Breaking
Sun. Dec 22nd, 2024

ಚಿತ್ರದುರ್ಗ: ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಸ್ವಚ್ಛತಾ ಕಾರ್ಯ….!

ಚಿತ್ರದುರ್ಗ : ಸ್ವಚ್ಛ ಭಾರತದ ಪರಿಕಲ್ಪನೆಯ ನನಸಿನ ಒಂದು ಹೆಜ್ಜೆಯಾಗಿ ಚಿತ್ರದುರ್ಗ ತಾಲ್ಲೂಕು ಪಂಚಾಯತಿ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ಕಚೇರಿ ಒಳ ಮತ್ತು ಹೊರ ಆವರಣದ ಸ್ವಚ್ಛತಾ ಕಾರ್ಯ ಮಾಡಿದರು.

ಚಿತ್ರದುರ್ಗ ನಗರದ ತಾಲ್ಲೂಕು ಪಂಚಾಯಿತಿಯಲ್ಲಿ ಶನಿವಾರ ಸ್ವಚ್ಛ ಭಾರತ ಯೋಜನೆಯಡಿ ಸ್ವಚ್ಛ ಶನಿವಾರ ಕಾರ್ಯಕ್ರಮ-ಒಂದು ಹೆಜ್ಜೆ ಸ್ವಚ್ಛತೆಯ ಕಡೆಗೆ ಅಭಿಯಾನದ ಅಂಗವಾಗಿ ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿಗಳು ಸತತ ಎರಡು ಗಂಟೆಗಳ ಕಾಲ ಸ್ವಚ್ಛತಾ ಕಾರ್ಯ ನಡೆಸಿದರು.

ಈ ವೇಳೆ ಮಾತನಾಡಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ರವಿಕುಮಾರ್, ಪ್ರಧಾನ ಮಂತ್ರಿಗಳ ಸ್ವಚ್ಛ ಭಾರತದ ಕನಸಿನ ಸಾಕಾರಕ್ಕೆ ನಾವೆಲ್ಲರೂ ಸ್ವಯಂ ಪ್ರೇರಿತವಾಗಿ ಭಾಗವಹಿಸಿ, ದೇಶದ ಸ್ವಚ್ಛತೆಗೆ ಕೈ ಜೋಡಿಸಲು ಪ್ರತಿ ಶನಿವಾರ ಒಂದು ಗಂಟೆ ಸ್ವಚ್ಛತಾ ಶ್ರಮದಾನಕ್ಕೆ ಮೀಸಲಿಡಬೇಕಿದೆ ಎಂದು ಹೇಳಿದರು.

ಈಗಾಗಲೇ ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಛ ಶನಿವಾರ ಚಾಲನೆಯಲ್ಲಿದ್ದು, ಸ್ವಚ್ಛತೆ ಮತ್ತು ಹೆಚ್ಚಿನ ಜಾಗೃತಿಗೆ ಗ್ರಾಮ ಪಂಚಾಯತಿ ಅಧಿಕಾರಿಗಳು ವಾರದ ಮೊದಲೇ ಒಂದು ಗ್ರಾಮವನ್ನು ಆಯ್ಕೆ ಮಾಡಿ, ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳೀಯ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರನ್ನು ಒಡಗೂಡಿಸಿಕೊಂಡು ಸ್ವಚ್ಛತೆಗೆ ಶ್ರಮದಾನ ಮಾಡುತ್ತಾ ಸ್ವಚ್ಛ ಭಾರತದ ಕನಸು ಸಾಕಾರಗೊಳಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ತಾಲ್ಲೂಕು ಲೆಕ್ಕಾಧಿಕಾರಿ ಕೆಂಚಪ್ಪ, ತಾಲ್ಲೂಕು ಯೋಜನಾಧಿಕಾರಿ ರಾಘವೇಂದ್ರ, ನರೇಗಾ ಮತ್ತು ಪಂಚಾಯತ್ ರಾಜ್ ಸಹಾಯಕ ನಿರ್ದೇಶಕರಾದ ಹೆಚ್.ಎರ್ರಿಸ್ವಾಮಿ, ಆರ್.ರೂಪಾಕುಮಾರಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಗುರುರಾಜ್, ವ್ಯವಸ್ಥಾಪಕ ಇರ್ಫಾನ್, ಅಧಿಕಾರಿಗಳಾದ ನಾಸಿರ್, ಮಹಾಲಕ್ಷ್ಮೀ, ತಾಂತ್ರಿಕ ಸಂಯೋಜಕ ಪ್ರತಾಪ್, ಎಂಐಎಸ್ ಉಮೇಶ್, ಐಇಸಿ ಸತ್ಯನಾರಾಯಣ ಸೇರಿದಂತೆ ನಗರಸಭೆ ಪೌರಕಾರ್ಮಿಕರು ಇದ್ದರು.

Related Post

Leave a Reply

Your email address will not be published. Required fields are marked *