ಚಳ್ಳಕೆರೆ : ತಾಲ್ಲೂಕಿನ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ತಂಬಾಕು ಮುಕ್ತ ಯುವ ಅಭಿಯಾನ 2.0 ಅಂಗವಾಗಿ ಯುವಕರಿಗೆ ಮತ್ತು ಅಂಗಡಿಗಳ ಮಾಲೀಕರಿಗೆ ಕೋಟ್ಪಾ-2003ರ ಕಾಯ್ದೆಯ ತಂಬಾಕು ಕಾರ್ಯಾಚರಣೆ ಜಾಗೃತಿ ಮೂಡಿಸಲಾಯಿತು.
ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಪಟ್ಟಣ ಪ್ರದೇಶಗಳಲ್ಲಿ ಜಿಲ್ಲಾ ಮಟ್ಟದ ತಂಬಾಕು ತನಿಖಾ ತಂಡವು ತಂಬಾಕು ಉತ್ಪನ್ನಗಳ ಮಾರಾಟಗಾರರ ಅಂಗಡಿಗಳಿಗೆ ಭೇಟಿ ನೀಡಿ, ಯುವಜನತೆಯು ಅತೀ ಹೆಚ್ಚಾಗಿ ತಂಬಾಕಿನ ದುಶ್ಚಟಗಳಿಗೆ ಒಳಗಾಗುತ್ತಿದ್ದಾರೆ. ಇದರಿಂದಾಗಿ ಸಮಾಜದಲ್ಲಿ ಸಾವಿನ ಸಂಖ್ಯೆಯಲ್ಲಿ ಹೆಚ್ಚಾಗಿ ಯುವಕರೇ ಬಲಿಯಾಗುತ್ತಿದ್ದಾರೆ ಎಂದು ಯುವಕರಿಗೆ ಮತ್ತು ಅಂಗಡಿ ಮಾಲೀಕರಿಗೆ ತಿಳಿಸುತ್ತಾ ತಂಬಾಕು ಕಾರ್ಯಾಚರಣೆ ಮಾಡಿ ಸಾರ್ವಜನಿಕರಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡದಂತೆ, ಪಾನ್ ಮಸಾಲ, ತಂಬಾಕು ಜಗಿದು ಉಗಿಯದಂತೆ ಎಚ್ಚರಿಸಿ ಜಾಗೃತಿ ಮೂಡಿಸಲಾಯಿತು.
ಸಂಬಂಧಪಟ್ಟ ಸೆಕ್ಷನ್-4, 6ಎ ಮತ್ತು 6ಬಿ ಬೋರ್ಡ್‍ಗಳನ್ನು ಹಾಕಲು ಸೂಚಿಸಲಾಯಿತು ಮತ್ತು ಸೆಕ್ಷನ್-4 ಅಡಿಯಲ್ಲಿ 14 ಕೇಸುಗಳನ್ನು ದಾಖಲಿಸಿ ರೂ. 1250 ದಂಡವನ್ನು ಮತ್ತು ಸೆಕ್ಷನ್-6ಎ ಅಡಿಯಲ್ಲಿ 08 ಕೇಸುಗಳನ್ನು ದಾಖಲಿಸಿ ರೂ. 650 ದಂಡವನ್ನು ವಸೂಲಿ ಮಾಡಲಾಯಿತು.
ತಂಬಾಕು ದಾಳಿಯಲ್ಲಿ ಜಿಲ್ಲಾ ಮಟ್ಟದ ತನಿಖಾ ತಂಡದ ಅಧಿಕಾರಿಗಳಾದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ.ಪ್ರಭುದೇವ, ಪೊಲೀಸ್ ಇಲಾಖೆಯ ಧನಂಜಯ, ತಿಮ್ಮೇಶ್, ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಣಾಧಿಕಾರಿ ತಿಪ್ಪೇಶ್ ಇದ್ದರು.