ಚಿತ್ರದುರ್ಗ : ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಡಿಯಲ್ಲಿ ಬರುವ ಅಮ್ಮನಹಟ್ಟಿ ಗೊಲ್ಲರಟ್ಟಿಯಲ್ಲಿ ಮೌಢ್ಯ ಪದ್ಧತಿ ಮತ್ತು ಆಚರಣೆ ವಿರುದ್ಧ ಮಂಗಳವಾರ ಜಾಗೃತಿ ಮೂಡಿಸಲಾಯಿತು.
ಜೆಂಡರ್ಸ್ ಸ್ಪೆಷಲಿಸ್ಟ್ ಡಿ.ಗೀತಾ ಮಾತನಾಡಿ, ಮೌಢ್ಯ ಆಚರಣೆಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮತ್ತು ಅದರಿಂದ ಸಮಾಜದಲ್ಲಿ ನಡೆಯುತ್ತಿರುವ ಅನಿಷ್ಟ ಪದ್ಧತಿಗಳ ಬಗ್ಗೆ ಜಾಗೃತಿ ಮೂಡಿಸಿದರು.
ಗೊಲ್ಲರಹಟ್ಟಿಗಳಲ್ಲಿ ಹೆಣ್ಣು ಮಗಳು ಋತುಮತಿಯಾದರೆ ಮತ್ತು ಹೆರಿಗೆಯಾದರೆ ಆ ಊರಿನ ಪದ್ದತಿಯ ಪ್ರಕಾರ ಆ ಮಹಿಳೆಯರು ಮನೆ ತೊರೆದು ಕುಟೀರಗಳಲ್ಲಿ ವಾಸ್ತವ್ಯ ಹೂಡುವುದು ವಾಡಿಕೆ ಆಗಿರುತ್ತದೆ. ಮುಂದಿನ ದಿನಗಳಲ್ಲಿ ಈ ತರಹದ ತಪ್ಪುಗಳನ್ನು ಮತ್ತು ಕೆಟ್ಟ ಆಚರಣೆಗಳನ್ನು ಮಾಡದಂತೆ ಗ್ರಾಮದ ಮಹಿಳೆಯರಿಗೆ ಅರಿವು ಮೂಡಿಸಿದ ಅವರು, ಮುಂದಿನ ದಿನಗಳಲ್ಲಿ ಈ ತರಹ ಆಚರಣೆಗಳು ಕಂಡು ಬಂದಲ್ಲಿ ಮೇಲಾಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಪೆÇಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಈ ತರದ ಪದ್ಧತಿಗಳು ಗೊಲ್ಲರಹಟ್ಟಿಗಳಲ್ಲಿ ಕಂಡುಬಂದಲ್ಲಿ ಮಾಹಿತಿಯನ್ನು ತಿಳಿಸುವಂತೆ ಗ್ರಾಮದ ಮಹಿಳೆಯರಿಗೆ ಮಹಿಳಾ ಸಹಾಯವಾಣಿ ಸಂಖ್ಯೆ 181 ಮತ್ತು ಪೆÇಲೀಸ್ ಸಹಾಯವಾಣಿ 112 ಮತ್ತು ಮಕ್ಕಳ ಮೇಲೆ ಯಾವುದೇ ರೀತಿಯ ದೌರ್ಜನ್ಯ ನಡೆದಾಗ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಗೆ ಕರೆ ಮಾಡುವಂತೆ ತಿಳಿಸಲಾಯಿತು.
ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲಕಾರ್ಮಿಕರ ನಿಷೇಧ, ಬಾಲ ತಾಯಂದಿರು, ಪೋಕ್ಸೋ ಕಾಯಿದೆ ಸೇರಿದಂತೆ ಸುರಕ್ಷಿತ ಸ್ಪರ್ಶ, ಅಸುರಕ್ಷಿತ ಸ್ಪರ್ಶ, ಶಾಲೆಯನ್ನು ತೊರೆದರೆ ಆಗುವಂತಹ ಅನಾನುಕೂಲತೆಗಳು ಹಾಗೂ ತಮ್ಮ ತಮ್ಮ ಮನೆಯ ಮಕ್ಕಳಿಗೆ ಶಿಕ್ಷಣ ಕೊಡಿಸುವಂತೆ ಪೋಷಕರಿಗೆ ಶಿಕ್ಷಣದ ಮಹತ್ವ ಕುರಿತು ಮನವರಿಕೆ ಮಾಡಿಕೊಟ್ಟರು.
ಶಾಲೆಯ ಮುಖ್ಯ ಶಿಕ್ಷಕ ಉಮೇಶ್ ಮಾತನಾಡಿ, ಮುಂದಿನ ದಿನಗಳಲ್ಲಿ ಶಾಲೆಯ ಜಗುಲಿಯನ್ನು ಬಳಸಿಕೊಂಡರೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು. ಈ ಪದ್ಧತಿಗಳನ್ನು ಮಾಡುವುದು ಬಹಳ ತಪ್ಪು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಪ್ಪೇಸ್ವಾಮಿ, ಶಾಲೆಯ ಮುಖ್ಯ ಶಿಕ್ಷಕ ಉಮೇಶ್, ಶಿಕ್ಷಕಿ ಛಾಯ, ಅಂಗನವಾಡಿ ಮೇಲ್ವಿಚಾರಕಿ ಗೀತಾ, ಆಶಾ ಕಾರ್ಯಕರ್ತೆ ಜ್ಯೋತಿ, ಗ್ರಾಮದ ಹಿರಿಯ ಮುಖಂಡರಾದ ಪಾರ್ವತಮ್ಮ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮದ ಮಹಿಳೆಯರು ಇದ್ದರು.