ಬಳ್ಳಾರಿ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಮತ್ತು ಅಕ್ಷರ ಫೌಂಡೇಷನ್ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯತ್‌ನ ನಜೀರ್ ಸಭಾಂಗಣದಲ್ಲಿ ಗುರುವಾರ ಗಣಿತ ಕಲಿಕಾ ಆಂದೋಲನ-ಜಿಲ್ಲಾ ಮಟ್ಟದ ವಿಚಾರ ಸಂಕಿರಣ ನಡೆಯಿತು.
ಜಿಲ್ಲಾ ಪಂಚಾಯತ್‌ನ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಶಾಲಾ ಮಕ್ಕಳಲ್ಲಿ ಗಣಿತಾ ವಿಷಯದಲ್ಲಿ ಕಲಿಕಾಸಕ್ತಿ ಮೂಡಿಸಲು ವಿಚಾರ ಸಂಕಿರಣಗಳು ಮುಖ್ಯವಾಗಿದ್ದು, ಶಿಕ್ಷಕರು ಸಕ್ರೀಯವಾಗಿ ಪಾಲ್ಗೊಂಡು ವಿಚಾರಗೋಷ್ಠಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಅಕ್ಷರ ಫೌಂಡೇಷನ್‌ನ ಕಾರ್ಯಾಚರಣೆ ಮತ್ತು ಸಮುದಾಯ ಅಭಿವೃದ್ಧಿಯ ಮುಖ್ಯಸ್ಥರಾದ ಶಂಕರ್ ನಾರಾಯಣ ಜೆ.ವಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲಾ ಮಟ್ಟದಲ್ಲಿ ಗಣಿತ ವಿಷಯದಲ್ಲಿ ಮಕ್ಕಳಿಗೆ ಗುಣಮಟ್ಟ ತರಬೇತಿ ನೀಡಲು, ಪ್ರೌಢಶಾಲಾ ಮಕ್ಕಳಲ್ಲಿನ ಕಲಿಕೆಯ ಸಾರಾಂಶವನ್ನು ಕಾರ್ಯಗತಗೊಳಿಸಲು ವಿಚಾರ ಸಂಕಿರಣವು ಹಮ್ಮಿಕೊಳ್ಳಲಾಗಿದೆ ಎಂದರು.
ಶಾಲಾ ಶಿಕ್ಷಣ ಇಲಾಖೆಯ ಆಡಳಿತದ ಉಪನಿರ್ದೇಶಕರಾದ ಉಮಾದೇವಿ, ಶಾಲಾ ಶಿಕ್ಷಣ ಇಲಾಖೆಯ ಅಭಿವೃದ್ಧಿಯ ಉಪನಿರ್ದೇಶಕರಾದ ಓ.ಆರ್ ಪ್ರಕಾಶ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ನಿಂಗಪ್ಪ, ಬಳ್ಳಾರಿ ತಾಲ್ಲೂಕಿನ ರ‍್ರಗುಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿಚಾರ ಗೋಷ್ಠಿ ನಡೆಸಿಕೊಟ್ಟರು.
ಬಳಿಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಗ್ರಾಮ ಪಂಚಾಯತಿ ಮಟ್ಟದ ಗಣಿತ ಸ್ಪರ್ಧೆಗಳ ಬಳ್ಳಾರಿ ಜಿಲ್ಲೆ ವರದಿ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಉತ್ತಮ ಫಲಿತಾಂಶ ಪಡೆದ ಜಿಲ್ಲೆಯಲ್ಲಿನ 25 ಶಾಲೆಗಳು ಮತ್ತು 25 ಗ್ರಾಮ ಪಂಚಾಯತಿಗಳಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಗ್ರಾಪಂ ಅಧ್ಯಕ್ಷರು, ವಿವಿಧ ಶಾಲೆಗಳ ಶಿಕ್ಷಕರು ಹಾಗೂ ಇತರರು ಉಪಸ್ಥಿತರಿದ್ದರು.