ಶಿವಮೊಗ್ಗ : ಅಂಗನವಾಡಿ ಕಾರ್ಯಕರ್ತೆಯರು ಸಮಾಜದ ವೈದ್ಯರಾಗಿ, ಚಿಕ್ಕ ಮಕ್ಕಳ ತಾಯಂದಿರಾಗಿ ಸೇವೆ ಒದಗಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ ಅವರ ಸೇವೆಯನ್ನು ಶ್ಲಾಘಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ, ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಮಕ್ಕಳ ಆರೋಗ್ಯ, ದೈಹಿಕ, ಮಾನಸಿಕ ಬೆಳವಣಿಗೆ, ಪಾಲನೆ-ಪೋಷಣೆ ಹಾಗೂ ಮಹಿಳೆಯರ ಯೋಗಕ್ಷೇಮದಲ್ಲಿ ಆಯುರ್ವೇದದ ಪಾತ್ರ ಕುರಿತು ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರಿಗೆ ಏರ್ಪಡಿಸಲಾಗಿದ್ದ ವರ್ಚುವಲ್ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ವೈದ್ಯರು ಜನರಿಗೆ ರೋಗ ಬಂದ ಮೇಲೆ ಚಿಕಿತ್ಸೆ ನೀಡುತ್ತಾರೆ. ಆದರೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ರೋಗ ಬರುವ ಮುನ್ನವೇ ಮಹಿಳೆಯರು-ಮಕ್ಕಳನ್ನು ಉಪಚರಿಸಿ ರೋಗ ಬಾರದಂತೆ ತಡೆಯುತ್ತಾರೆ. ಇವರು ನಿಜವಾದ ಸಮಾಜದ ವೈದ್ಯರು ಮತ್ತು ಸರ್ಕಾರ ಹಾಗೂ ಜನರ ನಡುವೆ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ವೈದ್ಯರು ಮಹಿಳೆಯರು-ಮಕ್ಕಳಿಗೆ ಅಗತ್ಯವಾದ ಪಾಲನೆ-ಪೋಷಣೆ, ಪೌಷ್ಟಿಕತೆ, ಆರೋಗ್ಯ ನಿರ್ವಹಣೆ ಬಗ್ಗೆ ತಿಳಿಯುವುದು ಅತಿ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಈ ತರಬೇತಿಯನ್ನು ಆಯೋಜಿಸಲಾಗಿದೆ ಎಂದರು
ಪ್ರತಿ ನಿಮಿಷಕ್ಕೆ 10 ಲಕ್ಷ ಪ್ಲಾಸ್ಟಿಕ್ ನೀರಿನ ಬಾಟಲ್ ಮಾರಾಟವಾಗುತ್ತಿದೆ. ನಾವು ಪ್ರತಿಯೊಬ್ಬರು 1 ವರ್ಷಕ್ಕೆ 1 ಎಟಿಎಂ ಕಾರ್ಡ್ನಷ್ಟು ಪ್ಲಾಸ್ಟಿಕ್ ಸೇವನೆ ಮಾಡುತ್ತಿದ್ದೇವೆ. ಎಲ್ಲೆಡೆ ಪ್ಲಾಸ್ಟಿಕ್‌ಮಯವಾಗಿದ್ದು ಇದನ್ನು ನಿಯಂತ್ರಿಸಬೇಕಿದೆ. ಪ್ರತಿ ವರ್ಷ ಕೇವಲ ಟಿಶ್ಯೂ ತಯಾರಿಸಲು 27 ಸಾವಿರ ಮರ ಮತ್ತು ಮನೆ ಕಟ್ಟಲು 3.36 ಲಕ್ಷ ಮರಗಳನ್ನು ಕಡಿಯಲಾಗುತ್ತಿದೆ. ಒಂದು ದೊಡ್ಡ ಮರ 10 ಜನರಿಗೆ ಆಮ್ಲಜನಕ ಒದಗಿಸುತ್ತದೆ. ಮಕ್ಕಳಿಗೆ ಗಿಡಗಳನ್ನು ಬೆಳೆಸುವುದನ್ನು ಕಲಿಸಬೇಕು. ಪರಿಸರ ಪ್ರಜ್ಞೆ ಬಿತ್ತಬೇಕು. -ಡಾ.ಧನಂಜಯ ಸರ್ಜಿ, ವಿಧಾನ ಪರಿಷತ್ ಶಾಸಕರು
ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ನಾವೆಲ್ಲ ಶ್ರಮಿಸಬೇಕು. ಆದ್ದರಿಂದ ಅವರು ಚಿಕ್ಕವರಾಗಿದ್ದಾಗಿನಿಂದ ಉತ್ತಮ ಅಡಿಪಾಯ ಅವರಲ್ಲಿ ಹಾಕಬೇಕು. 3 ರಿಂದ 6 ವರ್ಷದ ಮಕ್ಕಳನ್ನು ಸದೃಢವಾಗಿ ತಯಾರು ಮಾಡಬೇಕು. ನಿದ್ರೆಯಿಂದ ರೋಗ ಗುಣಪಡಿಸಬಹುದಾಗಿದ್ದು, ಉತ್ತಮ ನಿದ್ರೆ ಮಾಡಲು ಮಕ್ಕಳಿಗೆ ಅವಕಾಶ ನೀಡಬೇಕು.
