Breaking
Sun. Jan 5th, 2025

ವಿಕಲಚೇತನರನ್ನು ಬ್ಯಾಂಕಿಗೆ ಅಲೆದಾಡಿಸಿದರೆ ದೂರು ನೀಡಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ….!

ಚಿತ್ರದುರ್ಗ : ಸರ್ಕಾರದ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ ಆಯ್ಕೆಯಾದ ವಿಕಲಚೇತನ ಫಲಾನುಭವಿಗಳನ್ನು ಬ್ಯಾಂಕ್‍ಗಳು ವಿನಾಕಾರಣ ಅಲೆದಾಡಿಸಿದರೆ ತಕ್ಷಣ ವಿಕಲಚೇತನರ ಕುಂದುಕೊರತೆ ಕೋಶಕ್ಕೆ ದೂರು ನೀಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.

      ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಕಲಚೇತನ ಫಲಾನುಭವಿಗಳಿಗೆ ಸಾಲ-ಸೌಲಭ್ಯಕ್ಕಾಗಿ ಅಲೆದಾಡಿಸುವ ಸಂಬಂಧಪಟ್ಟ ಬ್ಯಾಂಕ್‍ಗಳಿಗೆ ಪ್ರತ್ಯೇಕವಾಗಿ ನಿರ್ದೇಶನ ನೀಡಬೇಕು. ಸಾಲ-ಸೌಲಭ್ಯಕ್ಕಾಗಿ ದಾಖಲಾಗುವ ದೂರುಗಳ ಬಗ್ಗೆ ಮುಂದಿನ ಸಭೆಯಲ್ಲಿ ಅನುಪಾಲನಾ ವರದಿ ಮಂಡಿಸುವಂತೆ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗೆ ಸೂಚನೆ ನೀಡಿದರು.

 ವಿಕಲಚೇತನರಿಗೆ ಸಮಾಜದಲ್ಲಿ ಸಮಾನ ಅವಕಾಶ ಕಲ್ಪಿಸಿ ಸರ್ವತೋಮುಖ ಸಬಲೀಕರಣಗೊಳಿಸುವುದು ಹಾಗೂ ಅವರ ಹಕ್ಕುಗಳನ್ನು ಸಂರಕ್ಷಣೆ ಮಾಡಿ ಸಮಾಜದ ಮುಖ್ಯವಾಹಿನಿಗೆ ತರುವುದು ಹಾಗೂ ವಿಕಲಚೇತನರ ಘನತೆ ಮತ್ತು ಗೌರವ ಕಾಪಾಡಬೇಕು ಎಂದು ತಿಳಿಸಿದ ಅವರು, ವಿವಿಧ ಇಲಾಖೆಗಳಡಿ ವಿಕಲಚೇತನರಿಗೆ ದೊರೆಯುವ ಸೌಲಭ್ಯಗಳು, ಈ ಸೌಲಭ್ಯಗಳು ವಿಕಲಚೇತನರಿಗೆ ಸಮರ್ಪಕವಾಗಿ ತಲುಪುತ್ತಿದೆಯೋ, ಇಲ್ಲವೋ ಹಾಗೂ ಮೀಸಲಾತಿ ಅನುಷ್ಠಾನದ ಕುರಿತು ಮಾಹಿತಿ ನೀಡಬೇಕು. ಇದರಿಂದ ವಿಕಲಚೇತನರ ಕುಂದುಕೊರತೆ ಬಗೆಹರಿಸಬಹುದು. ವಿಕಲಚೇತನರ ಕುಂದುಕೊರತೆ ನಿವಾರಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳೂ ಸಭೆ ಆಯೋಜಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಾಕೀತು ಮಾಡಿದರು.

ಜಿಲ್ಲೆಯಲ್ಲಿ 35,971 ವಿಕಲಚೇತನರು:

********** 2011ರ ಜನಗಣತಿಯ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 35,971 ಜನ ವಿಕಲಚೇತನರು ಇದ್ದಾರೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಸಭೆಗೆ ಮಾಹಿತಿ ನೀಡಿದರು.

