್ತಾರೆ, ಅಲ್ಲಿನ ವೈದ್ಯರು ಔಷಧಗಳಿಗೆ ಮತ್ತು ಶಸ್ತçಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡುತ್ತಾರೆ. ಬಡವರು ನನ್ನ ಬಳಿ ಬಂದು ಈ ಕುರಿತು ಹಲವು ಬಾರಿ ಅಳಲು ತೋಡಿಕೊಳ್ಳುತ್ತಿದ್ದಾರೆ ಎಂದು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಜಮೀರ್ ಅವರು, ಈ ಕುರಿತು ವಿಮ್ಸ್ಗೆ ಖುದ್ದಾಗಿ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದ ಅವರು, ವಿಮ್ಸ್ ನಿರ್ದೇಶಕರು ಸಭೆಗೆ ಗೈರಾಗಿದ್ದಾರೆ. ಹೀಗಾಗಿ ಅವರಿಗೆ ನೋಟಿಸ್ ನೀಡಬೇಕು ಹಾಗೂ ಅಮಾನತಿಗೆ ಶಿಫಾರಸು ಮಾಡಬೇಕು ಎಂದು ಸೂಚನೆ ನೀಡಿದರು. ಆರೋಗ್ಯ ಇಲಾಖೆಯಲ್ಲಿ ಎಲ್ಲಾ ವೈದ್ಯ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ವಹಿಸಬೇಕು. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಆಂಬುಲೆನ್ಸ್ಗಳ ಕೊರತೆಯಿದ್ದಲ್ಲಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸಚಿವರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಕ್ರಮ : ಕಳೆದ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆ 27 ನೇ ಸ್ಥಾನ ಪಡೆದಿದೆ. ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು, 06, 07 ನೇ ತರಗತಿಯಿಂದಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ, ಅವರ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಬೇಕು, ಇಲ್ಲದಿದ್ದಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಎಸ್‌ಎಸ್‌ಎಲ್‌ಸಿಯಲ್ಲಿ ತೀವ್ರ ಕಷ್ಟಪಡಬೇಕಾಗುತ್ತದೆ. ಜಿಲ್ಲೆಯಲ್ಲಿನ ಶಾಲೆ ಕಟ್ಟಡಗಳ ಸ್ಥಿತಿಗತಿ ಬಗ್ಗೆ ಪರಿಶೀಲಿಸಿ, ವರದಿಯನ್ನು ಸಲ್ಲಿಸಬೇಕು, ದುರಸ್ತಿಗೆ ಅಗತ್ಯವಿರುವ ಕಟ್ಟಡಗಳನ್ನು ಕೂಡಲೆ ದುರಸ್ಥಿಗೊಳಿಸಲು ಕ್ರಮ ವಹಿಸಬೇಕು ಎಂದು ಡಿಡಿಪಿಐ ಅವರಿಗೆ ಸಚಿವರು ಸೂಚಿಸಿದರು. ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳಡಿ ಬರುವ ವಸತಿ ನಿಲಯಗಳಲ್ಲಿ ಸ್ವಚ್ಛತೆ, ಊಟೋಪಚಾರ ವ್ಯವಸ್ಥೆ ಅಚ್ಚುಕಟ್ಟಾಗಿ ಇರಬೇಕು, ವಾರ್ಡನ್‌ಗಳು ಮಕ್ಕಳೊಂದಿಗೆ ಉತ್ತಮ ನಡವಳಿಕೆ ತೋರಬೇಕು, ಎಲ್ಲ ತಹಸಿಲ್ದಾರರು ಕಡ್ಡಾಯವಾಗಿ ಹಾಸ್ಟೆಲ್‌ಗಳಿಗೆ ಆಕಸ್ಮಿಕ ಭೇಟಿ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದರು.
