ಶಿವಮೊಗ್ಗ : ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಅನುಷ್ಠಾನಗೊಂಡಿರುವ “ಅನ್ನಭಾಗ್ಯ” ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಈ ಯೋಜನೆ ಫಲ ದಕ್ಕುವುದು ರಾಜ್ಯ ಸರ್ಕಾರದ ಮುಖ್ಯ ಧೈಯವಾಗಿರುತ್ತದೆ. ಈ ನಿಟ್ಟಿನಲ್ಲಿ ಬಿಪಿಎಲ್ ಪಡಿತರ ಚೀಟಿದಾರರ ಮೌಲ್ಯಮಾಪನದ ಪರಿಷ್ಕರಣೆ ಪ್ರಕ್ರಿಯೆ ಸರ್ಕಾರದ ಸೂಚನೆಯಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆರಂಭಿಸಿದೆ. ಆದರೆ ಅರ್ಹರ ಬಿಪಿಎಲ್ ಕಾರ್ಡ್ ಗಳು ರದ್ದಾಗುವುದಿಲ್ಲ.
ಅರ್ಹ ಬಿಪಿಎಲ್ ಕಾರ್ಡ್ದಾರರಿಗೆ ಅನ್ನಭಾಗ್ಯ ಯೋಜನೆಯ ಫಲ ತಪ್ಪುವುದಿಲ್ಲ. ಆದ್ದರಿಂದ ಅರ್ಹ ಬಿಪಿಎಲ್ ಪಡಿತರ ಚೀಟಿದಾರರು ಆತಂಕ ಪಡುವ ಅಗತ್ಯವಿಲ್ಲ ಎಂದು ಶಿವಮೊಗ್ಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಶ್ರೀ ಸಿ.ಎಸ್. ಚಂದ್ರಭೂಪಾಲ ರವರು ತಿಳಿಸಿದ್ದಾರೆ.
ಅನರ್ಹ ಬಿಪಿಎಲ್ ಕಾರ್ಡ್ ಗಳನ್ನು ವಾಪಾಸ್ ಪಡೆಯುವುದು ಸರ್ಕಾರದ ಆಲೋಚನೆಯಾಗಿದ್ದು, ಆರ್ಹರ ಬಿಪಿಎಲ್ ಕಾರ್ಡ್ ಯಾವುದೇ ಕಾರಣಕ್ಕೂ ರದ್ದು ಮಾಡಬಾರದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶ ನೀಡಿದೆ. ಪರಿಷ್ಕರಣೆಯ ವೇಳೆ ಕೈತಪ್ಪಿನಿಂದ ಬಡವರಿಗೆ ಅನ್ಯಾಯವಾದರೆ ಅಂಥವರಿಗೆ ಬಿಪಿಎಲ್ ಕಾರ್ಡ್ ಪಡೆಯಲು ಮತ್ತೊಮ್ಮೆ ಅವಕಾಶವನ್ನು ನೀಡಲಾಗುತ್ತದೆ. ಅರ್ಹವಲ್ಲದವರು ಅಕ್ರಮವಾಗಿ ಬಿಪಿಎಲ್ ಪಡೆದಿದ್ದರೆ ಅಂಥವರನ್ನು ಪತ್ತೆ ಹಚ್ಚುವ ಕೆಲಸವನ್ನು ಪರಿಷ್ಕರಣೆ ವೇಳೆ ನಡೆಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಸರ್ಕಾರದ ಮಾರ್ಗಸೂಚಿ ಅನುಸರಿಸದೇ ಅನರ್ಹರು ಬಿಪಿಎಲ್ ಪಡಿತರ ಚೀಟಿ ಪಡೆದಿದ್ದರೆ ಮಾತ್ರ ಅವರ ಬಿಪಿಎಲ್ ಕಾರ್ಡ್ ಗಳನ್ನು ರದ್ದುಪಡಿಸಿ ಎಪಿಎಲ್ ಕಾರ್ಡ್ ಗೆ ವರ್ಗಾಯಿಸುವ ಪ್ರಕ್ರಿಯೆಯನ್ನು ಆಹಾರ ಇಲಾಖೆ ಚುರುಕುಗೊಳಿಸಿದೆ. ಇದನ್ನೇ ಅಸ್ತ್ರವಾಗಿಟ್ಟುಕೊಂಡು ಜನರಿಗೆ ಗೊಂದಲ ಮಾಡಬಾರದು, ಆದ್ದರಿಂದ ನೈಜ್ಯ ಪಡಿತರ ಚೀಟಿದಾರರು ಈ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು. ಬಡವರ ಬಿಪಿಎಲ್ ಕಾರ್ಡ್ ಗಳು ಖಂಡಿತ ರದ್ದಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅರ್ಹ ಬಿಪಿಎಲ್ ಕಾರ್ಡ್ದಾರರು ಅನ್ನಭಾಗ್ಯ ಯೋಜನೆಯಿಂದ ವಂಚಿತರಾಗದಂತೆ ಮುನ್ನಚ್ಚರಿಕೆ ಕ್ರಮವಾಗಿ ಕಾರ್ಯನಿರ್ವಹಿಸಲು ಜಿಲ್ಲಾ ಮತ್ತು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯರಿಗೆ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ರಾಜ್ಯ ಅಧ್ಯಕ್ಷರು ಸೂಚನೆ ನೀಡಿದ್ದಾರೆ.
ಗ್ಯಾರಂಟಿ ಪ್ರಾಧಿಕಾರದ ಸದಸ್ಯರು ಸರ್ಕಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಅರ್ಹರಿಗೆ ಅನ್ಯಾಯವಾಗದಂತೆ ತಮ್ಮ ತಮ್ಮ ವಾರ್ಡ್ ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಯಚಟುವಟಿಕೆ ನಡೆಸುವಂತೆ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಪ್ರಜಾ ಪ್ರತಿನಿಧಿಗಳ ಕಾರ್ಯನಿರ್ವಹಿಸಬೇಕು. ಗ್ಯಾರಂಟಿ ಪ್ರಾಧಿಕಾರದ ಎಲ್ಲಾ ಸದಸ್ಯರು ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಅವರು ಸೂಚನೆ ನೀಡಿದ್ದಾರೆ.