Breaking
Tue. Jan 7th, 2025

ಹೊಸದುರ್ಗ: ನೀರಗುಂದ ಗೇಟ್ ಹತ್ತಿರ ಸ್ಥಾಪಿತವಾಗಿರುವ ಸೋಲಾರ್ ಪಾರ್ಕ್‍ಗೆ ಇಂದನ ಸಚಿವ ಕೆ.ಜೆ.ಜಾರ್ಜ್ ಭೇಟಿ….!

ಚಿತ್ರದುರ್ಗ : ರೈತರ ಕೃಷಿ ಮತ್ತು ನೀರಾವರಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಕುಸುಮ್ ಯೋಜನೆ ರೈತರಿಗೆ ವರದಾನವಾಗಲಿದೆ ಎಂದು ಇಂದನ ಸಚಿವರಾದ ಕೆ.ಜೆ.ಜಾರ್ಜ್ ಹೇಳಿದರು.

ಹೊಸದುರ್ಗ ತಾಲ್ಲೂಕಿನ ನೀರಗುಂದ ಗೇಟ್ ಹತ್ತಿರ ಕುಸುಮ್-ಸಿ ಯೋಜನೆಯಡಿ ಸ್ಥಾಪಿತವಾಗಿರುವ “ಸೋಲಾರ್ ಪಾರ್ಕ್”ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಕುಸುಮ್ ಬಿ ಮತ್ತು ಸಿ ಯೋಜನೆಗೆ ರಾಜ್ಯದಲ್ಲಿ ಈಗಾಗಲೇ ಚಾಲನೆ ನೀಡಲಾಗಿದ್ದು, ಈ ಯೋಜನೆಯಿಂದಾಗಿ ರೈತರಿಗೆ ತಮ್ಮ ಕೃಷಿ ಮತ್ತು ನೀರಾವರಿ ಪಂಪ್‍ಸೆಟ್‍ಗಳಿಗೆ ಹಗಲಿನಲ್ಲಿ 7 ಗಂಟೆಗಳ ಕಾಲ ನಿರಂತರ ಗುಣಮಟ್ಟದ ವಿದ್ಯುತ್ ದೊರೆಯಲಿದೆ ಎಂದು ಹೇಳಿದರು.

ಈಗಾಗಲೇ ರಾಜ್ಯಾದ್ಯಂತ 3 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ ಸ್ಥಳ ಗುರುತಿಸಲಾಗಿದ್ದು, ಮುಖ್ಯಮಂತ್ರಿಗಳ ಸೂಚನೆಯಂತೆ ಒಂದು ತಿಂಗಳಲ್ಲಿ 500 ರಿಂದ 600 ಮೆಗಾ ವ್ಯಾಟ್ ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಅಗತ್ಯ ತಯಾರಿಗಳು ನಡೆದಿವೆ. ವಿದ್ಯುತ್ ಉಪಕೇಂದ್ರಗಳು ಇರುವ ಸ್ಥಳಗಳ ಹತ್ತಿರ ಒಂದು ಮೆಗಾ ವ್ಯಾಟ್ ಉತ್ಪಾದನೆಗೆ ಕನಿಷ್ಟ ಸುಮಾರು 4 ಎಕರೆ ಜಮೀನು ಅಗತ್ಯವಾಗಿ ಬೇಕಾಗುತ್ತದೆ. ವಿದ್ಯುತ್ ಉಪಕೇಂದ್ರದ ಸಾಮಥ್ರ್ಯಕ್ಕೆ ಅನುಗುಣವಾಗಿ ಸೋಲಾರ್ ಪಾರ್ಕ್‍ಗಳಲ್ಲಿ ವಿದ್ಯುತ್ ಉತ್ಪಾದನೆ ಮಾಡಿ ಅಲ್ಲಿಯೇ ಪೂರೈಕೆ ಮಾಡಿ ಕೊಡಲಾಗುವುದು ಎಂದು ತಿಳಿಸಿದ ಅವರು, ಈಗಾಗಲೇ 1200 ಮೆಗಾ ವ್ಯಾಟ್ ಹಂಚಿಕೆಯಾಗಿದ್ದು, ಬಾಕಿ ಇರುವುದಕ್ಕೂ ಟೆಂಡರ್ ಕರೆಯಲಾಗಿದೆ ಎಂದು ಹೇಳಿದರು.

