Breaking
Mon. Dec 23rd, 2024

ಸರ್ಕಾರದ ಬಾಲಮಂದಿರಗಳಿಗೆ ಜಿ.ಪಂ. ಸಿಇಒ ಸೋಮಶೇಖರ್ ಭೇಟಿ

 

ಮಕ್ಕಳಿಗೆ ಗುಣಮಟ್ಟದ ಸೌಲಭ್ಯ ಒದಗಿಸಲು ತಾಕೀತು

ಚಿತ್ರದುರ್ಗ ನಗರದಲ್ಲಿರುವ ಬಾಲಕರ ಹಾಗೂ ಬಾಲಕಿಯರ ಸರ್ಕಾರಿ ಬಾಲ ಮಂದಿರಗಳಿಗೆ ಮಂಗಳವಾರದಂದು ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್ ಅವರು, ಬಾಲಮಂದಿರದಲ್ಲಿನ ಮಕ್ಕಳಿಗೆ ಉತ್ತಮ ಗುಣಮಟ್ಟದ ಸೌಲಭ್ಯಗಳನ್ನು ಒದಗಿಸುವಂತೆ ತಾಕೀತು ಮಾಡಿದರು.
ಬಾಲಕರ ಸರ್ಕಾರಿ ಬಾಲಮಂದಿರದಲ್ಲಿ ಒಟ್ಟು 30 ಹಾಗೂ ಬಾಲಕಿಯರ ಬಾಲಮಂದಿರದಲ್ಲಿ 29 ಮಕ್ಕಳು ದಾಖಲಾಗಿರುವ ಬಗ್ಗೆ ಮಾಹಿತಿ ಪಡೆದು, ಸಂಕಷ್ಟದಲ್ಲಿರುವ ಮಕ್ಕಳ ಪೋಷಣೆ ಮತ್ತು ರಕ್ಷಣೆಯ ಅವಶ್ಯಕತೆ ಇರುವ ಮಕ್ಕಳಿಗೆ ಉಚಿತವಾಗಿ ತುರ್ತು ಸೇವೆ ಒದಗಿಸುವ ಸಲುವಾಗಿ ಸರ್ಕಾರ ಬಾಲಮಂದಿರಗಳನ್ನು ಸ್ಥಾಪಿಸಿದೆ. ಇಲ್ಲಿ ದಾಖಲಾಗುವ ಮಕ್ಕಳಿಗೆ ಉತ್ತಮ ಆಪ್ತ ಸಮಾಲೋಚನೆ ನಡೆಸುವುದರ ಮೂಲಕ ಮಾನಸಿಕವಾಗಿ ಸ್ಥೈರ್ಯ ತುಂಬುವ ಕಾರ್ಯವನ್ನು ಸಿಬ್ಬಂದಿಗಳು ನಿರ್ವಹಿಸಬೇಕು. ಮಕ್ಕಳಿಗೆ ಉತ್ತಮ ಊಟೋಪಹಾರ, ಕಾಲಕಾಲಕ್ಕೆ ಅಗತ್ಯ ವೈದ್ಯಕೀಯ ನೆರವು ಜೊತೆಗೆ ಉತ್ತಮ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸೂಚನೆ ನೀಡಿದರು.
ಬಾಲಮಂದಿರದಲ್ಲಿನ ಮಕ್ಕಳ ಹಾಜರಾತಿ ವಿವರವನ್ನು ಪರಿಶೀಲಿಸಿ, ಬಾಲ ಮಂದಿರದ ವಸತಿ ಕೊಠಡಿಗಳಿಗೆ ತೆರಳಿ ಸೌಲಭ್ಯಗಳ ಬಗ್ಗೆ ವೀಕ್ಷಣೆ ನಡೆಸಿದರು. ಅಡುಗೆ ತಯಾರಿಕೆ ಕೊಠಡಿ ತೆರಳಿ, ಮಕ್ಕಳಿಗೆ ನೀಡಲಾಗುವ ಊಟೋಪಹಾರದ ಮೆನು, ಹಾಗೂ ತಯಾರಿಸಲಾಗಿದ್ದ ಅಡುಗೆಯನ್ನು ಪರಿಶೀಲಿಸಿದರು. ಶುದ್ಧ ಕುಡಿಯುವ ನೀರು, ಆಹಾರ ಗುಣಮಟ್ಟ, ವಿತರಣೆ ಹಾಗೂ ಸ್ವಚ್ಛತೆಯ ಬಗ್ಗೆ ಸಿಬ್ಬಂದಿಗೆ ಸಲಹೆ, ಸೂಚನೆಗಳನ್ನು ನೀಡಿದರು.
