ಬಳ್ಳಾರಿ : ಈಡೀಸ್ ಸೊಳ್ಳೆಯು ಕಚ್ಚುವಿಕೆಯಿಂದ ಹರಡುವ ಡೆಂಗ್ಯೂ ರೋಗ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯು ನಡೆಸುವ ಚಟುವಟಿಕೆಗಳಿಗೆ ಸಾರ್ವಜನಿಕರು ಕೈ ಜೋಡಿಸುವ ಮೂಲಕ ರೋಗ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಹೇಳಿದರು.
ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ವಿಭಾಗದ ಮೂಲಕ ಈ ಡೀಸ್ ಸೊಳ್ಳೆ ಉತ್ಪತ್ತಿ ತಾಣಗಳು (ಸೂಪರ್ ಶುಕ್ರವಾರ) ನಿರ್ಮೂಲನಾ ದಿನ ಅಂಗವಾಗಿ ಬಳ್ಳಾರಿ ನಗರದ ಗಾಂಧಿನಗರ ಬಡಾವಣೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಈ ಡೀಸ್ ಲಾರ್ವಾ ಸಮೀ ಕಾರ್ಯದಲ್ಲಿ ಭಾಗವಹಿಸಿದ್ದರು.
ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ತಂಡ ಮನೆಗೆ ಭೇಟಿ ನೀಡಿ ಡೆಂಗ್ಯೂ ಹರಡುವ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಕಾರ್ಯವನ್ನು ಸಾರ್ವಜನಿಕರಿಗೆ ಮನವೊಲಿಸಿ ಯಶಸ್ವಿಯಾಗಿ ನಡೆಸಲಾಗುತ್ತಿದೆ, ಸಾರ್ವಜನಿಕರು ಸಹ ಬಳಕೆಗಾಗಿ ನೀರು ತುಂಬುವ ಈ ಎಲ್ಲಾ ಪರಿಕರಗಳನ್ನು ವಾರಕ್ಕೊಮ್ಮೆ ತೊಳೆಯಬೇಕು. ನೀರು ತುಂಬಿದ ನಂತರ ಸರಿಯಾಗಿ ಮುಚ್ಚಳ ಮುಚ್ಚಿ, ಹಾಗೂ ಅನಗತ್ಯವಾಗಿ ನೀರು ನಿಲ್ಲುವ ಪರಿಕರಗಳನ್ನು ವಾರಕ್ಕೊಮ್ಮೆ ಪರೀಕ್ಷಿಸಿ ಸೊಳ್ಳೆ ಮರಿ ಉಂಟಾಗದಂತೆ ತಡೆಯುವ ಮೂಲಕ ಸಮುದಾಯದ ಆರೋಗ್ಯ ಕಾಪಾಡುವ ಇಲಾಖೆ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಮಾತನಾಡಿ, ಇತ್ತೀಚೆಗೆ ರಾಜ್ಯ ಸರ್ಕಾರವು ಡೆಂಗ್ಯೂ ಜ್ವರವನ್ನು ಸಾಂಕ್ರಾಮಿಕ ಕಾಯ್ದೆಗೆ ಒಳಪಡಿಸಿದ್ದು, ಈಡೀಸ್ ಸೊಳ್ಳೆಗಳ ಲಾರ್ವಾ ಉತ್ಪತ್ತಿ ತಾಣಗಳನ್ನು ನಿರ್ಲಕ್ಷಿಸಿ 200 ರೂ. 2000 ರೂ.ಗಳವರೆಗೆ ದಂಡ ವಿಧಿಸುವ ಕಾನೂನು ಅನುಷ್ಠಾನ ಮಾಡಿದ್ದು, ಪ್ರತಿಯೊಬ್ಬರ ಸಹಭಾಗಿತ್ವದೊಂದಿಗೆ ಸೊಳ್ಳೆಗಳ ನಿಯಂತ್ರಣದ ಅವಶ್ಯಕತೆಯಿದೆ ಎಂದು ಹೇಳಿದರು.
ಸಾರ್ವಜನಿಕರು ಡೆಂಗ್ಯೂ ಕಾಯಿಲೆಗೆ ವಿಶೇಷ ಲಕ್ಷಣಗಳಾದ ಜ್ವರ, ಕಣ್ಣು ಕೆಂಪಾಗುವಿಕೆ, ಹಿಂಭಾಗದಲ್ಲಿ, ವಾಂತಿ, ಕಾರಣವಿಲ್ಲದೇ ಮೈ ತುರಿಕೆ, ತಲೆನೋವು, ಗಂಧೆಗಳು, ಕೀಲುಗಳಲ್ಲಿ ನೋವು, ಸ್ನಾಯು ನೋವು ಕಾಣಿಸಿಕೊಂಡಾಗ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರನ್ನು ಭೇಟಿ ಮಾಡಿ ಅಗತ್ಯ ಚಿಕಿತ್ಸೆ ನೀಡಬೇಕು. ಹೆಚ್ಚು ದಿನಗಳ ಕಾಲ ನೀರು ಸಂಗ್ರಹವಾಗಿರುವ ಸ್ಥಳಗಳಲ್ಲಿ ಗಪ್ಪಿ ಮತ್ತು ಗಾಂಬೋಷಿಯ ಮೀನುಗಳನ್ನು ಬಿಡಲು ಅವಕಾಶವಿದೆ, ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಮೀನುಗಳನ್ನು ಪಡೆದು ನೀರಿನ ತಾಣಗಳನ್ನು ಬಿಡಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಆರ್ ಅಬ್ದುಲ್ಲಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ ಸೇರಿದಂತೆ ಸ್ಥಳೀಯ ಸಂಸ್ಥೆ, ಸಾರ್ವಜನಿಕರು ಉಪಸ್ಥಿತರಿದ್ದ ರು.