ಚಿತ್ರದುರ್ಗ : ನಗರದ ಸರ್ಕಾರಿ ಬಾಲ ಮಂದಿರದ ಮಕ್ಕಳಿಗೆ ಸೋಮವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಅವರು ತಮ್ಮ ಸ್ವಂತ ಹಣದಿಂದ ಕ್ರೀಡಾ ಸಾಮಗ್ರಿ ವಿತರಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಅವರು ಈಚೆಗೆ ನಗರದ ಸರ್ಕಾರಿ ಬಾಲಕರ ಬಾಲ ಮಂದಿರ ಮತ್ತು ಸರ್ಕಾರಿ ಬಾಲಕಿಯರ ಬಾಲ ಮಂದಿರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರತಿಯೊಬ್ಬ ಮಕ್ಕಳ ವೈಯಕ್ತಿಕ ಮಾಹಿತಿಯ ಸೂಕ್ತ ವಿವರ ಪರಿಶೀಲಿಸಿದ ನಂತರ ಮಕ್ಕಳ ವಿದ್ಯಾಭ್ಯಾಸದ ಕೊಠಡಿಗೆ ತೆರಳಿ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಮಕ್ಕಳು ಹಾಗೂ ಸಿಬ್ಬಂದಿಯವರೊಂದಿಗೆ ಸಂವಾದ ನಡೆಸಿದಾಗ, ಮಕ್ಕಳೆಲ್ಲರೂ ನಮಗೆ ಕ್ರೀಡಾ ಸಾಮಗ್ರಿಗಳ ಮತ್ತು ಆಟಿಕೆಗಳು ಕೊಡಿಸಿ ಕೊಡಿ ಎಂದು ಪ್ರಸ್ತಾಪ ಮಾಡಿದ್ದರು. ಅಗತ್ಯವಿರುವ ಕ್ರೀಡಾ ಸಾಮಗ್ರಿ ಸರಬರಾಜು ಮಾಡುವುದಾಗಿ ಜಿ.ಪಂ ಸಿಇಒ ಮಾತು ಕೊಟ್ಟಿದ್ದರು.
ಈ ಹಿನ್ನಲೆಯಲ್ಲಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸೋಮವಾರ ಜಿ.ಪಂ ಸಿಇಒ ಅವರು ತಮ್ಮ ಸ್ವಂತ ಹಣದಿಂದ ಬಾಲ ಮಂದಿರದ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳು ಮತ್ತು ಆಟಿಕೆಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಭಾರತಿ ಆರ್ ಬಣಕಾರ್, ಜಿಲ್ಲಾ ಮಕ್ಕಳ ಶಿಕ್ಷಣಾಧಿಕಾರಿ ಸವಿತಾ ಹಾಗೂ ಸಿಬ್ಬಂದಿಯವರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ತಿಮ್ಮಪ್ಪ, ಚಿತ್ರದುರ್ಗ ಉಪವಿಭಾಗ ಪೊಲೀಸ್ ಉಪಾಧೀಕ್ಷಕ ಪಿ.ಕೆ.ದಿನಕರ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಸರ್ಕಾರಿ ಬಾಲ ಮಂದಿರದ ಅಧೀಕ್ಷಕರಾದ ಜಿ.ವಿ.ಸಂತೋಷ, ಜ್ಯೋತಿ, ಕಾವೇರಮ್ಮ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.