ಶೈಕ್ಷಣಿಕ ಪ್ರಗತಿಯ ಬಗ್ಗೆ ಮಕ್ಕಳು ಹಾಗೂ ಸಿಬ್ಬಂದಿಯವರೊಂದಿಗೆ ಸಂವಾದ ನಡೆಸಿದ ಸಿಇಒ ಅವರು. ತದನಂತರ ಎಲ್ಲ ಮಕ್ಕಳ ಆರೋಗ್ಯದ ಬಗ್ಗೆ ವಿಚಾರಿಸಿದರು. ಪ್ರತಿ ತಿಂಗಳು ವೈದ್ಯರ ಬಳಿ ಮಕ್ಕಳು ತಪಾಸಣೆ ಮಾಡಿಸಿಕೊಳ್ಳುತ್ತಿರುವ ಬಗ್ಗೆ ಚರ್ಚಿಸಿ, ಮಕ್ಕಳ ಆರೋಗ್ಯ ಮತ್ತು ಆರೈಕೆಗಳ ಬಗ್ಗೆ ಕೆಲವು ಸಲಹೆಗಳನ್ನು ನೀಡಿದರು. ಸಂವಾದ ಸಂದರ್ಭದಲ್ಲಿ ಮಕ್ಕಳ ಅಗತ್ಯತೆ ಬಗ್ಗೆ ಕೇಳಿದಾಗ, ಮಕ್ಕಳು ತಮಗೆ ಒಳಾಂಗಣದಲ್ಲಿ ಆಡಬಹುದಾದ ಚೆಸ್, ಕೇರಂ ಮುಂತಾದ ಆಟದ ಸಾಮಗ್ರಿಗಳನ್ನು ಒದಗಿಸುವಂತೆ ಕೋರಿದರು. ಅಲ್ಲದೆ ಮೈಸೂರಿನಲ್ಲಿನ ಅರಮನೆ, ಮೃಗಾಲಯ ಮತ್ತಿತರ ಪ್ರವಾಸಿ ತಾಣಗಳನ್ನು ವೀಕ್ಷಿಸುವ ಆಸೆಯನ್ನು ಇದೇ ಸಂದರ್ಭದಲ್ಲಿ ಮಕ್ಕಳು ವ್ಯಕ್ತಪಡಿಸಿದರು. ಇದಕ್ಕೆ ಕೂಡಲೆ ಸ್ಪಂದಿಸಿದ ಸಿಇಒ ಅವರು, ಶೀಘ್ರವೇ ಮಕ್ಕಳ ಆಶಯವನ್ನು ಈಡೇರಿಸುವ ಭರವಸೆ ನೀಡಿದರು. ಇದರ ಜೊತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕಾಗಿ ಲ್ಯಾಪ್‍ಟಾಪ್‍ಗಳನ್ನು ಪೂರೈಸುವುದಾಗಿಯೂ ಭರವಸೆ ನೀಡಿದರು.
ಸಂಕಷ್ಟದಲ್ಲಿರುವ ಮಕ್ಕಳನ್ನು ರಕ್ಷಿಸುವ ನಿಟ್ಟಿನಲ್ಲಿ ಉಚಿತ ಸಹಾಯವಾಣಿ 1098 ಕುರಿತು ವ್ಯಾಪಕವಾಗಿ ಪ್ರಚಾರ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಮಕ್ಕಳ ಶಿಕ್ಷಣಾಧಿಕಾರಿ ಸವಿತಾ, ಜಿಲ್ಲಾ ಮಕ್ಕಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಹಾಯಕ ಅಧಿಕಾರಿ ಪವಿತ್ರ, ಬಾಲಕರ ಸರ್ಕಾರಿ ಬಾಲ ಮಂದಿರದ ಅಧೀಕ್ಷಕ ಜಿ. ವಿ. ಸಂತೋಷ, ಬಾಲಕಿಯರ ಬಾಲ ಮಂದಿರದ ಅಧೀಕ್ಷಕಿಯರಾದ ಜ್ಯೋತಿ ಹಾಗೂ ಕಾವೇರಮ್ಮ ಉಪಸ್ಥಿತರಿದ್ದರು.

Related Post

Leave a Reply

Your email address will not be published. Required fields are marked *