ಬೆಂ.ಗ್ರಾ. ಜಿಲ್ಲೆ, : ಸಮಾಜದಲ್ಲಿ ಯಾರೂ ಪರಿಪೂರ್ಣರಲ್ಲ ಎಲ್ಲರಲ್ಲೂ ಒಂದಲ್ಲ ಒಂದು ನ್ಯೂನತೆ ಇರುತ್ತದೆ. ವಿಶೇಷಚೇತನರಲ್ಲಿ ವಿಶೇಷ ಪ್ರತಿಭೆ ಹಾಗೂ ಜ್ಞಾನ ಇರುತ್ತದೆ, ಅದನ್ನು ಗುರುತಿಸಿ ಬೆಳೆಸುವ ಜತೆಗೆ ಪ್ರತಿಯೊಬ್ಬ ವಿಶೇಷಚೇತನರನ್ನು ಗೌರವ-ಪ್ರೀತಿಯಿಂದ ಕಾಣಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ. ಭೋಲಾ ಪಂಡಿತ್ ಅವರು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಇವರ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಛೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ, ವಿಶ್ವ ವಿಶೇಷಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರವೂ ವಿಶೇಷಚೇತನರಿಗಾಗಿ ಹಲವಾರು ಯೋಜನೆ-ಕಾನೂನುಗಳನ್ನು ಜಾರಿಗೆ ತಂದಿದೆ. 2016ರ ಕಾಯ್ದೆಯಡಿ ಉಚಿತವಾಗಿ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ವ್ಯಾಸಂಗದಲ್ಲಿ ಶೇ. 5 ರಷ್ಟು ಮೀಸಲಾತಿ ಜತೆಗೆ ಸರ್ಕಾರಿ ನೌಕರಿಯಲ್ಲೂ ಮೀಸಲಾತಿ ಕಲ್ಪಿಸಿದೆ ಎಂದರು.
ಪ್ರತಿ ಜಿಲ್ಲೆಯಲ್ಲೂ ಕಾನೂನು ಸೇವಾ ಪ್ರಾಧಿಕಾರ ಸ್ಥಾಪಿಸಿದ್ದು, ವಿಶೇಷಚೇತನರಿಗೆ ಉಚಿತವಾಗಿ ಕಾನೂನು ಸಲಹೆ ಹಾಗೂ ನೆರವು ಒದಗಿಸುತ್ತಿದೆ. ಸರ್ಕಾರಿ ಸೌಲಭ್ಯಗಳ ಬಗ್ಗೆ ವಿಕಲಚೇತನರಿಗೆ ಮಾಹಿತಿ ಕೊರತೆ ಇದೆ, ಅವರಿಗೆ ಸಂಪೂರ್ಣ ಮಾಹಿತಿ ತಿಳಿಸುವ ನಿಟ್ಟಿನಲ್ಲಿ ಸರ್ಕಾರಿ ನೌಕಕರು ಶ್ರಮಿಸಬೇಕು. ವಿಶೇಷಚೇತನರು ಅಂಗವೈಕಲ್ಯವನ್ನು ಮೆಟ್ಟಿ ನಿಂತು ತಮ್ಮಲ್ಲಿರುವ ವಿಶೇಷ ಸಾಮರ್ಥ್ಯವನ್ನು ಮತ್ತು ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು ಸಾಧಕರಾಗಬೇಕು ಎಂದು ಕರೆ ನೀಡಿದರು.
ಅಪರ ಜಿಲ್ಲಾಧಿಕಾರಿ ಅಮರೇಶ ಹೆಚ್ ಅವರು ಮಾತನಾಡಿ, ವಿಕಲಚೇತನರನ್ನು ಸಮಾಜದ ಮುನ್ನೆಲೆಗೆ ತರುವ ಉದ್ದೇಶದಿಂದ ವಿಕಲಚೇತನರ ದಿನಾಚರಣೆ ಆರಂಭಿಸಲಾಯಿತು. ಸಮಾಜದಲ್ಲಿ ಜನಸಂಖ್ಯೆಯ ಶೇ. 16 ರಷ್ಟು ವಿಶೇಷಚೇತನರು ಇದ್ದು, ಅವರ ಸಂರಕ್ಷಣೆಗೆ ಸರ್ಕಾರದ ಅನೇಕ ಯೋಜನೆಗಳು ಹಾಗೂ ಕಾನೂನುಗಳು ಜಾರಿಯಲ್ಲಿವೆ. ವಿಶೇಷಚೇತನರು ಯಾವುದಕ್ಕೂ ಕಡಿಮೆ ಇಲ್ಲ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮೀಣ ಪುನರ್ವಸತಿ ಯೋಜನೆಯಡಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಪುನರ್ವಸತಿ ಕಾರ್ಯಕರ್ತರನ್ನು ಹಾಗೂ ಜಿಲ್ಲೆಯಲ್ಲಿ ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ಸಂಘ ಸಂಸ್ಥೆ/ವ್ಯಕ್ತಿಗಳನ್ನು ಸನ್ಮಾನಿಸುವ ಮೂಲಕ ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲೆಯ ವಿಶೇಷಚೇತನರಿಗೆ ವಿವಿಧ ಸಾಧನ ಸಲಕರಣೆಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಆಲೂರು ದುದ್ದನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಯಲಕ್ಷ್ಮಮ್ಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಮುದ್ದಣ್ಣ ಎಂ, ಯುವಜನ ಸಹಾಯಕರಾದ ಸತೀಶ್, ದೇವನಹಳ್ಳಿ ಸಿಡಿಪಿಒ ಸುನೀತಾ ಸೇರಿದಂತೆ ಜಿಲ್ಲೆಯ ಎಲ್ಲಾ ವಿಕಲಚೇತನರು ಪ್ರಗತಿಪರ ಸಂಘಟನೆಗಳು, ಎಲ್ಲಾ ವಿವಿಧೋದ್ದೇಶ/ನಗರ/ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು, ತಾಲ್ಲೂಕು ಮಟ್ಟದ ವಿಕಲಚೇತನರ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.