ರಸ್ತೆಗುಂಡಿಗಳನ್ನು ಕಾಂಕ್ರಿಟ್‌ನಿAದ ಮುಚ್ಚಿ : ಜಿಲ್ಲೆಯ ವಿವಿಧ ಭಾಗದ ರಸ್ತೆಗಳಲ್ಲಿ ತಗ್ಗು ಗುಂಡಿಗಳಿದ್ದು, ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯತ್ ರಾಜ್ ಹಾಗೂ ಇಂಜಿನಿಯರಿAಗ್ ಇಲಾಖೆಯವರು ಗುಂಡಿಯನ್ನು ಮುಚ್ಚಲು ಟೆಂಡರ್ ಕರೆದು ಕೇವಲ ಮಣ್ಣು ಹಾಕಿ ಮುಚ್ಚುವ ಕಾರ್ಯ ಮಾಡುತ್ತಿದ್ದಾರೆ, ಆದರೆ ಮಳೆ ಬಂದರೆ ಅದು ಮತ್ತೆ ಗುಂಡಿಯಾಗುತ್ತದೆ. ಕೇವಲ ಅನುದಾನ ಮಾತ್ರ ಪೋಲಾಗುತ್ತಿದೆ. ತಗ್ಗು ಗುಂಡಿಗಳನ್ನು ಕೇವಲ ಮಣ್ಣಿನಿಂದ ಮುಚ್ಚುವಂತಿಲ್ಲ, ಕಡ್ಡಾಯವಾಗಿ ಗುಣಮಟ್ಟದ ಕಾಂಕ್ರೀಟ್‌ನಿAದಲೇ ಮುಚ್ಚಲು ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮುಖ್ಯಮಂತ್ರಿಗಳಿAದ ಮುಂದಿನ ಪ್ರಗತಿ ಪರಿಶೀಲನಾ ಸಭೆ : ಬಳ್ಳಾರಿ ಜಿಲ್ಲೆಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ಮುಖ್ಯಮಂತ್ರಿಗಳಿAದಲೇ ಮಾಡಿಸಲಾಗುವುದು ಹಾಗೂ ತಾವು ಕೂಡ ತಾಲ್ಲೂಕುವಾರು ಪ್ರಗತಿ ಪರಿಶೀಲನೆ ಸಭೆ ನಡೆಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
*ವಕ್ಫ್ ಅದಾಲತ್ ನಡೆಸಿ:*
ವಕ್ಫ್ ಆಸ್ತಿ ಸಂರಕ್ಷಣೆ ಹಾಗೂ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ವಕ್ಫ್ ಅದಾಲತ್ ಹಮ್ಮಿಕೊಳ್ಳಲಾಗುತ್ತಿದೆ. ಅದೇ ರೀತಿಯಾಗಿ ಗ್ರಾಮ, ತಾಲೂಕಾ ಮಟ್ಟದ ಹಾಗೂ ಜಿಲ್ಲಾ ಮಟ್ಟದಲ್ಲಿರುವ ವಿವಿಧ ವಕ್ಫ್ ಸಮಸ್ಯೆ, ಖಬರಸ್ತಾನ್ ಜಾಗದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ, ಅದಾಲತ್ ಹಮ್ಮಿಕೊಂಡು ಪರಿಹಾರ ಕಂಡುಕೊಳ್ಳಬೇಕು ಎಂದು ಎಲ್ಲಾ ತಾಲ್ಲೂಕು ತಹಶೀಲ್ದಾರರಿಗೆ ನಿರ್ದೇಶನ ನೀಡಿದರು.
*ಗ್ರಾಮ ಸಭೆ ಆಯೋಜಿಸಿ:*
ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯ ಪ್ರತಿಯೊಬ್ಬರಿಗೂ ತಲುಪಿಸುವ ಉದ್ದೇಶ ರಾಜ್ಯ ಸರ್ಕಾರ ಉದ್ದೇಶ ಹೊಂದಿದೆ. ಈ ನಿಟ್ಟಿನಲ್ಲಿ ವಂಚಿತ ಫಲಾನುಭವಿಗಳನ್ನು ಗುರುತಿಸಲು ಗ್ರಾಮವಾರು ಗ್ರಾಮಸಭೆ ನಡೆಸಬೇಕು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ.ರೇವಣ್ಣ ಅವರು ನಿರ್ದೇಶನ ನೀಡಿದರು.
ಗ್ಯಾರಂಟಿ ಯೋಜನೆಗಳ ಪರಿಶೀಲನೆ : ಸರ್ಕಾರದ ಮಹತ್ವಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಪ್ರಗತಿ ಪರಿಶೀಲನೆ ನಡೆಸಲಾಯಿತು. ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ.