ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಜಮೀನಿಗೆ ಕಾರು ಪಲ್ಟಿಯಾಗಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಕುಂಸಿ ಬಳಿ ನಡೆದಿದೆ. ಅಪಘಾತದ ಪರಿಣಾಮವಾಗಿ ನಾಲ್ವರು ಹದಿಹರೆಯದವರು ಗಾಯಗೊಂಡಿದ್ದಾರೆ.
ಮೃತ ಯುವಕನನ್ನು ಬೆಂಗಳೂರಿನ ನೆಲಮಂಗಲ ನಿವಾಸಿ ಚಂದನ್ ಎಂದು ಗುರುತಿಸಲಾಗಿದೆ. ಗಾಯಗೊಂಡವರು ಕೊಡಗಿನ ನಂದನ್, ಕೋಲಾರದ ಕೋದಂಡ, ಹಾಸನದ ಭರತ್ ಮತ್ತು ಮಂಡ್ಯದ ಯೋಗೇಶ್.
ಬೆಂಗಳೂರಿನಲ್ಲಿ ಐವರು ಯುವಕರು ಕೆಲಸ ಮಾಡುತ್ತಿದ್ದರು. ಹಬ್ಬವಾದ್ದರಿಂದ ಬೆಂಗಳೂರಿನಿಂದ ಐವರು ಯುವಕರು ಸಿಗಂದೂರು ದೇವಸ್ಥಾನಕ್ಕೆ ತೆರಳಿದ್ದರು. ಕುಂಸೆಯ ಕೆರೆಕೋಡಿ ಬಳಿ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಜಮೀನಿಗೆ ಢಿಕ್ಕಿ ಹೊಡೆದಿದೆ.
ಕಾರು ಚಲಾಯಿಸುತ್ತಿದ್ದ ಚಂದನ್ ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕುಂಸಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.