Breaking
Mon. Dec 23rd, 2024

ನಿರುದ್ಯೋಗಿ ಯುವಕರಿಗೆ ಉಜ್ವಲ ಭವಿಷ್ಯದ ಭರವಸೆ ಸರ್ಕಾರಿ ಹುದ್ದೆ ಆಕಾಂಕ್ಷಿಗಳ ಆಶಾಕಿರಣ “ಯುವನಿಧಿ”

ಚಿತ್ರದುರ್ಗ : ಕೆಪಿಎಸ್‍ಸಿ, ಯುಪಿಎಸ್‍ಸಿ, ಎಸ್‍ಎಸ್‍ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ, ಸರ್ಕಾರಿ ಹುದ್ದೆಗಳ ಆಯ್ಕೆಗೆ ಕನಸು ಕಂಡ ಪದವಿ ವಿದ್ಯಾರ್ಥಿಗಳಿಗೆ ಯುವನಿಧಿ ಯೋಜನೆ ಒತ್ತಾಸೆಯಾಗಿ ನಿಂತಿದೆ.

      ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಳ್ಳಲು ಮತ್ತು ಅರ್ಜಿ ಸಲ್ಲಿಸಲು ಹಣಕಾಸಿನ ಅವಶ್ಯಕತೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಿದ್ಧತೆಗಾಗಿ ಪುಸ್ತಕಗಳನ್ನು ಖರೀದಿಸಲು ಹಣಕಾಸಿನ ಅವಶ್ಯಕತೆ ಇದ್ದು, ರಾಜ್ಯ ಸರ್ಕಾರ ಯುವನಿಧಿ ಯೋಜನೆಯ ಮೂಲಕ ಒದಗಿಸುವ ಹಣ ಅಂತಹವರಿಗೆ ಸದುಪಯೋಗವಾಗುತ್ತಿದ್ದು, ಸರ್ಕಾರಿ ಹುದ್ದೆಗಳ ಕನಸು ಕಾಣುವ ವಿದ್ಯಾರ್ಥಿಗಳಿಗೆ ಯುವನಿಧಿ ಯೋಜನೆಯು ಒತ್ತಾಸೆಯಾಗಿ ನಿಂತಿರುವುದಂತೂ ಸ್ಪಷ್ಟ.

 ಪದವಿ ಪಡೆದ ತಕ್ಷಣವೇ ಖಾಸಗಿ ಉದ್ಯೋಗ ಅರಸಿ, ದೂರದ ಊರುಗಳಿಗೆ ತೆರಳಿ ಕೆಲಸ ಮಾಡುವ ಅನಿವಾರ್ಯತೆ ಹೊಂದಿದ್ದ ಬಡ ಕುಟುಂಬದ ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆ ಮಾಡಿರುವ ಯುವನಿಧಿ ಯೋಜನೆ, ಪೋಷಕರ ಆರ್ಥಿಕ ಹೊರೆಯೂ ಕಡಿಮೆ ಮಾಡಿದೆ. ಯುವನಿಧಿ ಯೋಜನೆಯ ಜಿಲ್ಲೆಯ ಫಲಾನುಭವಿಗಳು ಹೆಚ್ಚಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಧಾರವಾಡ, ಬೆಂಗಳೂರು, ಮೈಸೂರು, ಮಂಗಳೂರು ಜಿಲ್ಲೆ ಸೇರಿದಂತೆ ನೆರೆಯ ರಾಜ್ಯಗಳಲ್ಲಿಯೂ ತರಬೇತಿ ಪಡೆಯುತ್ತಿದ್ದಾರೆ.

ಯುವ ಜನತೆಯ ಉಜ್ವಲ ಭವಿಷ್ಯಕ್ಕಾಗಿ ರಾಜ್ಯ ಸರ್ಕಾರವು ಯುವನಿಧಿ ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಿದ್ದು, ನಿರುದ್ಯೋಗಿ ಯುವಕರಿಗೆ ಎರಡು ವರ್ಷಗಳವರೆಗೆ ಅಥವಾ ಫಲಾನುಭವಿಗೆ ಉದ್ಯೋಗ ಸಿಗುವವರೆಗೆ (ಯಾವುದು ಮೊದಲೋ) ನಿರುದ್ಯೋಗ ಭತ್ಯೆ ಒದಗಿಸುವ ಗುರಿ ಹೊಂದಿದೆ. ಯುವನಿಧಿ ಯೋಜನೆಯು ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು ರೂ.3000/- ಹಾಗೂ ಡಿಪ್ಲೋಮೊ ಪದವೀಧರರಿಗೆ ಪ್ರತಿ ತಿಂಗಳು ರೂ.1500/- ಒದಗಿಸುವ ಅಭೂತಪೂರ್ವ ಯೋಜನೆ ಇದಾಗಿದೆ.

ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವ ನಿಧಿ ಯೋಜನೆಗೆ ಕಳೆದ 2024ರ ಜನವರಿ 12ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್, ಕೆ.ಜೆ.ಜಾರ್ಜ್, ಮಧು ಬಂಗಾರಪ್ಪ ಸೇರಿದಂತೆ ಇನ್ನಿತರೆ ಸಚಿವರು ಚಾಲನೆ ನೀಡಿದ್ದರು.

ಯುವನಿಧಿ ಯೋಜನೆಯಡಿ 5.67 ಕೋಟಿ ಹಣ ಪಾವತಿ: ಯುವನಿಧಿ ಯೋಜನೆ ಜಾರಿಯಾದ 2024ರ ಜನವರಿಯಿಂದ ಅಕ್ಟೋಬರ್ ತಿಂಗಳವರೆಗೆ ಜಿಲ್ಲೆಯ 4362 ಫಲಾನುಭವಿಗಳ ಖಾತೆಗೆ ಒಟ್ಟು 5.68 ಕೋಟಿ ರೂ. ನಿರುದ್ಯೋಗಿ ಭತ್ಯೆ ಪಾವತಿಸಲಾಗಿದೆ.

ಜಿಲ್ಲೆಯಲ್ಲಿ ಪದವಿ ಪೂರ್ಣಗೊಳಿಸಿದ ಸಾಮಾನ್ಯ ವರ್ಗದ 2813 ಯುವಕ-ಯುವತಿಯರು, ಪರಿಶಿಷ್ಟ ಜಾತಿಯ 851 ಫಲಾನುಭವಿಗಳು ಹಾಗೂ ಪರಿಶಿಷ್ಟ ವರ್ಗದ 622 ಫಲಾನುಭವಿಗಳು ಸೇರಿದಂತೆ ಒಟ್ಟು 4286 ಫಲಾನುಭವಿಗಳು ಹಾಗೂ ಡಿಪ್ಲೋಮಾ ಪೂರ್ಣಗೊಳಿಸಿದ ಸಾಮಾನ್ಯ ವರ್ಗದ 48 ಫಲಾನುಭವಿಗಳು, ಪರಿಶಿಷ್ಟ ಜಾತಿಯ 21 ಫಲಾನುಭವಿಗಳು ಹಾಗೂ ಪರಿಶಿಷ್ಟ ಪಂಗಡದ 7 ಫಲಾನುಭವಿಗಳು ಸೇರಿದಂತೆ 76 ಫಲಾನುಭವಿಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 4362 ಫಲಾನುಭವಿಗಳು ಇದ್ದಾರೆ.

ಚಿತ್ರದುರ್ಗ ತಾಲ್ಲೂಕಿನಲ್ಲಿ ಅತಿ ಹೆಚ್ಚು 1177 ಫಲಾನುಭವಿಗಳಿದ್ದರೆ, ಚಳ್ಳಕೆರೆಯಲ್ಲಿ 1019 ಫಲಾನುಭವಿಗಳಿದ್ದಾರೆ. ಉಳಿದಂತೆ ಹಿರಿಯೂರು-687, ಹೊಳಲ್ಕೆರೆ-593, ಹೊಸದುರ್ಗ-532 ಹಾಗೂ ಮೊಳಕಾಲ್ಮೂರು ತಾಲ್ಲೂಕಿನಲ್ಲಿ 354 ಫಲಾನುಭವಿಗಳು ಯುವನಿಧಿ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ.

