ಚಿತ್ರದುರ್ಗ : ಮಕ್ಕಳಿಗೆ ನೀಡುವ ಲಸಿಕೆಗಳು ಎದೆಹಾಲಿನಷ್ಟೇ ಮಹತ್ವವಾಗಿವೆ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಪಂಡರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಜಾನುಕೊಂಡ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ, ಗರ್ಭೀಣಿಯರಿಗೆ ಲಸಿಕಾ ಅಧಿವೇಶನ ಕಾರ್ಯಕ್ರಮದಲ್ಲಿ ಲಸಿಕಾ ಅಧಿವೇಶನ ಮೇಲ್ವಿಚಾರಣೆ ನಡೆಸಿ, ತಾಯಂದಿರ ಸಭೆಯಲ್ಲಿ ಅವರು ಮಾತನಾಡಿದರು.
ತಪ್ಪದೇ ನಿಮ್ಮ ಮಕ್ಕಳಿಗೆ ಲಸಿಕೆಯನ್ನು ಹಾಕಿಸುವುದು ಮರೆಯಬೇಡಿ. 12 ಮಾರಕ ರೋಗಗಳ ವಿರುದ್ಧ ರೋಗ ನಿರೋಧಕ ಶಕ್ತಿ ನಿಮ್ಮ ಮಕ್ಕಳು ಪಡೆಯುತ್ತದೆ. ಕಾಲಕಾಲಕ್ಕೆ ತಾಯಿ ಕಾರ್ಡ್‍ನಲ್ಲಿ ನಮೂದಿಸಿದಂತೆ ನಿಮ್ಮ ಮಕ್ಕಳನ್ನು ಲಸಿಕಾ ಸತ್ರಕ್ಕೆ ಕರೆತನ್ನಿ ಲಸಿಕೆಯನ್ನು ಕೊಡಿಸಿ ಎಂದರು.
ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ತಾಯಿ ಕಾರ್ಡಿನಲ್ಲಿ ಗರ್ಭಿಣಿ ಆರೈಕೆ, ಮಕ್ಕಳ ಆರೈಕೆ, ಬಾಣಂತಿ ಆರೈಕೆ, ಗರ್ಭಿಣಿ ಸ್ತ್ರೀಯರಿದ್ದಾಗ ಯಾವ ಪೌಷ್ಠಿಕ ಆಹಾರ ಸೇವಿಸಬೇಕು. ಹೆರಿಗೆ ಸಮಯದಲ್ಲಿ ಯಾವ ರೀತಿ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಮಕ್ಕಳಿಗೆ ಕಾಲಕಾಲಕ್ಕೆ ಕೊಡಿಸಬೇಕಾದ ಲಸಿಕಾ ವಿವರ ಮತ್ತು ವೇಳಾಪಟ್ಟಿಯನ್ನು ವಿವರಿಸಲಾಗಿದೆ. ಎಲ್ಲಾ ತಾಯಂದಿರು ತಮ್ಮ ತಮ್ಮ ತಾಯಿ ಕಾರ್ಡ್‍ನ್ನು ಸಂಪೂರ್ಣವಾಗಿ ಓದಿಕೊಳ್ಳಿ ಎಂದರು.
ಹಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿ ಮಮತಾ ಮಾತನಾಡಿ, ರಾಷ್ಟ್ರೀಯ ಜಂತುಹುಳು ನಿವಾರಣ ದಿನದ ಪ್ರಯುಕ್ತ ಎಲ್ಲಾ ಅಂಗನವಾಡಿ ಶಾಲೆಗಳಲ್ಲಿ ಜಂತು ನಿವಾರಕ ಮಾತ್ರೆಯನ್ನ ಮಕ್ಕಳಿಗೆ ನುಂಗಿಸಲಾಗುತ್ತದೆ. ಆ ದಿನದಂದು ನಿಮ್ಮ ಮಕ್ಕಳನ್ನು ಗೈರು ಹಾಜರಾಗದಂತೆ ಶಾಲೆಗೆ ಮತ್ತು ಅಂಗನವಾಡಿಗೆ ಕಳಿಸಿಕೊಡಿ. ಕಾರಣಾಂತರಗಳಿಂದ ಬಿಟ್ಟುಹೋದ ಮಕ್ಕಳಿಗೆ ಇದೇ ಡಿ.16ರಂದು ಮಪ್ ಅಪ್ ರೌಂಡ್‍ನಲ್ಲಿ ನಿಮ್ಮ ಮನೆ ಬಾಗಿಲಿಗೆ ಬಂದು ಮಾತ್ರೆಗಳನ್ನು ನುಂಗಿಸಲಾಗುತ್ತದೆ. ತಪ್ಪದೇ 1 ರಿಂದ 19 ವರ್ಷದ ಒಳಗಿನ ಮಕ್ಕಳಿಗೆ ನುಂಗಿಸುವ ಜವಾಬ್ದಾರಿಯನ್ನು ತಾಯಂದಿರು, ಕುಟುಂಬಸ್ಥರು ಹೊಂದಿರಿ ಎಂದರು.
ಇದೇ ಸಂದರ್ಭದಲ್ಲಿ 12 ಮಕ್ಕಳಿಗೆ ವಿವಿಧ ಹಂತದ ಲಸಿಕೆಗಳನ್ನು ನೀಡಲಾಯಿತು. ಮತ್ತು ಮೂರು ಗರ್ಭಿಣಿಯರಿಗೆ ಟಿಡಿ ಲಸಿಕೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಲೋಕಮ್ಮ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಆಶಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೃಷ್ಣಪ್ಪ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ತಾಯಿ ಮಕ್ಕಳು ಹಾಜರಿದ್ದರು.