ಉಡುಪಿ: ಕಳೆದ ಮೂರು ವರ್ಷಗಳಿಂದ ಮಲ್ಪಾದಲ್ಲಿ ಅಕ್ರಮವಾಗಿ ನೆಲೆಸಿದ್ದ ಏಳು ಬಾಂಗ್ಲಾ ಪ್ರಜೆಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಹಕೀಂ ಅಲಿ, ಸುಜೋನ್, ಇಸ್ಮಾಯಿಲ್, ಕರೀಂ, ಸಲಾಂ, ರಾಜಿಕುಲ್, ಮೊಹಮ್ಮದ್ ಸೋಜಿಬ್, ಕಾಜೋಲ್ ಮತ್ತು ಉಸ್ಮಾನ್ ಬಂಧಿತರು. ಮೀನುಗಾರರಾಗಿ ಕೆಲಸ ಮಾಡಲು ನಿರ್ಧರಿಸಿದ ಬಾಂಗ್ಲಾದೇಶಿಯರನ್ನು ಮಲ್ಪೆ ವಡಬಾಂಡೇಶ್ವರ ಬಸ್ ನಿಲ್ದಾಣದ ಬಳಿ ಬಂಧಿಸಲಾಗಿದೆ. ಆರೋಪಿಗಳಲ್ಲಿ ಕೆಲಸ ಕೊಟ್ಟಿದ್ದ ಉಸ್ಮಾನ್ ಕೂಡ ಸೇರಿದ್ದಾರೆ. ಆರೋಪಿಗಳು ಸಿಕ್ಕಿಂನಲ್ಲಿ ನಕಲಿ ಆಧಾರ್ ಕಾರ್ಡ್ ತಯಾರಿಸಿದ್ದರು.
ಸಿಕ್ಕಿಬಿದ್ದು ಹೇಗೆ? : ಬಂಧಿತ ಮಾಣಿಕ್ ಹುಸೇನ್ ನಕಲಿ ಪಾಸ್ ಪೋರ್ಟ್ ಬಳಸಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದುಬೈಗೆ ಪರಾರಿಯಾಗಲು ಯತ್ನಿಸಿದ್ದ. ವಿಮಾನ ನಿಲ್ದಾಣದಲ್ಲಿ ಗುರುತಿನ ತಪಾಸಣೆ ನಡೆಸಿದಾಗ ಅನುಮಾನಗೊಂಡ ಅಧಿಕಾರಿಗಳು ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಈ ಹಂತದಲ್ಲಿ ಅಕ್ರಮವಾಗಿ ಬಾಂಗ್ಲಾದೇಶದಿಂದ ಪಲಾಯನಗೈದು ನಕಲಿ ಆಧಾರ್ ಕಾರ್ಡ್ ಹಾಗೂ ಪಾಸ್ ಪೋರ್ಟ್ ಪಡೆದಿರುವುದು ಬೆಳಕಿಗೆ ಬಂದಿದೆ. ತಕ್ಷಣ ವಿಮಾನ ನಿಲ್ದಾಣದ ಅಧಿಕಾರಿಗಳು ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆತನ ಬಂಧನದ ನಂತರ ಆತನೊಂದಿಗೆ ಇತರ ಬಾಂಗ್ಲಾದೇಶದ ಪ್ರಜೆಗಳು ದೇಶಕ್ಕೆ ಪ್ರವೇಶಿಸಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಈತ ನೀಡಿದ ಮಾಹಿತಿ ಮೇರೆಗೆ ಉಡುಪಿಯಲ್ಲಿ ಇನ್ನೂ ಆರು ಮಂದಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ.