ಚಿತ್ರದುರ್ಗ : ಜೀವನ ಶೈಲಿ ಬದಲಾಗದಿದ್ದರೆ ಅಸಾಂಕ್ರಾಮಿಕ ರೋಗಗಳ ಕಾಟ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಬಿ.ವಿ ಗಿರೀಶ್ ಹೇಳಿದರು.
ಚಿತ್ರದುರ್ಗ ತಾಲೂಕಿನ ಗುಡ್ಡದ ರಂಗವ್ವನಹಳ್ಳಿ ಗ್ರಾಮದಲ್ಲಿ ಆರೋಗ್ಯ ಇಲಾಖೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದೊಂದಿಗೆ ನಡೆದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಜಂಕ್ ಫುಡ್ ಬಳಕೆಗೆ ಕಡಿವಾಣ ಹಾಕಿ, ಸಮತೋಲನ ಆಹಾರ ಸೇವನೆ ಮಾಡಿದರೆ ಮಾತ್ರ ಉತ್ತಮ ಆರೋಗ್ಯ ಹೊಂದಬಹುದು ಇಲ್ಲವಾದಲ್ಲಿ ಅಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
ಪ್ರತಿಯೊಬ್ಬರೂ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಕೊಂಡು ಉತ್ತಮ ಆರೋಗ್ಯ ಹೊಂದಬೇಕೆಂದರು. ಆರೋಗ್ಯ ಕಾರ್ಯಕ್ರಮಗಳು ಮನೆ ಬಾಗಿಲಿಗೆ ತಲುಪುತ್ತಿವೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಆಧುನಿಕ ಕಾಲದಲ್ಲಿ ಒತ್ತಡದ ಜೀವನ, ತಂತ್ರಜ್ಞಾನಗಳ ಬಳಕೆ ಹೆಚ್ಚುತ್ತಿದ್ದು, ಯುವಕರೇ ಹೆಚ್ಚು ದುಶ್ಚಟಕ್ಕೆ ದಾಸರಾಗುತ್ತಿದ್ದು, ಮೂಢನಂಬಿಕೆ, ಮನಸ್ಸಿಗೆ ಶಾಂತಿ ನೆಮ್ಮದಿ ಇಲ್ಲದಾಗಿ ನಾನಾ ರೀತಿಯ ಚಿಂತೆಗೊಳಗಾಗಿ ಒಂದಿಲ್ಲೊಂದು ಅಸಾಂಕ್ರಾಮಿಕ ರೋಗಕ್ಕೆ ಸಾರ್ವಜನಿಕರು ತುತ್ತಾಗುತ್ತಿದ್ದಾರೆ. 30 ವರ್ಷ ಮೇಲ್ಪಟ್ಟವರೆಲ್ಲರೂ ವೈದ್ಯಕೀಯ ಉಪಾಸಣೆಗೆ ಒಳಪಡಬೇಕು ಎಂದರು.
ವೈದ್ಯಕೀಯ ಶಾಸ್ತ್ರದ ಪಿತಾಮಹ ಹೇಳಿರುವಂತೆ “ಆಹಾರವೇ ನಿನ್ನ ಔಷಧಿಯಾಗಿರಲಿ” ಆದರೆ ಔಷಧಿ ಸೇವನೆ ಇಲ್ಲದೆ ಜೀವಿಸುವವರ ಸಂಖ್ಯೆ ಕ್ಷೀಣಿಸುತ್ತಿದೆ ಪ್ರಯುಕ್ತ ಎಣ್ಣೆ ಪದಾರ್ಥ, ಮಾಂಸ ಆಹಾರ ಕಡಿಮೆ ಮಾಡಿ’ ಹಸಿ ತರಕಾರಿಗಳ ಬಳಕೆ ಮಾಡುತ್ತಾ, ದುರಾಸೆ ದೂರ ಮಾಡಿ. ಸಂತಸದ ಬದುಕನ್ನು ಕಟ್ಟಿಕೊಂಡು. ಕಿರುದಾನ್ಯಗಳ ಬಳಕೆ, ಕಾಲಮಾನಕ್ಕೆ ಸಿಗುವ ಹಣ್ಣು ಹಂಪಲುಗಳ ಬಳಕೆ, ನಿತ್ಯ ಚಟುವಟಿಕೆಗಳಲ್ಲಿ ತೊಡಗಿ, ವ್ಯಾಯಾಮ, ಧ್ಯಾನ, ಸಕಾಲಕ್ಕೆ ನಿದ್ದೆ ಮಾಡುತ್ತಾ ಆರೋಗ್ಯ ಕಾಪಾಡಿಕೊಳ್ಳಬೇಕೆಂದರು.
ಇದೇ ಸಂದರ್ಭದಲ್ಲಿ 95 ಜನ ಮಹಿಳೆಯರು ಅಸಂಕ್ರಾಮಿಕ ರೋಗಗಳ ತಪಾಸಣೆಗೆ ಒಳಪಟ್ಟರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 10 ಜನ ಜನರಿಗೆ ಕನ್ನಡಕ ವಿತರಣೆ, ಔಷಧೋಪಚಾರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ, ವಿಶ್ವ ಬಂದು ಆಸ್ಪತ್ರೆ ವೈದ್ಯರಾದ ಆನೆಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ರೂಪ. ಪಿಎಚ್‍ಸಿ ವೈದ್ಯಾಧಿಕಾರಿ ಡಾ.ಗೀತಾಂಜಲಿ. ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಶಾಂತ್, ಪ್ರವೀಣ್ ಕುಮಾರ್., ಪಿಎಚ್‍ಸಿಓ ಮಂಜುಳಾ. ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಶಿವಲೀಲಾ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿ ತಿಪ್ಪಮ್ಮ ಹಾಗೂ 120ಕ್ಕೂ ಹೆಚ್ಚು ಜನ ಶಿಬಿರದಲ್ಲಿ ಭಾಗವಹಿಸಿದ್ದರು.