Breaking
Mon. Dec 23rd, 2024

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಮತ್ತು ಮಾನಸಿಕ ಯೋಗಕ್ಷೇಮ ಜಾಗೃತಿ ಕಾರ್ಯಾಗಾರ ಕಾರ್ಯಕ್ಷೇತ್ರದಲ್ಲಿ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಿ -ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ವಿಜಯ್…..!

ಚಿತ್ರದುರ್ಗ : ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವೂ ಮುಖ್ಯವಾಗಿದ್ದು, ಪೊಲೀಸರು ಕಾರ್ಯಕ್ಷೇತ್ರದಲ್ಲಿ ಮಾನಸಿಕ ಆರೋಗ್ಯ ಸ್ವಾಸ್ಥ್ಯಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಹೇಳಿದರು.

ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಪೊಲೀಸ್ ಇಲಾಖೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯವರ ಸಂಯುಕ್ತಾಶ್ರಯದಲ್ಲಿ “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಮತ್ತು ಮಾನಸಿಕ ಯೋಗಕ್ಷೇಮ ಜಾಗೃತಿ ಕಾರ್ಯಾಗಾರ” ಉದ್ಘಾಟಿಸಿ ಅವರು ಮಾತನಾಡಿದರು.

ಪೊಲೀಸರು ಸಾರ್ವಜನಿಕರೊಂದಿಗೆ ಸಾಕಷ್ಟು ಸಂಪರ್ಕದಲ್ಲಿರುವುದರಿಂದ ವಿವಿಧ ಬಗೆಯ ಮನಸ್ಥಿತಿಯಲ್ಲಿರುವ ಜನರು ಬರುತ್ತಾರೆ. ಮಾನಸಿಕ ಸಮತೋಲನ ಇಲ್ಲದೆ ಕೆಲಸ ಮಾಡಲು ಹೋದರೆ ಅನೇಕ ತೊಂದರೆಗಳು ಎದುರಾಗಲಿವೆ. ಹಾಗಾಗಿ ಕಾರ್ಯಕ್ಷೇತ್ರದಲ್ಲಿ ಮಾನಸಿಕ ಆರೋಗ್ಯಕ್ಕೆ ಕೂಡ ಆದ್ಯತೆ ನೀಡಬೇಕು ಎಂದರು.

ಪೊಲೀಸರು ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಸಮತೋಲನ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸಿ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಸಹಜವಾಗಿಯೇ ಕೆಲಸದ ಒತ್ತಡ ಹೆಚ್ಚಿರುತ್ತದೆ. ಪೊಲೀಸರು ಮಾನಸಿಕವಾಗಿ ಸದೃಢವಾಗಿರುತ್ತಾರೆ. ಆದರೆ ಪ್ರತಿನಿತ್ಯವೂ ಒತ್ತಡದಲ್ಲಿ ಕಾರ್ಯನಿರ್ವಹಿಸುವುದರಿಂದ ಇಂತಹ ಒತ್ತಡಗಳಿಗೆ ಮಣಿದು ದುಶ್ಚಟಗಳಿಗೆ ಬಲಿಯಾಗಬಾರದು ಎಂದು ತಿಳಿಸಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಕಾಲಹರಣ ಮಾಡದೇ, ತಮಗೆ ಆಸಕ್ತಿ ಇರುವ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಬೇಕು. ಯೋಗ, ಧ್ಯಾನ, ಪ್ರಾಣಾಯಾಮ ಸೇರಿದಂತೆ ಉತ್ತಮ ಹವ್ಯಾಸಗಳಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು. ಈ ಹಿನ್ನಲೆಯಲ್ಲಿ ಪೊಲೀಸರು ಉತ್ತಮ ಆರೋಗ್ಯ ಜೀವನ ಶೈಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ ಮಾತನಾಡಿ, ಆರೋಗ್ಯವೇ ಭಾಗ್ಯ ಎಂಬ ವೇದವಾಕ್ಯದಂತೆ, ದೈಹಿಕವಾಗಿ ಸದೃಢವಾಗಿರುವುದಲ್ಲದೇ ಮಾನಸಿಕವಾಗಿಯೂ ಸದೃಢರಾಗಿರಬೇಕು. ದ್ವೇಷ, ಅಸೂಯೆ, ಹೊಟ್ಟೆಕಿಚ್ಚು ಮತ್ತೊಬ್ಬರಿಗೆ ತೊಂದರೆ ನೀಡಿ ಸಂತೋಷ ಪಡುವುದನ್ನು ಬಿಡಬೇಕು ಎಂದು ತಿಳಿಸಿದ ಅವರು, ನಮ್ಮ ಇತಿ-ಮಿತಿಯಲ್ಲಿ ಜೀವನ ರೂಪಿಸಿಕೊಂಡಾಗ ಮಾತ್ರ ಮಾನಸಿಕವಾಗಿ ನೆಮ್ಮದಿಯಿಂದರಲು ಸಾಧ್ಯ ಎಂದರು.

ಇದೇ ಸಂದರ್ಭದಲ್ಲಿ ಉಪ ಪ್ರಧಾನ ಕಾನೂನು ಅಭಿರಕ್ಷಕ ಎಂ.ಮೂರ್ತಿ ಅವರು “ಮಾನಸಿಕ ಆರೋಗ್ಯ ಆರೈಕೆ ಕಾಯ್ದೆ-2017” ಕುರಿತು ಹಾಗೂ ಜಿಲ್ಲಾಸ್ಪತ್ರೆ ಮನೋವೈದ್ಯ ಡಾ.ಆರ್.ಮಂಜುನಾಥ್ ಅವರು “ಕಾರ್ಯಕ್ಷೇತ್ರದಲ್ಲಿ ಮಾನಸಿಕ ಒತ್ತಡ ನಿರ್ವಹಣೆ” ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಸಶಸ್ತ್ರ ಮೀಸಲು ಪಡೆ ಪೊಲೀಸ್ ಉಪ ಅಧೀಕ್ಷಕ ಎಸ್.ಎಸ್. ಗಣೇಶ್, ಚಿತ್ರದುರ್ಗ ಉಪ ವಿಭಾಗದ ಉಪ ಅಧೀಕ್ಷಕ ಪಿ.ಕೆ.ದಿನಕರ್, ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಅನಿಲ್ ಕುಮಾರ್, ಕಾರ್ಯದರ್ಶಿ ಆರ್.ಗಂಗಾಧರ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಡಿ.ಎಂ.ಅಭಿನವ್, ಜಿಲ್ಲಾ ಮಾನಸಿಕ ಕಾರ್ಯಕ್ರಮ ಆರೋಗ್ಯ ಅನುಷ್ಠಾನಾಧಿಕಾರಿ ಡಾ.ಜಿ.ಓ.ನಾಗರಾಜ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

Related Post

Leave a Reply

Your email address will not be published. Required fields are marked *