ಚಿತ್ರದುರ್ಗ : ಜನಸಂಖ್ಯಾ ಸ್ಥಿರತೆ ಶಿಕ್ಷಣ, ಕುಟುಂಬ ಯೋಜನಾ ಸೇವಾ ಸೌಲಭ್ಯ ಸಮುದಾಯದ ಮನಮುಟ್ಟಬೇಕು ಎಂದು ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಹೇಳಿದರು.
ನಗರದ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನೂತನವಾಗಿ ಸೇವೆ ಸೇರಿದ ನರ್ಸಿಂಗ್ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು, ನಗರ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು, ನಮ್ಮ ಕ್ಲಿನಿಕ್ ವೈದ್ಯಾಧಿಕಾರಿಗಳಿಗೆ ನೂತನ ಗರ್ಭ ನಿರೋಧಕಗಳ ಪರಿಚಯ ಕುರಿತು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಜನಸಂಖ್ಯಾ ಸ್ಥಿರತೆಯನ್ನು ಕಾಪಾಡುವುದು. ಸರಿಯಾದ ಸಮಯದಲ್ಲಿ ಅರ್ಹ ದಂಪತಿಗಳಿಗೆ ಕುಟುಂಬ ಯೋಜನೆ ತಲುಪಿಸುವುದು. ಇಲಾಖೆಯಲ್ಲಿ ದೊರೆಯುವ ಕುಟುಂಬ ಯೋಜನಾ ಸೇವಾ ಸವಲತ್ತುಗಳ ಮಾಹಿತಿ ಶಿಕ್ಷಣದಲ್ಲಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಕುಟುಂಬ ಯೋಜನೆಗಳನ್ನು ಪ್ರದರ್ಶಿಸುವ ಮಾಹಿತಿ ಶಿಕ್ಷಣ ಚೌಕ ತೆರೆಯುವುದು. ಸರಿಯಾದ ಸಮಯದಲ್ಲಿ ಸರಿಯಾದ ಗರ್ಭ ನಿರೋಧಕ ಬಳಕೆಯ ಆಯ್ಕೆ ಸ್ವಾತಂತ್ರ್ಯ ಅರ್ಹ ದಂಪತಿಗಳಿಗೆ ಬಿಡಬೇಕು. ಇದರಿಂದ ತಾಯಿ ಮರಣ ತಪ್ಪಿಸಬಹುದಾಗಿದೆ ಎಂದರು.
ಜಿಲ್ಲಾ ಕುಟುಂಬ ಯೋಜನೆ ಅನುಷ್ಠಾನಾಧಿಕಾರಿ ಡಾ. ರೇಖಾ ಮಾತನಾಡಿ, ಕುಟುಂಬ ಯೋಜನೆಗಳಲ್ಲಿ ಶಾಶ್ವತ ವಿಧಾನ ಮತ್ತು ತಾತ್ಕಾಲಿಕ ವಿಧಾನಗಳು ಇರುತ್ತದೆ. ಶಾಶ್ವತ ವಿಧಾನಗಳಲ್ಲಿ ಮಹಿಳೆಯರಿಗಾಗಿ ಟುಬೆಕ್ಟಮಿ ಲ್ಯಾಪೆÇ್ರೀಸ್ಕಪಿಕ್ ಶಸ್ತ್ರ ಚಿಕಿತ್ಸೆ ಉಚಿತವಾಗಿ ನೀಡಲಾಗುತ್ತದೆ. ಅದೇ ರೀತಿ ಪುರುಷರಿಗೆ ವ್ಯಾಸ್ಕಟಮಿ ಎನ್‍ಎಸ್‍ವಿ ಸೇವೆ ನೀಡಲಾಗುತ್ತದೆ. ತಾತ್ಕಾಲಿಕ ವಿಧಾನಗಳಲ್ಲಿ ನುಂಗುವ ಗುಳಿಗೆಗಳು ಛಾಯಾ ಮಾತ್ರೆ, ಮಾಲಾ ಎನ್ ಮಾತ್ರೆ, ವಂಕಿ ಐಯುಸಿಡಿ ಕಾಪರ್ ಟಿ ಅಂತರ ಗರ್ಭ ನಿರೋಧಕ ಚುಚ್ಚುಮದ್ದು ನೀಡಲಾಗುತ್ತದೆ. ಪುರುಷರಿಗೆ ನಿರೋದ್ ನೀಡಲಾಗುತ್ತದೆ. ಫಲಾನುಭವಿಗಳನ್ನು ಗುರುತಿಸಲು ಅರ್ಹ ದಂಪತಿಗಳ ದಾಖಲಾತಿ ಪರಿಶೀಲಿಸಿ ಕುಟುಂಬ ಯೋಜನೆಗಳ ಸೇವೆಗಳ ಅಗತ್ಯವಿರುವವರ ಪಟ್ಟಿ ತಯಾರಿಸಬೇಕು ಅವರ ಮುಂದೆ ಸೇವಾ ಸವಲತ್ತು ಪರಿಚಯಿಸಬೇಕು. ಅವರು ಮಾಡಿದ ಆಯ್ಕೆಯ ಸೇವೆಯನ್ನು ನೀಡಬೇಕು ಎಂದರು.
ತರಬೇತಿ ಕಾರ್ಯದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ವಿನಯ್ ರಾಜ್, ಡಾ.ಕವಿತಾ ಪ್ರಶಿಕ್ಷಣಾರ್ಥಿಗಳಿಗೆ ಮಾಹಿತಿ ಶಿಕ್ಷಣ ಒದಗಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಕುಟುಂಬ ಯೋಜನೆ ವಿಭಾಗದ ಭವ್ಯ, ಶ್ರೀದೇವಿ ಇದ್ದರು.