ಚಿತ್ರದುರ್ಗ : ಸರ್ಕಾರ ನಿರ್ದೇಶನದಂತೆ ಬರುವ ನವೆಂಬರ್ 18 ರಂದು ಜಿಲ್ಲಾದ್ಯಂತ ಅರ್ಥಪೂರ್ಣವಾಗಿ ಕನಕ ಜಯಂತಿ ಆಚರಣೆ ಮಾಡಲಾಗುವುದು. ಎಲ್ಲ ಸರ್ಕಾರಿ ಕಚೇರಿ, ಶಾಲಾ, ಕಾಲೇಜು, ಹಾಸ್ಟೆಲ್‌ಗಳಲ್ಲಿ ಕನಕದಾಸರ ಭಾವಚಿತ್ರ ಇರಿಸಿ ಗೌರವ ಸಮರ್ಪಿಸುವುದರೊಂದಿಗೆ ಜಯಂತಿ ಆಚರಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಕನಕ ಜಯಂತಿ ಆಚರಣೆ ಸಂಬAಧ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನಕ ಜಯಂತಿ ಅಂಗವಾಗಿ ನ. 18 ರಂದು ಬೆಳಿಗ್ಗೆ 9:30ಕ್ಕೆ ನಗರದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ಕನಕದಾಸರ ಭಾವಚಿತ್ರದ ಮೆರವಣಿಗೆ ಪ್ರಾರಂಭವಾಗಿ, ಸಂಗೊಳ್ಳಿ ರಾಯಣ್ಣ ವೃತ್ತ, ಗಾಂಧಿವೃತ್ತ, ಎಸ್‌ಬಿಐ ವೃತ್ತ, ಪ್ರವಾಸಿ ಮಂದಿರ ಮಾರ್ಗವಾಗಿ ಅಂಬೇಡ್ಕರ್ ವೃತ್ತ, ಮದಕರಿ ನಾಯಕರ ವೃತ್ತದ ಮೂಲಕ ತರಾಸು ರಂಗಮAದಿರ ತಲುಪಲಿದೆ. ಅಂದು ಮಧ್ಯಾಹ್ನ 12:30 ಕ್ಕೆ ನಗರದ ತ.ರಾ.ಸು ರಂಗಮAದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಡೊಳ್ಳು, ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಸರ್ಕಾರದ ಶಿಷ್ಟಾಚಾರದ ಅನುಸಾರ ಆಹ್ವಾನ ಪತ್ರಿಕೆ ಮುದ್ರಿಸಿ, ಜನಪ್ರತಿನಿಧಿಗಳನ್ನು ಜಯಂತಿಗೆ ಆಹ್ವಾನಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳದರು.
ಜಯಂತಿ ಅಂಗವಾಗಿ ಕನಕದಾಸರ ಕೀರ್ತನೆಗಳ ಗೀತಗಾಯನ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗುವುದು. ಜಯಂತಿ ಅಂಗವಾಗಿ ಒಂದು ದಿನ ಮುಂಚಿತವಾಗಿ ಕನಕದಾಸರ ಪ್ರತಿಮೆ ಸೇರಿದಂತೆ ನಗರದ ಎಲ್ಲಾ ಪ್ರತಿಮೆ ಹಾಗೂ ವೃತ್ತಗಳಿಗೂ ದೀಪಾಲಂಕಾರ ಹಾಗೂ ಪುಷ್ಪಾಲಂಕಾರ ಮಾಡಬೇಕು. ಜಿಲ್ಲಾಡಳಿತದ ವತಿಯಿಂದ ನಡೆಯುವ ಕನಕ ಜಯಂತಿ ಕಾರ್ಯಕ್ರಮಕ್ಕೆ ಸರ್ಕಾರಿ ಅಧಿಕಾರಿಗಳು, ನೌಕರರು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ತೋರಿದ ಕುರುಬ ಸಮಾಜದ ಐವರಿಗೆ ಹಾಗೂ ಇತರೆ ಐವರಿಗೆ ಸಮಾಜದ ವತಿಯಿಂದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಸಮಾಜದ ಮುಖಂಡರು ಸಭೆಯಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ಜಿ.ಪಂ.ಸಿಪಿಓ ಗಾಯಿತ್ರಿ, ನಗರಸಭೆ ಪೌರಾಯುಕ್ತೆ ರೇಣುಕಾ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಜಿಲ್ಲಾ ಕುರುಬ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀರಾಮ್, ನಗರಸಭೆ ಸದಸ್ಯೆ ಪಿ.ಕೆ.ಮೀನಾಕ್ಷಿ, ಸೇರಿದಂತೆ ಸಮಾಜದ ಮುಖಂಡರಾದ ಪೈಲ್ವಾನ್ ತಿಪ್ಪೇಸ್ವಾಮಿ, ಚಂದ್ರಶೇಖರ್, ಓಂಕಾರಮೂರ್ತಿ ಕುಮಾರ್ ಗೌಡ್ರು, ಮಂಜುನಾಥ, ಮಂಜಪ್ಪ ಸೇರಿದಂತೆ ಮತ್ತಿತರ ಗಣ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.