Breaking
Tue. Jan 14th, 2025

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ…‌‌!

ಚಿತ್ರದುರ್ಗ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪತ್ರಿಕೆ ಹಾಗೂ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷೆ ಬಿ.ಎನ್.ಸುಮಿತಾ ಹೇಳಿದರು.

  ನಗರದ ಶ್ರೀ ಕೃಷ್ಣ ರಾಜೇಂದ್ರ ನಗರ ಕೇಂದ್ರ ಗ್ರಂಥಾಲಯದಲ್ಲಿ ಶನಿವಾರ ಸಾರ್ವಜನಿಕ ಗ್ರಂಥಾಲಯ ಇಲಾಖೆ ಹಾಗೂ ಚಿತ್ರದುರ್ಗ ನಗರ ಕೇಂದ್ರ ಗ್ರಂಥಾಲಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಎಸ್.ಆರ್.ರಂಗನಾಥ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಮಾನಗಳಲ್ಲಿ ಯುವ ಪೀಳಿಗೆ ವಿವಿಧ ರೀತಿಯ ದುಶ್ಚಟ ಹಾಗೂ ಮೊಬೈಲ್ ಗೀಳಿಗೆ ದಾಸರಾಗುತ್ತಿದ್ದಾರೆ. ಇವುಗಳಿಂದ ಹೊರಬಂದು ಗ್ರಂಥಾಲಯದಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಂಡು ಜ್ಞಾನ ಸಂಪತ್ತು ವೃದ್ಧಿಸಿಕೊಳ್ಳಬೇಕು. ಪುಸ್ತಕದ ಸಾಂಗತ್ಯದಿಂದ ಉನ್ನತ ಮಟ್ಟಕ್ಕೆ ಬೆಳೆದು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.

ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಕೊಳ್ಳಿ ಬಸವರಾಜ ಮಾತನಾಡಿ, ಪ್ರತಿ ವರ್ಷ ನ.14 ರಿಂದ 20ರವರೆಗೆ ದೇಶಾದ್ಯಂತ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಿಸಲಾಗುತ್ತದೆ. ದೇಶದಲ್ಲಿ ಗ್ರಂಥಾಲಯ ಎಂಬ ಪರಿಕಲ್ಪನೆ ನೀಡಿದವರು ಎಸ್.ಆರ್.ರಂಗನಾಥ್. ಈ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯೆ, ಜ್ಞಾನಾರ್ಜನೆ, ಉದ್ಯೋಗಾವಕಾಶ ದೊರಕಿಸಿಕೊಟ್ಟ ಮಹಾನ್ ಚೇತನ ಎಂದು ತಿಳಿಸಿದರು.

ಮಕ್ಕಳನ್ನು ಮುನ್ನೆಲೆಗೆ ತರುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳ ಆಯೋಜಿಸಲಾಗುತ್ತಿದೆ. ಅದರಂತೆ ಮಕ್ಕಳಿಗೆ ಗ್ರಂಥಾಲಯ ಮಹತ್ವ ತಿಳಿಸಲು, ಮಕ್ಕಳ ಗ್ರಂಥಾಲಯ ಸ್ಥಾಪಿಸಲಾಗಿದೆ. ಆದ್ದರಿಂದ ವಿದ್ಯಾರ್ಥಿಗಳು, ಮಕ್ಕಳು, ಓದುಗರು ಇದರ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷ ಯೋಗೇಶ್ ಸಹ್ಯಾದ್ರಿ ಮಾತನಾಡಿ, ಯಾವುದೇ ಒಂದು ಗ್ರಂಥಾಲಯ ಉಳಿಯಬೇಕು, ಬೆಳೆಯಬೇಕು ಎಂದರೆ ಮುಖ್ಯ ಕಾರಣ ಓದುಗರು. ಗ್ರಂಥಾಲಯಗಳು ಇರುವುದೇ ಓದುಗರಿಗೋಸ್ಕರ. ಪುಸ್ತಕ ಓದುವುದರಿಂದ ಸಿಗುವ ಖುಷಿ, ಸಂತೋಷ ಪರ್ಯಾಯ ವಸ್ತುಗಳಲ್ಲಿ ಸಿಗುವುದಿಲ್ಲ. ಆದ್ದರಿಂದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಉತ್ತಮವಾದ ವೇದಿಕೆ ಕಲ್ಪಿಸಲಾಗಿದೆ. ಇಂತಹ ವೇದಿಕೆಗಳನ್ನು ಬಳಸಿಕೊಂಡು ಉತ್ತಮವಾದ ಓದುಗನಾದರೆ, ಒಳ್ಳೆಯ ಬರಹಗಾರ, ವಾಗ್ಮಿ, ಸಾಹಿತಿ ಅಷ್ಟೇ ಅಲ್ಲದೇ, ಉತ್ತಮವಾದ ಜೀವನ ಶೈಲಿ ರೂಢಿಸಿಕೊಳ್ಳಬಹುದು. ಈ ಸಮಾಜದಲ್ಲಿ ವಿಶ್ವಮಾನವನಾಗಿ ಬಾಳಬೇಕಾದರೆ ಅದು ಓದಿನಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಯಶೋಧ ರಾಜಶೇಖರಪ್ಪ ಅವರು ಕನ್ನಡ ನಾಡಿಗೆ ಚಿತ್ರದುರ್ಗದ ಕೊಡುಗೆ ಹಾಗೂ ಗ್ರಂಥಾಲಯದ ಉಪಯೋಗ ಕುರಿತು ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಚಿತ್ರಕಲೆ, ಪ್ರಬಂಧ ಸ್ಪರ್ಧೆ, ಉತ್ತಮ ಓದುಗ, ಆಶುಭಾಷಣ ಹಾಗೂ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಮತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಾಹಿತಿ ಹೆಚ್.ಆನಂದ್ ಕುಮಾರ್, ನಗರಸಭೆ ಸದಸ್ಯೆ ಪಿ.ಎನ್.ಶ್ವೇತಾ ಸೇರಿದಂತೆ ಗ್ರಂಥಾಲಯದ ಸಿಬ್ಬಂದಿ, ಓದುಗರು ಇದ್ದರು.

Related Post

Leave a Reply

Your email address will not be published. Required fields are marked *