ಚಿತ್ರದುರ್ಗ : ಜಿಲ್ಲಾ ಕೇಂದ್ರದಲ್ಲಿ ಡಿಸೆಂಬರ್ 03ರಂದು ವಿಶ್ವ ವಿಕಲಚೇತರನರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಸಂಬಂಧ ಅಗತ್ಯ ಪೂರ್ವಸಿದ್ದತೆಗಳನ್ನು ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಶ್ವ ವಿಕಲಚೇತರನರ ದಿನಾಚರಣೆಯನ್ನು ಡಿಸೆಂಬರ್-03ರಂದು ಆಚರಿಸುವ ಸಂಬಂಧ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2024ರ ಡಿಸೆಂಬರ್-03ರಂದು ಬೆಳಿಗ್ಗೆ 11ಕ್ಕೆ ನಗರದ ತ.ರಾ.ಸು ರಂಗಮಂದಿರದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ವಿಶ್ವ ವಿಕಲಚೇತರನರ ದಿನಾಚರಣೆ ಅಂಗವಾಗಿ ಅನುಷ್ಠಾನ ಇಲಾಖೆಗಳಿಗೆ, ವಿಕಲಚೇತನರಿಗೆ ಮತ್ತು ಸಾರ್ವಜನಿಕರಿಗೆ 21 ಬಗೆಯ ಅಂಗವಿಕಲತೆಯ ಬಗ್ಗೆ ಅರಿವು ಮೂಡಿಸಲು ಒಂದು ವಾರ ಇದೇ ನವೆಂಬರ್ 25 ರಿಂದ ಡಿಸೆಂಬರ್ 01 ರವರೆಗೆ “ವಿಕಲಚೇತನರ ಸಪ್ತಾಹ” ಆಚರಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದರು.
ವಿಕಲಚೇತನರ ಸಪ್ತಾಹದ ಅಂಗವಾಗಿ ವಿಕಲಚೇತರಿಗೆ ಕ್ರೀಡಾ ಮತ್ತು ಸಾಂಸ್ಕøತಿಕ ಕಾರ್ಯಕ್ರಮ, ಆರೋಗ್ಯ ತಪಾಸಣಾ ಶಿಬಿರ, ಕಾನೂನು ಅರಿವು-ನೆರವು ಕಾರ್ಯಕ್ರಮ, 21 ಬಗೆಯ ಅಂಗವಿಕಲತೆ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತಿಳಿಸಿದರು. ಸಭೆಯಲ್ಲಿ ಹಾಜರಿದ್ದ ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ವಿಶ್ವ ವಿಕಲಚೇತನ ದಿನಾಚರಣೆ ಅಂಗವಾಗಿ ಅಗತ್ಯ ಸಹಕಾರ ನೀಡಲು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ರಾಜ್ಯ ಸರ್ಕಾರಿ ವಿಕಲಚೇತನರ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಜಿಲ್ಲೆಯಲ್ಲಿ ವಿಕಲಚೇತನರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುತ್ತಿರುವ ಸ್ವಯಂ ಸಂಸ್ಥೆಗಳು ಹಾಗೂ ತಾಲ್ಲೂಕು ಎಂ.ಆರ್.ಡಬ್ಲ್ಯೂಗಳು, ಯು.ಆರ್.ಡಬ್ಲ್ಯೂಗಳು ಭಾಗವಹಿಸಿದ್ದರು.