ಬಳ್ಳಾರಿ : ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಕರ್ತವ್ಯ ಪಾಲನೆಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿ ಇಟ್ಟು, ಕರ್ತವ್ಯದಲ್ಲಿ ವೀರ ಮರಣ ಹೊಂದಿದ ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿಯವರ ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕರಾದ ಬಿ.ಎಸ್.ಲೋಕೇಶ್ ಕುಮಾರು ಅವರು ಸಂತಾಪ ವ್ಯಕ್ತಪಡಿಸಿದರು.
ಬಳ್ಳಾರಿ ಜಿಲ್ಲಾ ಪೊಲೀಸ್ ವತಿಯಿಂದ ನಗರದ ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದ ರಕ್ಷಣೆ ಹಾಗೂ ಸಾರ್ವಜನಿಕರ ಹಿತಾಸಕ್ತಿಗಾಗಿ ಅತ್ಯುತ್ತಮ ಸೇವೆ ಸಲ್ಲಿಸಿ ಸುಸ್ಥಿರ ಸಮಾಜ ನಿರ್ಮಿಸುವಲ್ಲಿ ಪೊಲೀಸ್ ಹುತಾತ್ಮರ ಕೊಡುಗೆ ಅಪಾರ. ಈ ದಿನ ಪೊಲೀಸ್ ಹುತಾತ್ಮರಿಗೆ ಗೌರವ ಸಲ್ಲಿಸುತ್ತಾ, ಮುಂದಿನ ದಿನಮಾನಗಳಲ್ಲಿ ಹುತಾತ್ಮರ ಸಂಖ್ಯೆ ಗಣನೀಯವಾಗಿ ಕಡಿಮೆಗೊಂಡು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರೂ ತಮ್ಮ ಕುಟುಂಬದವರೊಡನೆ ಶಾಂತಿ-ನೆಮ್ಮದಿ ಜೀವನ ನಡೆಸುವಂತಾಗಬೇಕು ಎಂದರು.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮಾತನಾಡಿ, ದೇಶದ ಏಳ್ಗೆಗಾಗಿ ಶ್ರಮಿಸಿ ಆತ್ಮ ಸಮರ್ಪಣೆ ಮಾಡಿದ ಪೊಲೀಸ್ ಹುತಾತ್ಮರ ಸೇವೆ ಅವಿಸ್ಮರಣೀಯವಾಗಿದೆ. ಪೊಲೀಸರ ಕರ್ತವ್ಯ ನಿಷ್ಠೆಯಿಂದ ಸಮಾಜದಲ್ಲಿ ಶಾಂತಿ, ಸಮಾಧಾನ ನೆಲೆಸಿದ್ದು ಅವರ ತ್ಯಾಗ, ಬಲಿದಾನದಿಂದ ಜೀವತೆತ್ತ ಮಹಾನೀಯರು ಅಜರಾಮರ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಶೋಭಾರಾಣಿ.ವಿ.ಜೆ ಅವರು ಮಾತನಾಡಿ, 1959 ರ ಅ.21ರಂದು ಸಿಆರ್‌ಪಿಎಫ್ ನ ಡಿವೈಎಸ್‌ಪಿ ಕರಣ್ ಸಿಂಗ್ ಅವರ ನೇತೃತ್ವದಲ್ಲಿ ಒಂದು ಸಿಆರ್‌ಪಿಎಫ್ ತುಕಡಿ ಲಡಾಕ್ ಪ್ರದೇಶದಲ್ಲಿರುವ ಹಾಟ್ ಸ್ಟಿçಂಗ್ ಹತ್ತಿರ ಗಸ್ತು ನಡೆಸುತ್ತಿರುವಾಗ, ಚೈನಾ ದೇಶದ ಸೈನಿಕರು ಸುಸಜ್ಜಿತ ಮದ್ದುಗುಂಡುಗಳು ಮತ್ತು ಆಯುಧಗಳನ್ನು ಹೊಂದಿ, ಹೆಚ್ಚಿನ ಸಂಖ್ಯೆಯಲ್ಲಿ ದಾಳಿ ಮಾಡಿದ್ದರು. ಭಾರತದ ಜವಾನರು ಧೈರ್ಯ ಮತ್ತು ಸಾಹಸದಿಂದ ಚೈನಾ ದೇಶದ ಸೈನಿಕರೊಂದಿಗೆ ಹೋರಾಡಿದರು. ಹೋರಾಟದಲ್ಲಿ 10 ಮಂದಿ ಸಿ.ಆರ್.ಪಿ.ಎಫ್ ಜವಾನರು ವೀರ ಮರಣ ಹೊಂದಿದರು ಹಾಗೂ 9 ಮಂದಿಯನ್ನು ಚೈನಾ ದೇಶದ ಸೈನಿಕರು ದಸ್ತಗಿರಿ ಮಾಡಿದ್ದರು ಎಂದು ಘಟನೆ ವಿವರಿಸಿದರು.
ಸಿಆರ್‌ಪಿಎಫ್ ಜವಾನರ ಧೈರ್ಯ, ಸಾಹಸ ಹಾಗೂ ಆತ್ಮ ಸಮರ್ಪಣೆಯನ್ನು ಭಾರತ ದೇಶದ ಎಲ್ಲಾ ಪ್ರಜೆಗಳು ಇಂದಿಗೂ ಸ್ಮರಿಸುತ್ತಾರೆ. ಅವರ ಸವಿನೆನಪಿಗಾಗಿ ಒಂದು ಸ್ಮಾರಕವನ್ನೂ ಸಹ ನಿರ್ಮಿಸಲಾಗಿದೆ. ವೀರ ಮರಣವನ್ನು ಅಪ್ಪಿದ ಎಲ್ಲಾ ಸಮವಸ್ತçಧಾರಿ ಅಧಿಕಾರಿ ಮತ್ತು ಸಿಬ್ಬಂದಿಗಳ ನೆನಪು ಹಾಗೂ ಶಾಂತಿಗಾಗಿ ದೇಶಾದ್ಯಂತ ಅ.21ರಂದು ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ ಎಂದರು.
2023-24 ಸಾಲಿನಲ್ಲಿ ದೇಶಾದ್ಯಂತ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸೇರಿ ಒಟ್ಟು 219 ಹಾಗೂ ಕರ್ನಾಟಕ ರಾಜ್ಯದ 08 ಸಿಬ್ಬಂದಿಯವರು ಹುತಾತ್ಮರಾಗಿದ್ದು, ಈ ದಿನ ಅವರ ಪ್ರಾಣ ತ್ಯಾಗವನ್ನು ಸ್ಮರಿಸಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗಣ್ಯರೆಲ್ಲರೂ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ಗುಚ್ಛ ಅರ್ಪಿಸಿದರು. ಹುತಾತ್ಮರ ಗೌರವ ಸೂಚಕವಾಗಿ ಮೂರು ಸಾರಿ ಕುಶಾಲುತೋಪು ಹಾರಿಸುವ ಮೂಲಕ ಸಂತಾಪ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಲೋಕಾಯುಕ್ತ ಎಸ್‌ಪಿ ಸಿದ್ಧರಾಜು.ಪಿ., ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೆ.ಪಿ ರವಿಕುಮಾರ್, ನವೀನ್ ಕುಮಾರ್.ಎನ್ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಮತ್ತಿತರರು ಉಪಸ್ಥಿತರಿದ್ದರು.