ಯುವನಿಧಿ ಗ್ಯಾರಂಟಿ ಯೋಜನೆ ಮೂಲಕ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ ರೂ.3000 ಹಾಗೂ ಡಿಪ್ಲೊಮಾ ವ್ಯಾಸಂಗ ಪೂರ್ಣಗೊಳಿಸಿದ ನಿರುದ್ಯೋಗಿಗಳಿಗೆ ಮಾಸಿಕ ರೂ.1500 ಸಿಗಲಿದ್ದು, ಈ ಯೋಜನೆಯಡಿ ನಿರುದ್ಯೋಗ ಭತ್ಯೆಯನ್ನು 2 ವರ್ಷಗಳ ಅವಧಿಗೆ ಮಾತ್ರ ನೀಡಲಾಗುತ್ತದೆ. ಪದವಿ ಹಾಗೂ ಡಿಪ್ಲೊಮಾ ವ್ಯಾಸಂಗ ಪೂರ್ಣಗೊಳಿಸಿ 180 ದಿನಗಳು ಆದನಂತರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರು. ಉನ್ನತ ಶಿಕ್ಷಣ ಹಾಗೂ ಉದ್ಯೋಗಕ್ಕೆ ಹೋದರೆ ಈ ಯೋಜನೆಗೆ ಅರ್ಹರಿರುವುದಿಲ್ಲ. ಯುವನಿಧಿಗೆ ನೋಂದಾಯಿಸಿಕೊಂಡಿರುವ ಫಲಾನುಭವಿಗಳು ತಾವು ವ್ಯಾಸಂಗ ಮಾಡುತ್ತಿಲ್ಲ, ಸ್ವಯಂ ಉದ್ಯೋಗಿಯಲ್ಲ, ನಿರುದ್ಯೋಗಿ ಎಂದು ಪ್ರತಿ ತಿಂಗಳು 25ನೇ ತಾರೀಕಿನೊಳಗೆ ಸ್ವಯಂ ಘೋಷಣೆ ಸಲ್ಲಿಸಬೇಕು ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.

 ಸದೃಢರಾಷ್ಟ್ರ ಹಾಗೂ ಸಭ್ಯ ಸಮಾಜ ನಿರ್ಮಿಸುವಲ್ಲಿ ಯುವ ಪೀಳಿಗೆಯ ಪಾತ್ರ ಬಹುಮುಖ್ಯವಾಗಿದ್ದು, ಯುವಕರು ನಿರುದ್ಯೋಗದ ಸುಳಿಗೆ ಸಿಲುಕದೆ, ಸಾಧನೆಯ ಶಿಖರವೇರಲು ರಾಜ್ಯ ಸರ್ಕಾರದ ಯುವನಿಧಿ ಯೋಜನೆ ಒದಗಿಸುವ ಹಣವು ಯುವ ಸಮೂಹಕ್ಕೆ ಆರ್ಥಿಕ ಬಲ ತುಂಬಿದೆ ಎನ್ನುತ್ತಾರೆ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿಯ ಅಧ್ಯಕ್ಷ ಶಿವಣ್ಣ ಅವರು.

 

ಕೋಟ್ :

ಯುವನಿಧಿ ಹಣದಿಂದ ಕೋಚಿಂಗ್: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸಕ್ತಿ ಇದ್ದು, ಇದಕ್ಕಾಗಿ ಆಂದ್ರಪ್ರದೇಶದ ಅನಂತಪುರ ನಗರದಲ್ಲಿ ಕೋಚಿಂಗ್ ಪಡೆಯುತ್ತಿದ್ದೇನೆ. ಯುವನಿಧಿಯಡಿ ಮಾರ್ಚ್-2024 ರಿಂದ ಪ್ರತಿ ಮಾಹೆ ರೂ.3000/- ಹಣ ಪಾವತಿಯಾಗುತ್ತಿದ್ದು, ಈ ಹಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗುವ ಪುಸ್ತಕಗಳನ್ನು ಖರೀಸಿದ್ದೇನೆ. ಸ್ಪರ್ಧಾತ್ಮಕ ಪರೀಕ್ಷೆ ಶುಲ್ಕವನ್ನು ಸಹ ಭರಿಸಿದ್ದು, ಯುವನಿಧಿ ಯೋಜನೆಯಿಂದ ಅನುಕೂಲವಾಗಿದೆ.

– ಎನ್.ಮಾಲಾ, ಬಿ.ಕಾಂ. ಪದವಿಧರೆ, ಹೊಸದುರ್ಗ.

Related Post

Leave a Reply

Your email address will not be published. Required fields are marked *