ಚಿತ್ರದುರ್ಗ : ಶಿವಮೊಗ್ಗ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತಕ್ಕೊಳಪಟ್ಟಿರುವ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂನ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಹಾಗೂ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ವತಿಯಿಂದ ಬಬ್ಬೂರು ಫಾರಂನ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಇದೇ ನ.16 ಮತ್ತು 17ರಂದು ಎರಡು ದಿನಗಳ ಕೃಷಿಮೇಳ ಆಯೋಜಿಸಲಾಗಿದೆ.
ಈ ಕೃಷಿಮೇಳದ ಆಕರ್ಷಣೆಯಾಗಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಪ್ರಾತ್ಯಕ್ಷೀಕೆಗಳು, ವಿವಿಧ ಬೆಳೆಗಳ ಸಂಶೋಧನಾ ಪ್ರಾತ್ಯಕ್ಷೀಕೆಗಳು, ಜೇನುಕೃಷಿ ಮತ್ತು ಕೀಟ ವಿಸ್ಮಯ, ಗ್ರಾಮೀಣ ಕೃಷಿ ಹವಾಮಾನ ಘಟಕ, ಬಾಡಿಗೆ ಆಧಾರಿತ ಯಂತ್ರೋಪಕರಣಗಳ ಘಟಕ, ಕೃಷಿ ಸಂಬಂಧಿತ ವಸ್ತುಪ್ರದರ್ಶನ ಮಳಿಗೆಗಳು, ಸಿರಿಧಾನ್ಯ ಮಹತ್ವ, ಸುಧಾರಿತ ಉತ್ಪಾದನಾ ತಾಂತ್ರಿಕತೆಗಳು ಹಾಗೂ ಮೌಲ್ಯವರ್ಧನೆ, ತೋಟಗಾರಿಕೆ ಬೆಳೆಗಳಲ್ಲಿ ಸಮಗ್ರ ಬೇಸಾಯ ಕ್ರಮಗಳು, ಪೌಷ್ಠಿಕ ಆಹಾರಕ್ಕಾಗಿ ವಿಕಸಿತ ಕೃಷಿ ಹಾಗೂ ಆಧುನಿಕ ಕೃಷಿ ಯಂತ್ರೋಪಕರಣಗಳ ಉಪಯೋಗ ಮತ್ತು ಬಳಕೆ ಕುರಿತು ತಾಂತ್ರಿಕ ಸಮಾವೇಶ ಜರುಗಲಿದೆ.
ಹೆಚ್ಚಿನ ಸಂಖ್ಯೆಯಲ್ಲಿ ರೈತಬಾಂಧವರು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೇಂದ್ರದ ಸಹ ಸಂಶೋಧನಾ ನಿರ್ದೇಶಕರಾದ ಡಾ. ಶರಣಪ್ಪ ಜಂಗಂಡಿ ತಿಳಿಸಿದ್ದಾರೆ.