ರೇವಣ್ಣ ಅವರು ಮಾತನಾಡಿ, ಸರ್ಕಾರದ ಮುಖ್ಯ ಯೋಜನೆಗಳು ಇವಾಗಿದ್ದು, ಯಾವುದೇ ಅರ್ಹರು ಸೌಲಭ್ಯದಿಂದ ವಂಚಿತವಾಗಬೇರದು, ಸಮಸ್ಯೆಗಳಿದ್ದಲ್ಲಿ, ಅವುಗಳನ್ನು ಪರಿಹರಿಸಿ ಸೌಲಭ್ಯವನ್ನು ಫಲಾನುಭವಿಗಳಿಗೆ ತಲುಪಿಸುವ ಕಾರ್ಯವನ್ನು ಸಂಬAಧಪಟ್ಟ ಇಲಾಖಾ ಅಧಿಕಾರಿಗಳು ಮಾಡಬೇಕು ಎಂದರು. ವೈದ್ಯಕೀಯ ಮತ್ತಿತರ ತುರ್ತು ಕಾರಣಗಳಿಗಾಗಿ ಬಿಪಿಎಲ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿದವರಿಗೆ ತುರ್ತಾಗಿ ಕಾರ್ಡ್ ಮಂಜೂರು ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದರು. ಗೃಹಲಕ್ಷಿö್ಮ ಯೋಜನೆಯಲ್ಲಿ ಜಿಲ್ಲೆಯಲ್ಲಿ 2.77 ಲಕ್ಷ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲಾಗಿದ್ದು, ಕಳೆದ ಎರಡು ದಿನಗಳ ಹಿಂದೆ ಒಂದು ತಿಂಗಳಿನ ಮೊತ್ತ ಜಮಾ ಮಾಡಲಾಗಿದ್ದು, ಇನ್ನೆರಡು ದಿನಗಳಲ್ಲಿ ಬಾಕಿ ಮೊತ್ತ ಜಮಾ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಹೇಳಿದರು. ಗೃಹಜ್ಯೋತಿ ಯೋಜನೆಯಡಿ 2.77 ಲಕ್ಷ ಫಲಾನುಭವಿಗಳು ನೊಂದಣಿ ಮಾಡಿಕೊಂಡಿದ್ದು, ಬಾಡಿಗೆ ಮನೆದಾರರು ಮನೆ ಬದಲಾವಣೆ ಮಾಡಿದಲ್ಲಿ, ಆಧಾರ್ ಡಿ-ಲಿಂಕ್ ಮಾಡಿಸಿ, ಸ್ಥಳಾಂತರಗೊAಡ ಮನೆಯ ಸಂಖ್ಯೆಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹೊಸದಾಗಿ ಕಟ್ಟಿಸಿದ ಮನೆಗೆ ನೊಂದಣಿ ಮಾಡಿಕೊಳ್ಳುವವರಿಗೆ ಪ.ಜಾತಿ ಮತ್ತು ಪ.ವರ್ಗದವರಿಗೆ ಸರಾಸರಿ 83 ಯುನಿಟ್ ಹಾಗೂ ಇತರೆ ವರ್ಗದವರಿಗೆ 58 ಯುನಿಟ್ ಉಚಿತ ವಿದ್ಯುತ್ ನೀಡಲು ನಿಗದಿಪಡಿಸಲಾಗಿದೆ ಎಂದು ಜೆಸ್ಕಾಂ ಅಧಿಕಾರಿಗಳು ತಿಳಿಸಿದರು. ಯುವನಿಧಿಯಡಿ ಈವರೆಗೆ 8410 ಫಲಾನುಭವಿಗಳಿಗೆ ಒಟ್ಟು 2.51 ಕೋಟಿ ರೂ. ಪಾವತಿಸಲಾಗಿದೆ. ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಈವರೆಗೆ 3.33 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, ಇದರಿಂದ 119.46 ಕೋಟಿ ರೂ. ಆದಾಯ ಬಂದಿದೆ. ಕೆಕೆಆರ್‌ಡಿಬಿ ಯಿಂದ 15 ಹಾಗೂ ಡಿಎಂಎಫ್ ನಿಧಿಯಿಂದ ಬಳ್ಳಾರಿಗೆ 25 ಹೊಸ ಬಸ್‌ಗಳು ಬಂದಿವೆ. ಶಕ್ತಿ ಯೋಜನೆ ಜಾರಿಯಾದ ಬಳಿಕ ಶೇ. 20 ರಷ್ಟು ಆದಾಯ ಏರಿಕೆ ಆಗಿದೆ ಎಂದು ಸಂಬAಧಿಸಿದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಫೆಬ್ರವರಿಯಲ್ಲಿ ಕಂಪ್ಲಿ, ಕುರುಗೋಡು ಹಾಗೂ ಬಳ್ಳಾರಿ ಉತ್ಸವ : ಹಂಪಿ ಉತ್ಸವ ಈ ವರ್ಷ ಫೆಬ್ರವರಿ ಮೊದಲ ವಾರದಲ್ಲಿ ಆಚರಿಸಲಾಗುವುದು, ಹಾಗೂ ಈ ಬಾರಿ ಬಳ್ಳಾರಿ ಜಿಲ್ಲೆಯ ಕಂಪ್ಲಿ, ಕುರುಗೋಡು ಹಾಗೂ ಬಳ್ಳಾರಿ ಉತ್ಸವವನ್ನು ಫೆಬ್ರವರಿ ಕೊನೆಯ ವಾರದಲ್ಲಿ ವಿಜೃಂಭಣೆಯಿAದ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
ಸಭೆಯಲ್ಲಿ ಸಂಸದ ಈ.ತುಕಾರಾಂ, ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಮೆಹರೋಜ್ ಖಾನ್, ಜಿಪಂ ಆಡಳಿತಾಧಿಕಾರಿ ಹಾಗೂ ಶಿಕ್ಷಣ ಇಲಾಖೆಯ ಆಯುಕ್ತ ಡಾ.ಕೆ.ವಿ.ತ್ರಿಲೋಕ ಚಂದ್ರ, ಬಳ್ಳಾರಿ ವಲಯ ಐಜಿಪಿ ಲೊಕೇಶ್ ಕುಮಾರ್, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ.ವಿ.ಜೆ., ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.