ಮಕ್ಕಳಲ್ಲಿ ನಾವು ಮುಖ್ಯವಾಗಿ ಆತ್ಮವಿಶ್ವಾಸವನ್ನು ಬೆಳೆಸಬೇಕು. ಎದ್ದು ನಿಂತು ಪ್ರಶ್ನಿಸುವುದನ್ನು ಉತ್ತೇಜಿಸಬೇಕು. ಯಾವುದೇ ಕಾರಣಕ್ಕೂ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಬಾರದು. ಪ್ರತಿಯೊಬ್ಬರಲ್ಲೂ ಒಂದೊAದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಬೇಕು. ಧನಾತ್ಮಕ ಸಲಹೆಗಳನ್ನು ನೀಡತ್ತಾ ಹೋಗಬೇಕು. ಅತಿ ಮುದ್ದಿನಿಂದ ಕೇಳಿದ್ದಕ್ಕೆಲ್ಲ ಯೆಸ್ ಎನ್ನಬಾರದು, ಹಣದ ಮತ್ತು ಹಸಿವಿನ ಮಹತ್ವ ತಿಳಿಸಬೇಕು, ಅವರು ಆಯ್ಕೆ ಮಾಡುವುದಕ್ಕೆ ಅವಕಾಶ ನೀಡಬೇಕು, ಸೇವಾ ಮನೋಭಾವ ಬೆಳೆಸಬೇಕು. ಟಿವಿ ಮೊಬೈಲ್‌ನಿಂದ ಅವರು ಹೊರಬೇಕೆಂದರೆ ಮೊದಲು ಪೋಷಕರು ಅದರಿಂದ ದೂರವಿರಬೇಕು. ಉತ್ತಮ ಆಚಾರ, ವಿಚಾರ, ಸಂಸ್ಕೃತಿ, ಸಂಸ್ಕಾರ ನೀಡಬೇಕು. ಬಂಡೆಯಿAದ ಉತ್ತಮ ಶಿಲ್ಪ ರೂಪುಗೊಳ್ಳಲು ಪೋಷಕರು, ಗುರುಗಳು ಶ್ರಮಿಸಬೇಕು ಎಂದು ಕಿವಿಮಾತು ಹೇಳಿದ ಅವರು, ಅಂಗನವಾಡಿ ಕಾರ್ಯಕರ್ತೆಯರ ಪ್ರಶ್ನೆಗಳಿಗೆ ಉತ್ತರಿಸಿ ಸಂವಾದ ನಡೆಸಿದರು.
ಆಯುಷ್ ಇಲಾಖೆಯ ಡಾ.ಜ್ಯೋತಿ ಲಕ್ಷಿö್ಮ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ದಿನ ನಿತ್ಯ ತಮ್ಮ ವೈಯಕ್ತಿಕ, ಸಾಂಸರಿಕ ಮತ್ತು ಅಂಗನವಾಡಿ ಕೆಲಸಗಳನ್ನು ನಿರ್ವಹಿಸಬೇಕಿದ್ದು ಮೂರು ದೋಣಿಗಳನ್ನು ನಡೆಸುವ ನಾವಿಕರಾಗಿರುತ್ತಾರೆ. ಹೆಣ್ಣುಮಕ್ಕಳ ಪೌಷ್ಟಿಕತೆ ನೋಡಿಕೊಳ್ಳುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಹೆಣ್ಣುಮಕ್ಕಳ ಯೋಗಕ್ಷೇಮದಲ್ಲಿ ಆಯುರ್ವೇದದ ಪಾತ್ರವನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದ ಅವರು ಗರ್ಭಾವಸ್ಥೆಯ ವಿವಿಧ ಸ್ತರಗಳು, ಗರ್ಭಾವಸ್ಥೆಯಲ್ಲಿ ತೆಗೆದುಕೊಳ್ಳಬೇಕಾದ ಪೌಷ್ಟಿಕ ಆಹಾರ, ದಿನಚರಿ, ವ್ಯಾಯಾಮ, ಪ್ರಸವದ ಮುನ್ನೆಚ್ಚರಿಕೆ, ಎದೆಹಾಲು ಉತ್ಪಾದನೆ ಕಡೆ ಗಮನ, ಬಾಣಂತನದಲ್ಲಿ ಆಯುರ್ವೇದದ ಪಾತ್ರ ಕುರಿತು ವಿವರಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕರಾದ ಬಿ ಹೆಚ್ ಕೃಷ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಜಿ.ಪಂ ಸಿಇಓ ಮಾರ್ಗದರ್ಶನದಲ್ಲಿ ಇಂದು ಜಿಲ್ಲೆಯ ವಿಡಿಯೋ ಕಾನ್ಫರೆನ್ಸ್ಗೆ ಅವಕಾಶವಿರುವ ಗ್ರಾ.ಪಂ, ತಾಲ್ಲೂಕು ಕಚೇರಿ ಸೇರಿದಂತೆ 44 ಕೇಂದ್ರಗಳಿAದ 2400 ಅಂಗನವಾಡಿ ಕಾರ್ಯಕರ್ತೆಯರು, 80 ಮೇಲ್ವಿಚಾರಕರಿಗೆ ವರ್ಚುವಲ್ ಮೂಲಕ ತರಬೇತಿ ನೀಡಲಾಗುತ್ತಿದೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ಲಿಂಗರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ನಿರೂಪಣಾಧಿಕಾರಿ ಡಾ.ಸಂತೋಷ್ ಕುಮಾರ್, ಸಿಡಿಪಿಓ ಗಳು, ಇತರೆ ಅಧಿಕಾರಿಗಳು, ಅಂಗನವಾಡಿ ಮೇಲ್ವಿಚಾರಕರು, ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.