ರೈತರ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದ್ದು, ಈ ಯೋಜನೆಯಡಿ ಖಾಸಗಿಯವರು ಬಂಡವಾಳ ಹೂಡಿಕೆ ಮಾಡುತ್ತಾರೆ. ಸರ್ಕಾರದಿಂದ ಲಭ್ಯವಿರುವೆಡೆ ಸರ್ಕಾರಿ ಭೂಮಿ ನೀಡಲಾಗುವುದು, ಅಲ್ಲದೆ ಸೋಲಾರ್ ಘಟಕಗಳಲ್ಲಿ ಉತ್ಪಾದಿಸುವ ವಿದ್ಯುತ್ ಅನ್ನು ಸರ್ಕಾರವೇ ಗರಿಷ್ಟ 3.17 ರೂ. ನಂತೆ ಖರೀದಿ ಮಾಡಲಾಗುವುದು. ಸರ್ಕಾರಿ ಜಮೀನಿನಲ್ಲಿ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಪ್ರತಿ ಎಕರೆಗೆ ರೂ.25 ಸಾವಿರ ಹಣವನ್ನು ಖಾಸಗಿ ಏಜೆನ್ಸಿಯವರು ಪ್ರತಿ ವರ್ಷ ಪಾವತಿಸಬೇಕು, ಈ ಹಣವನ್ನು ಜಿಲ್ಲಾಧಿಕಾರಿಗಳ ಬಳಿ ಡಿಪಾಸಿಟ್ ಮಾಡಲಾಗುವುದು. ಆಯಾ ಕ್ಷೇತ್ರದ ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಆಯಾ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆ, ಅಂಗನವಾಡಿ, ಆಸ್ಪತ್ರೆ ಅಭಿವೃದ್ಧಿಗೆ ಅನುದಾನ ಬಳಕೆ ಮಾಡಬಹುದಾಗಿದೆ. ಈ ಯೋಜನೆಯಿಂದ ರೈತರಿಗೆ ರಾತ್ರಿಯ ಜೊತೆಗೆ ಹಗಲಿನಲ್ಲಿಯೂ ಉತ್ತಮ ವಿದ್ಯುತ್ ದೊರೆಯಲಿದ್ದು, ನಿದ್ದೆಗೆಟ್ಟು ನೀರಿಗಾಗಿ ಪರಿತಪಿಸುವುದು ತಪ್ಪಲಿದೆ ಎಂದರು.

       ಅಕ್ರಮ-ಸಕ್ರಮ ಯೋಜನೆಯಡಿ ರಾಜ್ಯದಲ್ಲಿ ಸುಮಾರು 4.5 ಲಕ್ಷ ಕೃಷಿ ಪಂಪ್‍ಸೆಟ್ ಗಳು ಇವೆ. ಈ ಪೈಕಿ ಈಗಾಗಲೆ 2.5 ಲಕ್ಷ ಪಂಪ್‍ಸೆಟ್‍ಗಳನ್ನು ಅಕ್ರಮ-ಸಕ್ರಮದಡಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಾಗಿದೆ, ಇನ್ನೂ 2 ಲಕ್ಷ ಪಂಪ್‍ಸೆಟ್‍ಗಳಿಗೆ ಸಂಪಕ್ ಒದಗಿಸಲು ಈಗಾಗಲೆ ಏಜೆನ್ಸಿ ಅವರನ್ನು ನಿಗದಿಪಡಿಸಿ ವಹಿಸಲಾಗಿದೆ. ಮುಂದಿನ ಒಂದೂವರೆ ವರ್ಷದೊಳಗೆ ಈ ಯೋಜನೆ ಸಂಪೂರ್ಣಗೊಳ್ಳುವ ವಿಶ್ವಾಸವಿದೆ ಎಂದರು.

  ತೋಟದ ಮನೆಗಳಿಗೆ ಹಗಲು ಹೊತ್ತು 03 ಫೇಸ್ ಹಾಗೂ ರಾತ್ರಿ ವೇಳೆ ಸಿಂಗಲ್ ಫೇಸ್ ವಿದ್ಯುತ್ ಕೊಡಲು ಈಗಾಗಲೆ ನಿರ್ಣಯ ಮಾಡಲಾಗಿದ್ದು, ಎಲ್ಲ ಗ್ರಾಮಗಳಿಗೆ ನಿರಂತರ ಜ್ಯೋತಿ ಯಡಿ ವಿದ್ಯುತ್ ಪೂರೈಸಲು ಟೆಂಡರ್ ಪ್ರಕ್ರಿಯೆ ನಡೆದಿದ್ದು, ಶೀಘ್ರ ಕಾರ್ಯಾದೇಶ ನೀಡಲಾಗುವುದು ಎಂದರು.

 ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ರಾಜ್ಯದ ಜನರಿಗೆ ಸೋಲಾರ್ ಪ್ಲಾಂಟ್ ಪರಿಚಯಿಸಿ, ಸುಮಾರು 3 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಗೆ ಅನುಮೋದನೆ ನೀಡಿದ್ದು, ಈಗಾಗಲೇ ಹಲವೆಡೆ ವಿದ್ಯುತ್ ಉತ್ಪಾದನೆಯಾಗುತ್ತಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಹಗಲಿನಲ್ಲಿ ನಿರಂತರ 7 ಗಂಟೆಗಳ ಕಾಲ ವಿದ್ಯುತ್ ದೊರೆಯಲಿದೆ. ನೀರಗುಂದ ಸೋಲಾರ್ ಪ್ಲಾಂಟ್‍ನಿಂದ ಈಗಾಗಲೇ ಕಳೆದ ಮೂರು ದಿನಗಳಿಂದ ವಿದ್ಯುತ್ ಸರಬರಾಜು ಆಗುತ್ತಿದ್ದು, ಈ ಭಾಗದ ರೈತರು ಸಂತಸ ವ್ಯಕ್ತಪಡಿಸಿದ್ದು, ಕ್ಷೇತ್ರದ ಉಳಿದ ವಿದ್ಯುತ್ ಉಪಕೇಂದ್ರಗಳ ಬಳಿಯೂ ಸೋಲಾರ್ ಪ್ಲಾಂಟ್ ಸ್ಥಾಪಿಸಲು ಇಂಧನ ಸಚಿವರು ಒಪ್ಪಿದ್ದಾರೆ. ಹೊಸದುರ್ಗ ತಾಲ್ಲೂಕು ಪದೇ ಪದೇ ಬರಕ್ಕೆ ತುತ್ತಾಗುವ ಪ್ರದೇಶವಾಗಿದ್ದು, ಈ ಭಾಗದಲ್ಲಿ ಯಾವುದೇ ನದಿಯ ನೀರಿನ ಮೂಲ ಲಭ್ಯವಿಲ್ಲ, ಹೀಗಾಗಿ ರೈತರು ಅಂತರ್ಜಲವನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಸುಮಾರು 70 ಸಾವಿರ ಪಂಪ್‍ಸೆಟ್‍ಗಳನ್ನು ಅಕ್ರಮ-ಸಕ್ರಮದಡಿ ಸಂಪರ್ಕ ಕಲ್ಪಿಸಿ, ಗುಣಮಟ್ಟದ ವಿದ್ಯುತ್ ನೀಡಬೇಕಿದೆ. ಇದರ ಜೊತೆಗೆ ಭದ್ರಾ ಮೇಲ್ದಂಡೆ ಯೋಜನೆಯಡಿ 1.35 ಲಕ್ಷ ಎಕರೆಗೆ ನೀರು ಒದಗಿಸಲಾಗುವುದು ಹಾಗೂ ಭದ್ರಾ ಜಲಾಶಯದಿಂದ 800 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಪೂರೈಕೆ ಯೋಜನೆ ಜಾರಿಯಾಗುತ್ತಿದ್ದು, ಇವೆಲ್ಲವಕ್ಕೂ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ, ಇದಕ್ಕಾಗಿ ಕ್ಷೇತ್ರ ವ್ಯಾಪ್ತಿಯಲ್ಲಿ 04 ವಿದ್ಯುತ್ ಸಬ್ ಸ್ಟೇಷನ್ ಮಂಜೂರು ಮಾಡುವಂತೆ ಇಂಧನ ಸಚಿವರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು, ಭೂಮಿಯನ್ನು ಗುರುತಿಸಿಕೊಟ್ಟರೆ, ಆದ್ಯತೆ ಮೇರೆಗೆ ವಿದ್ಯುತ್ ಸ್ಟೇಷನ್‍ಗಳನ್ನು ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ, ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಗ್ಯಾರಂಟಿ ಯೋಜನಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಶಿವಣ್ಣ ಸೇರಿದಂತೆ ಇಂಧನ ಇಲಾಖೆಯ ಅಧಿಕಾರಿಗಳು, ರೈತರು ಇದ್ದರು.

Related Post

Leave a Reply

Your email address will not be published. Required fields are marked *