 ಜಿಲ್ಲೆಯಲ್ಲಿ ದೃಷ್ಠಿದೋಶವುಳ್ಳ 6,196, ಶ್ರವಣದೋಷ-6,096, ಮಾತಿನ ದೋಷ-2,880, ಮಾನಸಿಕ ಅಸ್ವಸ್ಥರು-415, ಬುದ್ದಿಮಾಂದ್ಯರು-2,461, ದೈಹಿಕ ವಿಕಲಚೇತನರು-8,373, ಬಹುವಿಧ ವಿಕಲಚೇತನರು-2,961 ಹಾಗೂ ಇತರೆ ವಿಕಲಚೇತನರು 6,589 ಸೇರಿದಂತೆ ಒಟ್ಟು 35,971 ವಿಕಲಚೇತನರು ಇದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಸೌಲಭ್ಯಗಳನ್ನು ಒದಗಿಸುವ ಮೂಲಕ ಮುಖ್ಯವಾಹಿನಿಗೆ ಬರುವಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ ಅವರು, ಜಿಲ್ಲೆಯಲ್ಲಿ 33,075 ವಿಕಲಚೇತನರಿಗೆ ಯುಡಿಐಡಿ ಗುರುತಿನ ಕಾರ್ಡ್ ವಿತರಣೆ ಮಾಡಲಾಗಿದೆ ಎಂದರು.

ಗ್ರಾಮೀಣ ಮತ್ತು ನಗರ, ತಾಲ್ಲೂಕು ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿ.ಆರ್.ಡಬ್ಲ್ಯೂ, ಯು.ಆರ್.ಡಬ್ಲ್ಯೂ, ಎಂ.ಆರ್.ಡಬ್ಲ್ಯೂ ಅವರ ಪ್ರತ್ಯೇಕ ಸಭೆ ಆಯೋಜಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಗ್ರಾಮ ಒನ್ ಸೆಂಟರ್‍ಗಳಲ್ಲಿ ಉಚಿತ ಬಸ್‍ಪಾಸ್ ನವೀಕರಣ ಅರ್ಜಿ ಸಲ್ಲಿಕೆ:

********** ವಿಕಲಚೇತನರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ 100 ಕಿ.ಮೀ. ವ್ಯಾಪ್ತಿಯಲ್ಲಿ ಪ್ರಯಾಣಿಸಲು ರಿಯಾಯಿತಿ ದರದಲ್ಲಿ ಬಸ್‍ಪಾಸ್ ನೀಡಲಾಗುತ್ತಿದೆ. ಈ ಬಸ್‍ಪಾಸ್ ಅವಧಿ ಕಳೆದ ಡಿಸೆಂಬರ್‍ಗೆ ಅಂತ್ಯವಾಗಿದ್ದು, ಬಸ್‍ಪಾಸ್ ನವೀಕರಣಕ್ಕೆ ವಿಕಲಚೇತನರು ಸೇವಾ ಸಿಂಧು ತಂತ್ರಾಶದಲ್ಲಿ ಅರ್ಜಿ ಸಲ್ಲಿಸಬೇಕು. ಈ ವೇಳೆ ಖಾಸಗಿ ಕಂಪ್ಯೂಟರ್ ಸೆಂಟರ್‍ಗಳಲ್ಲಿ ನವೀಕರಣ ಅರ್ಜಿ ಸಲ್ಲಿಸಲು ರೂ.100 ವರೆಗೆ ಶುಲ್ಕ ವಿಧಿಸುತ್ತಿದ್ದಾರೆ. ಇದರಿಂದ ವಿಕಲಚೇತನರಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ ಎಂದು ಸಭೆಯಲ್ಲಿ ವಿಕಲಚೇತನರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಗ್ರಾಮ ಒನ್ ಸೆಂಟರ್‍ಗಳಲ್ಲಿ ಉಚಿತವಾಗಿ ಬಸ್‍ಪಾಸ್ ನವೀಕರಣ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲು ನಿರ್ದೇಶನ ನೀಡುವುದಾಗಿ ತಿಳಿಸಿದರು.

ಶಕ್ತಿ ಯೋಜನೆ ಮಾದರಿಯಲ್ಲಿ ವಿಕಲಚೇತನರಿಗೂ ರಾಜ್ಯಾದ್ಯಂತ ಉಚಿತ ಪ್ರಯಾಣ ಅವಕಾಶ ನೀಡುವ ಪ್ರಸ್ತಾವನೆ ರಾಜ್ಯ ಸರ್ಕಾರದ ಮುಂದಿದೆ ಎಂದು ತಿಳಿದುಬಂದಿದೆ ಎಂಬುದಾಗಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ವೈಶಾಲಿ.ಜೆ ಸಭೆಯಲ್ಲಿ ಮಾಹಿತಿ ನೀಡಿದರು.

