ಶಿವಮೊಗ್ಗ : ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿ ಹಲವಾರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನಪೇಟೆ ಬಳಿಯ ಚಿಕ್ಕಜೆನಲ್ಲಿ ನಡೆದಿದೆ.
ಬಸ್ ಪಲ್ಟಿಯಾದ ಪರಿಣಾಮ ಬಸ್ ನಲ್ಲಿದ್ದ 20 ಪ್ರಯಾಣಿಕರ ಪೈಕಿ 15 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯಾಳುಗಳನ್ನು ರಿಪ್ಪನ್‌ಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವಮೊಗ್ಗದಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಖಾಸಗಿ ದುರ್ಗಾಂಬ ಬಸ್ಸೊಂದು ಹೊಸನಗರದಿಂದ ಭತ್ತ ಕಟಾವು ಯಂತ್ರವನ್ನು ಹೊತ್ತೊಯ್ಯುತ್ತಿದ್ದ ತಮಿಳುನಾಡಿನ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್ ಪಲ್ಟಿಯಾಗಿದೆ. ಅಪಘಾತದಲ್ಲಿ ಗಾಯಗೊಂಡವರಿಗಾಗಿ ಸ್ಥಳೀಯ ನಿವಾಸಿಗಳು ಆಂಬ್ಯುಲೆನ್ಸ್‌ಗೆ ಕರೆ ಮಾಡಿದರು, ಆದರೆ ಅದು ಬಹಳ ಸಮಯ ಕಳೆದರೂ ಬಂದಿಲ್ಲ ಎಂದು ಆರೋಪಿಸಲಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ರಿಪ್ಪನ್ ಪೇಟೆ ಪಿಎಸ್ ಐ ಪ್ರವೀಣ್ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ಸಕಾಲಕ್ಕೆ ಪೊಲೀಸ್ ಜೀಪಿನಲ್ಲಿ ಆಸ್ಪತ್ರೆಗೆ ಸಾಗಿಸಿದರು. ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.