ಪುರ್ನವಸತಿ ಕೇಂದ್ರದ ಖಾಲಿ ಹುದ್ದೆಗಳ ಭರ್ತಿಗೆ ನಿರ್ದೇಶನ:

*************

ಜಿಲ್ಲೆಯ ವಿಕಲಚೇತನರ ಪುನರ್ವಸತಿ ಕೇಂದ್ರ ಸಮರ್ಪಕವಾಗಿ ಕಾರ್ಯನಿರ್ವಹಿಸುವ ದೃಷ್ಠಿಯಿಂದ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಜಿಲ್ಲಾ ವಿಕಲಚೇತನರ ಕಲ್ಯಾಣಧಿಕಾರಿಗೆ ನಿರ್ದೇಶನ ನೀಡಿದರು. ಖಾಲಿ ಇರುವ ಹುದ್ದೆಗಳು ಭರ್ತಿಯಾಗುವವರೆಗೂ ಅಗತ್ಯ ಇರುವ ವೈದ್ಯರು ಹಾಗೂ ಇತರೆ ವೈದ್ಯಕೀಯ ಸಿಬ್ಬಂದಿಯ ಸೇವೆಯನ್ನು ಜಿಲ್ಲಾ ಆಸ್ಪತ್ರೆಯಿಂದ ಪಡೆದುಕೊಳ್ಳುವಂತೆ ಸೂಚಿಸಿದರು. ಖಾಲಿ ಇರುವ ತಜ್ಞ ವೈದ್ಯರು ಹಾಗೂ ಇತರೆ ವೈದ್ಯಕೀಯ ಸಿಬ್ಬಂದಿಗೆ ನೇಮಕಾತಿ ಕುರಿತು ವೈದ್ಯಕೀಯ ಕಾಲೇಜುಗಳಿಗೆ ಮಾಹಿತಿ ನೀಡಿ, ಪತ್ರಿಕೆಗಳಲ್ಲಿ ವ್ಯಾಪಕ ಪ್ರಚಾರ ನೀಡುವಂತೆ ಜಿ.ಪಂ. ಸಿಇಓ ಎಸ್.ಜೆ.ಸೋಮಶೇಖರ್ ಹೇಳಿದರು.  

ಹಗಲು ಯೋಗಕ್ಷೇಮ ಕೇಂದ್ರ ವಿಸ್ತರಣೆಗೆ ಕ್ರಮ:

*************ಹಿರಿಯ ನಾಗರಿಕರಿಗೆ ಆರೋಗ್ಯ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವ ದೃಷ್ಠಿಯಿಂದ ರಾಜ್ಯ ಸರ್ಕಾರದ ಅನುದಾನದಡಿ ಜಿಲ್ಲೆಯ ಹಿರಿಯೂರು ನಗರದಲ್ಲಿ ಹಗಲು ಯೋಗಕ್ಷೇಮ ಕೇಂದ್ರವನ್ನು ಶ್ರೀ ಸಿದ್ಧೇಶ್ವರ ರೂರಲ್ ಡೆವೆಲಪ್‍ಮೆಂಟ್ ಸೊಸೈಟಿ ವತಿಯಿಂದ ತೆರೆಯಲಾಗಿದೆ. ಈ ಕೇಂದ್ರದಲ್ಲಿ ಹಿರಿಯ ನಾಗರಿಕರಿಗೆ ಲಘು ಉಪಹಾರ, ಮನೋರಂಜನೆ ಕಾರ್ಯಕ್ರಮ, ಸುದ್ದಿ ಪತ್ರಿಕೆಗಳನ್ನು ಒದಗಿಸಲಾಗುತ್ತದೆ. ಇದರೊಂದಿಗೆ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ವೈಶಾಲಿ ಜೆ. ಸಭೆಯಲ್ಲಿ ತಿಳಿಸಿದರು.

ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿಯೂ ಹಗಲು ಯೋಗಕ್ಷೇಮ ಕೇಂದ್ರಗಳನ್ನು ವಿಸ್ತರಿಸುವ ಸಾಧ್ಯತೆ ಕುರಿತು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.

      ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ.ಕಾಳೇಸಿಂಘೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಘದ ಪ್ರತಿನಿಧಿಗಳು ಇದ್ದರು.

Related Post

Leave a Reply

Your email address will not be published. Required fields are marked *